ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಜೂ.13: ರಾಷ್ಟ್ರೀಯ ಹೆದ್ದಾರಿ 169 ಎ ತೀರ್ಥಹಳ್ಳಿ-ಮಲ್ಪೆ ರಸ್ತೆಯ ಆಗುಂಬೆ ಘಾಟಿಯಲ್ಲಿ ಜೂನ್ 15 ರಿಂದ ಸೆಪ್ಟಂಬರ್ 30ರ ವರೆಗೆ ಭಾರಿ ವಾಹನ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಭಾರಿ ಮಳೆಯಿಂದಾಗಿ ಮತ್ತು ಭಾರಿ ವಾಹನಗಳ ಓಡಾಟದಿಂದ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಭೂಕುಸಿತ ಆಗುವ ಸಂಭವ ಇರುವ ಹಿನ್ನೆಲೆ, ಸಾರ್ವಜನಿಕ ಹಿತದೃಷ್ಠಿಯಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989 ರ ಕಲಂ 221 (ಎ) (2) ಮತ್ತು (5) ರನ್ವಯ, ರಾಷ್ಟ್ರೀಯ ಹೆದ್ದಾರಿ 169 ಎ ಆಗುಂಬೆ ಘಾಟಿಯ ಮೂಲಕ ಜೂನ್ 15 ರಿಂದ ಸೆಪ್ಟಂಬರ್ 30 ರ ವರೆಗೆ ಲಘು ವಾಹನ ಸಂಚಾರಕ್ಕೆ ಮಾತ್ರ ಅನುವು ಮಾಡಿ, ಭಾರಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಉಡುಪಿಯಿಂದ ತೀರ್ಥಹಳ್ಳಿಗೆ ಸಂಚರಿಸುವ ಭಾರಿ ವಾಹನಗಳು ಬದಲಿ ಮಾರ್ಗವಾಗಿ ಉಡುಪಿ – ಕುಂದಾಪುರ – ಸಿದ್ಧಾಪುರ – ಮಾಸ್ತಿಕಟ್ಟೆ – ತೀರ್ಥಹಳ್ಳಿ ಮಾರ್ಗವಾಗಿ ಸಂಚರಿಸುವಂತೆ ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.

