Kundapra.com ಕುಂದಾಪ್ರ ಡಾಟ್ ಕಾಂ

ಜಗತ್ತು ಕಾಸು ಮಾಡುವ ಕಸರತ್ತಿನಲ್ಲಿ ತೊಡಗಿದೆ: ನಾರಾಯಣಿ ದಾಮೋದರ್

ಕುಂದಾಪುರ: ಸೌಮ್ಯ, ಸಜ್ಜನ, ಪ್ರಾಮಾಣಿಕರೆಂದು ಕರೆಸಿಕೊಳ್ಳುತ್ತಿದ್ದ ಕರ್ನಾಟಕದ ಜನ ಬರುಬರುತ್ತಾ ಅಸಹನೆ, ಮೇಲಾಟದ ಪ್ರತೀಕವಾಗುತ್ತಿದ್ದಾರೆಯೇ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ. ಭಾಷಾಭಿಮಾನ, ಪ್ರಾಂತ್ಯಾಭಿಮಾನ ಮರೆತುಹೋಗಿ, ಹಣಗಳಿಸುವುದು ಹೇಗೆಂಬ ಯೋಚನೆ ಹೆಚ್ಚಿದೆ ಎಂದು ಮಂಗಳೂರು ಆಕಾಶವಾಣಿ ನಿವೃತ್ತ ಉದ್ಘೋಷಕಿ ನಾರಾಯಣಿ ದಾಮೋದರ್ ಹೇಳಿದರು.

ಅವರು ಕನ್ನಡ ವೇದಿಕೆ ಕುಂದಾಪುರದ ಆಶ್ರಯದಲ್ಲಿ ನಡೆದ ಕನ್ನಡ ಡಿಂಡಿಮದ ಕೊನೆಯ ವಾರದ ಕಾರ್ಯಕ್ರಮದಲ್ಲಿ ಕನ್ನಡವೆನೆ ಮನ ಕುಣಿಯುವುದು ಎಂಬ ವಿಷಯವಾಗಿ ಮಾತನಾಡುತ್ತಾ ಈ ಜಗತ್ತಿನಲ್ಲಿ ಕಾಸು ಮಾಡುವ ಕಸರತ್ತು ಬಿಟ್ಟರೆ ಬೇರೇನೂ ಕಾಣಿಸದು. ನಮ್ಮಲ್ಲಿ ಭಾವೈಕ್ಯತೆ ಮರೆಯಾಗಿ ಹೋಗಿದೆ. ಗುಣ ಮೌಲ್ಯಗಳೆನಿಸಿದ ಪ್ರೀತಿ, ಕರುಣೆ, ನಮ್ರತೆ ಇವೆಲ್ಲಾ ಕಾಲಕ್ಕೆ ತಕ್ಕಂತೆ ಬಿಕರಿಯಾಗುವ ವಸ್ತುಗಳಾಗಿಬಿಟ್ಟವೆ. ಕೆಲವರು ಸೇವೆಯನ್ನೇ ಕಸುಬಾಗಿಸಿಕೊಂಡು ಜೀವನಕ್ಕೆ ದಾರಿ ಮಾಡಿಕೊಂಡಂತೆ ಕಾಣಿಸುತ್ತದೆ ಎಂದರು. ಶಿಕ್ಷಣ ಕ್ಷೇತ್ರ ಗೊಂದಲದ ಗೂಡಾಗಿದೆ. ಪ್ರಾಥಮಿಕ ಶಿಕ್ಷಣ ಎನ್ನುವುದು ದಿಕ್ಕು ದೆಸೆ ಇಲ್ಲದೇ ಸೊರಗಿದೆ. ಸರಕಾರ ಶಿಕ್ಷಣದ ಗುಣಮಟ್ಟದ ಬಗ್ಗೆ ಗಮನ ಹರಿಸುವುದನ್ನು ಬಿಟ್ಟು ಶಿಕ್ಷಕರ ಸಂಖ್ಯೆ ಹೆಚ್ಚಿಸಿದೆ ಎಂದರು

ಮಯೂರ ಪ್ರಶಸ್ತಿ ಪುರಸ್ಕೃತ, ದುಬೈನ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ನಮ್ಮ ಮಕ್ಕಳಲ್ಲಿ ಕನ್ನಡ ಭಾಷಾಭಿಮಾನವನ್ನು ಬೆಳೆಸುವಲ್ಲಿ ಪೋಷಕರು ಹೆಚ್ಚಿನ ಆಸಕ್ತಿಯನ್ನು ವಹಿಸಬೇಕಾಗಿದೆ. ಕನ್ನಡವನ್ನು ಬೆಳೆಸಿ ಉಳಿಸುವಲ್ಲಿ ಕೊಲ್ಲಿ ರಾಷ್ಟ್ರದಲ್ಲಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಬಗ್ಗೆ ಪ್ರಾಸ್ತಾಪಿಸಿದ ಅವರು ಕನ್ನಡ ಕಟ್ಟುವ ಕಾಯಕದಲ್ಲಿ ಕುಂದಾಪುರದಲ್ಲಿ ತೊಡಗಿಕೊಂಡ ಕನ್ನಡ ವೇದಿಕೆಯ ಕಾರ್ಯ ಸ್ತುತ್ಯರ್ಹ ಎಂದರು. ಕನ್ನಡವೆನೆ ಮನ ಕುಣಿಯುವುದು ಎನ್ನುವ ವಿಷಯವಾಗಿ ನ್ಯಾಯವಾದಿ ವೈ.ಶರತ್ ಕುಮಾರ್ ಶೆಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಯದ್ಯಮಿ ದಾಂಡೇಲಿಯ ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.

ಪ್ರಗತಿಪರ ಕೃಷಿಕ ಚಾವಡಿಮನೆ ಚಂದ್ರಣ್ಣ ಕಾಳಾವರ ಅವರಿಗೆ ನುಡಿ ಗೌರವ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಮಯೂರ ಪ್ರಶಸ್ತಿ ಪುರಸ್ಕೃತ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಕನ್ನಡವೇದಿಕೆಯ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ದಿನಕರ ಆರ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ ಕರಬ ಪರಿಚಯಿಸಿದರು.

Exit mobile version