ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಿದ್ದಾಪುರ ಪೇಟೆಯೂ ಸೇರಿದಂತೆ ಮೂರು ದಿನಗಳಿಂದ ಸುತ್ತಾಡುತ್ತಾ ಭಯ ಹುಟ್ಟಿಸಿದ್ದ ಒಂಟಿ ಸಲಗ ಕೊನೆಗೂ ಸೆರೆ ಸಿಕ್ಕಿದೆ. ಆದರೆ ಮೂರು ದಿನಗಳಿಂದ ತಾಲೂಕು ಆಡಳಿತವನ್ನೇ ನಡುಗಿಸಿತ್ತು. ಮುಂಜಾಗ್ರತೆಯಿಂದ ಶಾಲೆಗಳಿಗೂ ರಜೆ ನೀಡಲಾಗಿತ್ತು. ಸಂಜೆ 6.30 ರ ಮುಚ್ಚಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಆನೆಯನ್ನು ಹಿಡಿಯಲು ಚಿಕ್ಕಮಗಳೂರು ಎಲಿಫೆಂಟ್ ಟಾಸ್ಕ್ ಪೋರ್ಸ್ (ಇಟಿಎಫ್)ನ ತಂಡದೊಂದಿಗೆ ಕುದುರೆಮುಖ ವನ್ಯಜೀವಿ ವಿಭಾಗ, ಕುಂದಾಪುರ ಪ್ರಾದೇಶಿಕ ಅರಣ್ಯ ವಿಭಾಗ, ಸಿದ್ದಾಪುರ, ಅಮಾಸೆಬೈಲು, ನಗರ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು, ಶಂಕರನಾರಾಯಣ ವಲಯ ಅರಣ್ಯಾಧಿಕಾರಿಗಳ ತಂಡದ ಒಟ್ಟಾರೆ 150 ಮಂದಿ ಅಧಿಕಾರಿಗಳು, ಸಿಬಂದಿ ಹರಸಾಹಸ ಪಟ್ಟರು.
ನಿರಂತರ ಕಾರ್ಯಾಚರಣೆ:
ಆನೆಯ ಕತ್ತಿಗೆ ಅಳವಡಿಸಿರುವ ರೇಡಿಯೋ ಕಾಲರ್ ಐಡಿಯ ಮೂಲಕ ಚಲನವಲನದ ಬಗ್ಗೆ ನಿಗಾ ಇರಿಸಲಾಗಿದ್ದು, ಅದರಂತೆ ಗುರುವಾರ ಮಧ್ಯಾಹ್ನದಿಂದಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದರು. ಸಂಜೆ 5.30ಕ್ಕೆ ಆನೆಗೆ ಪಶುವೈದ್ಯರಾದ ಸಕ್ರೆಬೈಲಿನ ಡಾ| ಕಲ್ಲಪ್ಪ, ಮಂಗಳೂರಿನ ಡಾ| ಯಶಸ್ವಿ ಹಾಗೂ ನಾಗರಹೊಳೆಯ ಡಾ| ರಮೇಶ್ ಆನೆಗೆ ಅರಿವಳಿಕೆ ನೀಡಿದರು. ಅದಾದ 1 ಗಂಟೆಯೊಳಗೆ ಆನೆಯನ್ನು ಸಕ್ರಬೈಲಿನಿಂದ ಆಗಮಿಸಿದ ಮೂರು ಸಾಕಾನೆಗಳ ನೆರವಿನಿಂದ ಹಿಡಿಯಲಾಯಿತು. ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ನಾಗರಹೊಳೆಯ ಮತ್ತಿಗೋಡಿ ನಿಂದಲೂ ಹೆಚ್ಚುವರಿಯಾಗಿ 3 ಆನೆಗಳನ್ನು ಕರೆಸಲಾಗಿತ್ತು.

ಸಕ್ರೆಬೈಲಿಗೆ ರವಾನೆ:
ಸಾಮಾನ್ಯವಾಗಿ ಮೊದಲ ಬಾರಿಗೆ ಸೆರೆ ಸಿಕ್ಕ ಕಾಡಾನೆಗಳನ್ನು ಮತ್ತೆ ಕಾಡಿಗೆ ರೇಡಿಯೋ ಕಾಲರ್ ಅಳವಡಿಸಿ ಬಿಡಲಾಗುತ್ತದೆ. ಅವು ಮತ್ತೊಮ್ಮೆ ನಾಡಿನ ಕಡೆಗೆ ಬಂದು ಅವಾಂತರ ಸೃಷ್ಟಿಸಿದರೆ ಸೆರೆಹಿಡಿದು ಕುಶಾಲನಗರದ ದುಬಾರೆ, ಸಕ್ರೆಬೈಲು, ನಾಗರಹೊಳೆ ಹಾಗೂ ಬಂಡೀಪುರದ ಶಿಬಿರಗಳ ಪೈಕಿ ಒಂದು ಕಡೆ ಬಿಡಲಾಗುತ್ತದೆ. ಈ ಆನೆಯನ್ನು ಹಿಂದೆ ಹಾಸನದಲ್ಲಿ ಹಿಡಿದು ಬಿಡಲಾಗಿದ್ದು, ಈಗ ಮತ್ತೆ ಸಿಕ್ಕಿರುವುದರಿಂದ ಸಕ್ರೆಬೈಲಿನ ಆನೆ ಶಿಬಿರಕ್ಕೆ ಕೊಂಡೊಯ್ಯಲಾಗಿದೆ
ಶಾಲೆ, ಕಾಲೇಜು ಆರಂಭ:
ಕಾಡಾನೆ ಸಂಚಾರದ ಹಿನ್ನೆಲೆಯಲ್ಲಿ ಬುಧವಾರ ಹಾಗೂ ಗುರುವಾರ ಸಿದ್ದಾಪುರ, ಹೊಸಂಗಡಿ, ಯಡಮೊಗೆ, ಕಮಲಶಿಲೆ ಗ್ರಾಮಗಳ ಶಾಲೆ, ಕಾಲೇಜು, ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿತ್ತು. ಜೂ. 6 ರಿಂದ ಮತ್ತೆ ಶಾಲೆ, ಕಾಲೇಜುಗಳು, ಅಂಗನವಾಡಿ ಕೇಂದ್ರಗಳು ಕಾರ್ಯಾಚರಿಸಲಿವೆ.
ಎರಡು ಮೂರು ದಿನದಿಂದ ಸಿದ್ದಾಪುರ ಪರಿಸರದಲ್ಲಿ ಕಾಡು ಆನೆಯೊಂದು ಬೀಡು ಬಿಟ್ಟಿದ್ದು ನಾಗರಿಕರಿಗೆ ಯಾವುದೇ ಹಾನಿಯಾಗಿಲ್ಲ. ಈ ಪರಿಸರದಲ್ಲಿ ಭಯದ ವಾತಾವರಣ ಇದ್ದುದ್ದರಿಂದ ಮುಂಜಾಗ್ರತ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಗುರುವಾರ ನಡೆದ ಕಾರ್ಯಾಚರಣೆಯಲ್ಲಿ ಆನೆಯನ್ನು ಸೆರೆಹಿಡಿಯಲಾಗಿದೆ. ಹಾಗೆಯೇ ಮುಂದೆಯೂ ಅಗತ್ಯ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದರು.
ಕಾಡಾನೆ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಿದೆ. ಗುರುವಾರ ಮಧ್ಯಾಹ್ನದಿಂದ ಸಂಜೆಯವರೆಗೂ ನಿರಂತರ ಕಾರ್ಯಾಚರಣೆ ನಡೆಯಿತು. 150 ಇಲಾಖೆ ಸಿಬಂದಿ, ಮೂವರು ಪಶು ವೈದ್ಯರು, 6 ಕುಮ್ಮಿ ಆನೆಗಳನ್ನು ಕಾರ್ಯಾಚರಣೆಯಲ್ಲಿ ಬಳಸಲಾಗಿತ್ತು. ಮೇಲಾಧಿಕಾರಿಗಳ ಆದೇಶದಂತೆ ಸಕ್ರೆಬೈಲಿನ ಆನೆ ಶಿಬಿರಕ್ಕೆ ಕೊಂಡೊಯ್ದು ಬಿಡಲಾಗಿದೆ.