ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಮಹತ್ಮಾ ಜ್ಯೋತಿಬಾಪುಲೆ ಕೊರಗರ ಕಲಾ ವೇದಿಕೆ ನೇತೃತ್ವದಲ್ಲಿ ತಾಲೂಕಿನ ಕೊರಗರ ಭೂಮಿ ಸಮಸ್ಯೆ ಮತ್ತು ಇತರ ಬೇಡಿಕೆ ಆಗ್ರಹಿಸಿ ನಮ್ಮ ಭೂಮಿ ನಮ್ಮ ಹಕ್ಕು ಪ್ರತಿಭಟನಾ ರ್ಯಾಲಿ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ನಡೆಯಿತು.
ಈ ಸಂದರ್ಭ ವಿವಿಧ ಬೇಡಿಕೆಗಳನ್ನು ಸರಕಾರದ ಮುಂದಿರಿಸಿ, ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಲಾಯಿತು. ತಾಲೂಕಿನ ಕೊರಗ ಸಮುದಾಯದ ಹಲವು ಕುಟುಂಬಗಳು ಭೂಮಿಯಿಂದ ವಂಚಿತರಾಗಿದ್ದಾರೆ. ಕೊರಗರಿಗೆ ಭೂಮಿ ನೀಡುವ ಬಗ್ಗೆ ಹಲವು ಬಾರಿ ಸಭೆ ನಡೆದಿದ್ದರೂ ಕೂಡ ಈವರೆಗೆ ಯಾವ ಕುಟುಂಬಗಳಿಗೂ ಭೂಮಿ ನೀಡುವ ಕಾರ್ಯ ನಡೆದಿಲ್ಲ ಶೀಘ್ರ, ಕೊರಗ ಸಮುದಾಯದವರಿಗೆ ಕೃಷಿ ಚಟುವಟಿಕೆಗಳಿಗೆ ಯೋಗ್ಯವಾದ ಭೂಮಿ ನೀಡಬೇಕು ಹಾಗೂ ಮೂಲ ಸೌಕರ್ಯ ಕಲಿಸಬೇಕು ಎಂದು ಆಗ್ರಹಿಸಿದರು.
ಪ್ರತೀ ಎರಡು ತಿಂಗಳಿಗೊಮ್ಮೆ ಕೊರಗರ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು. ಕೊರಗರ ಭೂಮಿ ಹಾಗೂ ಇತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ತುರ್ತು ಸಭೆಯನ್ನು ಕರೆಯಬೇಕು. ಆ ಸಭೆಯಲ್ಲಿ ಕಂದಾಯ ಇಲಾಖೆಯ ಗ್ರಾಮಆಡಳಿತಾಧಿಕಾರಿ, ಕಂದಾಯ ಅಧಿಕಾರಿಗಳು ಭಾಗವಹಿಸಿ ಭೂಮಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದರು.

ನಾಡಾ ಗ್ರಾ.ಪಂ. ವ್ಯಾಪ್ತಿಯ ಪಡುಕೋಣೆಯಲ್ಲಿ ಎಂಪಿಸಿ ಸೆಂಟರ್ ಮಂಜೂರಾಗಿದ್ದು ಇದಕ್ಕೆ ಜಾಗ ಗುರುತಿಸಿಕೊಡುವಮತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿ ಎಂಟು ತಿಂಗಳು ಕಳೆದರೂ ಇನ್ನೂ ಜಾಗ ಗುರುತಿಸುವ ಕಾರ್ಯವಾಗಿಲ್ಲ ಎಂದು ದೂರಿದ ಕೊರಗ ಸಂಘಟನೆಯ ಮುಖಂಡರು ತಾಲೂಕಿನ ಬೈಂದೂರು, ಕಾಲ್ಲೋಡು, ತಗ್ಗರ್ಸೆ, ಗೋಳಿಹೊಳೆ, ಜಡ್ಕಲ್, ಹೇರೂರು ಮೊದಲಾದ
ಗ್ರಾ.ಪಂ. ವ್ಯಾಪ್ತಿಯ ಕೊರಗ ಕುಟುಂಬಗಳಿಗೆ ಭೂಮಿಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಅದನ್ನು ಇತ್ಯರ್ಥಪಡಿಸಿ, ಭೂಮಿ ವಂಚಿತ ಕೊರಗ ಕುಟುಂಬಗಳಿಗೆ ಭೂಮಿ ಹಂಚಲು ಶೀಘ್ರ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಸಮಸ್ಯೆಗಳಿಗೆ ಆಡಳಿತ ವ್ಯವಸ್ಥೆ ಸ್ಪಂದಿಸದಿದ್ದರೆ ಒಂದು ತಿಂಗಳ ಬಳಿಕ ನ್ಯಾಯಕ್ಕಾಗಿ ತಾಲೂಕು ಆಡಳಿತ ಸೌಧದ ಎದುರು ಅಹೋರಾತ್ರಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನ ಸ್ಥಳಕ್ಕೆ ಶಾಸಕ ಗುರುರಾಜ ಗಂಟೆಹೊಳೆ ಭೇಟಿ ನೀಡಿ, ಸ್ಥಳದಲ್ಲಿಯೇ ಕುಂದಾಪುರದ ಸಹಾಯಕ ಕಮಿಷನರ್ ಅವರೊಂದಿಗೆ ದೂರವಾಣಿಯ ಮೂಲಕ ಮಾತನಾಡಿ ಕೊರಗ ಕುಟುಂಬಗಳಿಗೆ ಭೂಮಿ ನೀಡುವ ಬಗ್ಗೆ ಚರ್ಚಿಸಿದರು. ಈ ಬಗ್ಗೆ ಶೀಘ್ರ ಸಂಬಂಧಿತ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕೊರಗ ಸಂಘಟನೆಯ ಮುಖಂಡರಾದ ಗಣೇಶ ಕುಂದಾಪುರ, ಗಣೇಶ ಬಾರಕೂರು, ಸೂರಸಿದ್ದ ಹೇರೂರು, ವೈ. ಲಕ್ಷ್ಮಣ ಕೊರಗ ಬೈಂದೂರು, ಚಂದ್ರಶೇಖರ ಹೇರೂರು, ಸುರೇಶ ಯಳಜಿತ್, ಶಂಕರ ಬೋಳಂಬಳ್ಳಿ, ವಿನಿತಾ ಪಡುಕೋಣೆ, ಸಿಐಟಿಯು ಮುಖಂಡ ರಾಜು ಪಡುಕೋಣೆ, ಸಿಐಟಿಯು ಮುಖಂಡ ಸುರೇಶ ಕಲ್ಲಾಗಾರ್, ಚಂದ್ರ ಜಡಲ್, ಮಹಾಬಲ ಕೋಟ, ಗಿರಿಜಾ ಮುದೂರು, ಸುನೀತಾ ಪಡುಕೋಣೆ, ಗುಂಡ ಜಡ್ಗಲ್, ನಾಗಮ್ಮ ಬೈಂದೂರು, ಭಾರತಿ ಶಿರೂರು, ರುಕ್ಕಿಣಿ ಮರವಂತೆ, ಯಡ್ತರೆ ಗ್ರಾ.ಪಂ. ಮಾಜಿ ಅಧ್ಯಕ್ಷ ಗಣೇಶ ಪೂಜಾರಿ, ಬೈಂದೂರಿನ ಸಾಮಾಜಿಕ ಕಾರ್ಯಕರ್ತ ಸುಬ್ರಹ್ಮಣ್ಯ ಬಿಜೂರು, ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಜಿಲ್ಲಾ ಜನಸಮನ್ವಯಾಧಿಕಾರಿ ನಾರಾಯಣ ಸ್ವಾಮಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.