Kundapra.com ಕುಂದಾಪ್ರ ಡಾಟ್ ಕಾಂ

ಗಾಣಿಗ ಪ್ರತಿಷ್ಠಾನ ಬೈಂದೂರು ವತಿಯಿಂದ ಪ್ರತಿಭಾ ಪುರಸ್ಕಾರ, ಕೊಡೆ, ಕಲಿಕಾ ಸಾಮಾಗ್ರಿ ವಿತರಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು
: ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಯ ಮುಂದಿನ ಶಿಕ್ಷಣ ಸಾಧನೆಗೆ ಉತ್ತೇಜನ ನೀಡುತ್ತದೆ. ವಿದ್ಯಾರ್ಥಿವೇತನ ಪಡೆದುಕೊಳ್ಳುವಾಗ ಆಗುವ ಖುಷಿಯೇ ವಿಶಿಷ್ಟವಾದುದು. ಮುಂದೆ ಈ ವಿದ್ಯಾರ್ಥಿಗಳು ಸಾಧನೆಯ ಪಥಕ್ಕೇರಿದ ಬಳಿಕ ಪ್ರೋತ್ಸಾಹಿಸಿದ ಸಂಸ್ಥೆಗಳನ್ನು ಮರೆಯಬಾರದು, ಸಮಾಜಕ್ಕೆ ಸ್ಪಂದಿಸುವ ಸಮಾಜಮುಖಿತ್ವ ಮೈಗೂಡಿಸಿಕೊಳ್ಳಬೇಕು ಎಂದು ಕುಂದಾಪುರ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ ಹೇಳಿದರು.

ಅವರು ಗಾಣಿಗ ಪ್ರತಿಷ್ಠಾನ ರಿ., ಬೈಂದೂರು ವತಿಯಿಂದ ಬೈಂದೂರು ವತ್ತಿನಕಟ್ಟೆಯ ಮಹಾಸತಿ ಅಮ್ಮನವರ ದೇವಸ್ಥಾನದ ವಠಾರದಲ್ಲಿ ನಡೆದ ಎಸ್.ಎಸ್.ಎಲ್.ಸಿ., ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಉಚಿತ ನೋಟ್ ಪುಸ್ತಕ, ಕಲಿಕೋಪಕರಣ, ಕೊಡೆ ವಿತರಣೆ, ಸಮಾಜದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಾಣಿಗ ಪ್ರತಿಷ್ಠಾನ ರಿ., ಬೈಂದೂರು ಇದರ ಅಧ್ಯಕ್ಷರಾದ ಕೆ. ರಮೇಶ ಗಾಣಿಗ ಕೊಲ್ಲೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣದಲ್ಲಿ ಯಾರೂ ಕೂಡಾ ವಂಚಿತರಾಗಬಾರದು. ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ, ಸಮಾಜದ ಸತ್ಪ್ರಜೆಗಳಾಗಿ ರೂಪಿಸಿ. ಮಕ್ಕಳಿಗೆ ಸಮಾಜಮುಖಿ ಚಿಂತನೆ, ಸಮಯಪ್ರಜ್ಞೆ, ಶಿಸ್ತು, ಶ್ರದ್ದೆಯನ್ನು ಕಲಿಸಿ ಅವರನ್ನು ಸಮಾಜದ ಆಧಾರಸ್ತಂಭಗಳಾಗಿ ಮಾಡಿ ಎಂದು ಹೇಳಿದ ಅವರು, ಹಲವಾರು ಯೋಜನೆಗಳು ನಮ್ಮ ಪ್ರತಿಷ್ಠಾನದ ಮುಂದೆ ಇದೆ. ಪ್ರಮುಖವಾಗಿ ಗಾಣಿಗ ಸಮಾಜ ಧಾರ್ಮಿಕತೆ ಬಗ್ಗೆಯೂ ಒತ್ತು ನೀಡಬೇಕು, ಬೈಂದೂರಿನ ಗೋಪಿನಾಥ ದೇವಸ್ಥಾನ ಅಭಿವೃದ್ಧಿ ಕಾರ್ಯಕ್ಕೆ ತಮ್ಮಲ್ಲರ ಸಹಕಾರ ಬೇಕು ಎಂದು ಹೇಳಿದರು.

ಬೈಂದೂರು ಪಟ್ಟಣ ಪಂಚಾಯತ್ ನಾಮ ನಿರ್ದೇಶಿತ ಸದಸ್ಯರಾದ ಬಿ.ಎಂ ನಾಗರಾಜ ಗಾಣಿಗ ಬಂಕೇಶ್ವರ ವಿದ್ಯಾರ್ಥಿವೇತನ ವಿತರಿಸಿದರು. ಕುಂದಾಪುರ ತಾಲೂಕು ಗಾಣಿಗ ಸಂಘದ ಅಧ್ಯಕ್ಷರಾದ ಸತೀಶ ಗಾಣಿಗ ಕುಂದಾಪುರ ಕಲಿಕಾ ಸಾಮಾಗ್ರಿ ವಿತರಿಸಿದರು. ಚಿಕ್ಕಯ್ಯ ಗಾಣಿಗ ಬಂಕೇಶ್ವರ ವಿದ್ಯಾರ್ಥಿಗಳಿಗೆ ಉಚಿತ ಕೊಡೆ ವಿತರಿಸಿದರು.

ಯುಬಿ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ ಸಂಯೋಜಕಿ ಪ್ರೇಮ ಗಾಣಿಗ,  ಪ್ರಗತಿಪರ ಕೃಷಿಕ ರಾಜು ಗಾಣಿಗ ಹುಳುವಾಡಿ, ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖಾ ವ್ಯವಸ್ಥಾಪಕ ಸುದರ್ಶನ ಗಾಣಿಗ,  ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ ನಾಗಪ್ಪ ಗಾಣಿಗ ಶಿರೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ಆನಂದ ಗಾಣಿಗ ಉಪ್ಪುಂದ, ಉಪ್ಪುಂದ ಗ್ರಾ.ಪಂ. ಉಪಾಧ್ಯಕ್ಷೆ ಮಹಾಲಕ್ಷ್ಮೀ, ರಂಗಕರ್ಮಿ ಗಣೇಶ ಟೈಲರ್ ಅವರನ್ನು ಸನ್ಮಾನಿಸಲಾಯಿತು. ಕುಂದಾಪುರ ವೆಂಕಟರಮಣ ಪಿಯು ಕಾಲೇಜಿನ ಪ್ರಾಂಶುಪಾಲರಾದ ಸಂದೀಪ ಗಾಣಿಗ ಹರೇಗೋಡು ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ರ್ಯಾಂಕ್‌ ಪಡೆದ ಸುಶ್ಮೀತಾ ಎಸ್. ಗಾಣಿಗ ಗಂಗೊಳ್ಳಿ, ಪಿಯುಸಿಯಲ್ಲಿ 8ನೇ ರ್ಯಾಕ್‌ ಪಡೆದ ಸಂಜನಾ ಗಾಣಿಗ ತಗ್ಗರ್ಸೆ ಅವರನ್ನು ಸನ್ಮಾನಿಸಲಾಯಿತು.

ಎಸ್.ಎಸ್.ಎಲ್.ಸಿ, ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು.

ಸುಮನಾ ಪಡುಕೋಣೆ, ಸ್ವಾತಿ, ಗಂಗಮ್ಮ ಸನ್ಮಾನಿತರ ಪರಿಚಯಿಸಿದರು. ಸತ್ಯನಾರಾಯಣ ಗಾಣಿಗ ನಾವುಂದ ಪ್ರಾರ್ಥನೆ ಮಾಡಿದರು. ಗಾಣಿಗ ಪ್ರತಿಷ್ಠಾನ ರಿ., ಬೈಂದೂರು ಇದರ ಸಂಘಟನಾ ಕಾರ್ಯದರ್ಶಿ, ಪ್ರತಿಭಾ ಪುರಸ್ಕಾರ ಸಮಿತಿಯ ಪ್ರಮುಖರಾದ ಶಿವಾನಂದ ಗಾಣಿಗ ಸ್ವಾಗತಿಸಿ, ನಾಗೇಂದ್ರ ಗಾಣಿಗ ವಂದಿಸಿದರು.

Exit mobile version