Site icon Kundapra.com ಕುಂದಾಪ್ರ ಡಾಟ್ ಕಾಂ

ಅವಧಿ ಮುನ್ನ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷರ ಬದಲಾವಣೆ – ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ನಿರ್ಗಮಿತ ಅಧ್ಯಕ್ಷ ಕಿಶೋರ್‌ ಕುಮಾರ್‌ ಕುಂದಾಪುರ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ:
ಕಳೆದ ಐದು ದಿನಗಳ ಹಿಂದಷ್ಟೇ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರನ್ನು ಏಕಾಏಕಿ ಬದಲಾವಣೆ ಮಾಡಲಾಗಿದ್ದು, ನೂತನ ಅಧ್ಯಕ್ಷರಿಗೆ ಪಟ್ಟ ಕಟ್ಟಲಾಗಿದೆ. ಸೋಮವಾರ ಉಡುಪಿಯಲ್ಲಿ ಜರುಗಿದ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಈ ನಡೆದ ಬಗ್ಗೆ ನಿರ್ಗಮಿತ ಅಧ್ಯಕ್ಷ ಬಿ. ಕಿಶೋರ್‌ ಕುಮಾರ್‌ ಕುಂದಾಪುರ ಅವರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

2024ರ ಜನವರಿಯಲ್ಲಿ ಕಿಶೋರ್‌ ಕುಮಾರ್‌ ಅವರನ್ನು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಏಕಾಏಕಿ ಅಧ್ಯಕ್ಷ ಅವಧಿಗೆ ಪೂರ್ವದಲ್ಲೇ ನಿರ್ದಿಷ್ಟ ಕಾರಣ ನೀಡದೇ ಅವರಿಂದ ಅಧ್ಯಕ್ಷ ಸ್ಥಾನವನ್ನು ಕಸಿದುಕೊಳ್ಳಲಾಗಿದೆ. ಈ ಮೂಲಕ ಬಿಜೆಪಿಯ ಬಣ ರಾಜಕೀಯದ ಬಣ ಮತ್ತೊಮ್ಮೆ ಬಯಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಕಿಶೋರ್‌ ಕುಮಾರ್‌ ಅವರು ಮೊದಲಿನಿಂದಲೂ ನನಗೆ ಕಾರ್ಯಕರ್ತರ ಜೊತೆಗೆ ಹೆಚ್ಚಿನ ಒಡನಾಟವಿದ್ದು, ಜಿಲ್ಲಾಧ್ಯಕ್ಷನಾದ ಬಳಿಕವೂ ಅದನ್ನೇ ಮುಂದುವರಿಸಿದ್ದೆ. ನಾಯಕ ಹಿಂದೆ ತಿರುಗುವು ಕೆಲಸ ಮಾಡಿಲ್ಲ. ಜಿಲ್ಲಾಧ್ಯಕ್ಷನಾದ ಬಳಿಕ 8 ತಿಂಗಳು ಎದೆಯುಬ್ಬಿಸಿ ಅಧ್ಯಕ್ಷ ಎಂದು ಕೆಲಸ ಮಾಡಿದ್ದೇನೆ. ಆ ನಡುವೆ ಮತ್ತೆ ಗುಸು ಗುಸು ಶುರುಮಾಡಿಕೊಂಡಿದ್ದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅವರು ಬುಧವಾರ ಕರೆ ಮಾಡಿ ಅಧ್ಯಕ್ಷ ಸ್ಥಾನ ಬದಲಾಯಿಸುವುದಾಗಿ ಹೇಳಿದ್ದರು. ರಾತ್ರಿಯೊಳಗೆ ಬದಲಾಗಬಹುದು ಎಂದು ಹೇಳಿ, ನನಗೆ ತಿಳಿಸುವ ಮೊದಲೇ ಬೇರೊಬ್ಬರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಅಧಿಕಾರ ವಹಿಸಿಕೊಳ್ಳಲು ಸೂಚನೆ ನೀಡಲಾಗಿತ್ತು. ಇಂತಹ ಇಬ್ಬಗೆಯ ನೀತಿ ಅನುಸರಿಸುವ ಉದ್ದೇಶವೇನಿತ್ತು ಎಂದು ಅವರು ಖಾರವಾಗಿಯೇ ಪ್ರಶ್ನಿಸಿದ್ದಾರೆ. ಅಧ್ಯಕ್ಷನಾದ ಬಳಿಕ ಪಕ್ಷದ ಕಾರ್ಯಕ್ರಮಗಳಿಗೆ ಸಾಕಷ್ಟು ಹಣ ಖರ್ಚು ಮಾಡಲಾಗಿದೆ. ಅದರೆ ಅನಗತ್ಯವಾಗಿ ಯಾರಲ್ಲೂ ಹಣ ಕೇಳಲು ಹೋಗಿಲ್ಲ. ರಾಜ್ಯ ಘಟಕಕ್ಕೂ ವಾಸ್ತವದ ವರದಿ ಸಲ್ಲಿಸಿದ್ದೇನೆ ಹೊರತು ತಪ್ಪು ಸಂದೇಶ ಕಳುಹಿಸಿಲ್ಲ. ನಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಬಾಯಿಸಿದ್ದೇನೆ. ಅದಕ್ಕೆ ಯಾರ ಸರ್ಟಿಫಿಕೇಟ್‌ ಅಗತ್ಯವಿಲ್ಲ ಎಂದಿದ್ದಾರೆ.

ರಾಜಕೀಯ ಹೊರತಾಗಿಯೂ ನನಗೆ ದೊಡ್ಡ ಪ್ರಪಂಚವಿದೆ. ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಿ ನನ್ನನ್ನು ಬದಿಗೆ ಸರಿಸಲು ಸಾಧ್ಯವಿಲ್ಲ. ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡುವ ಅಗತ್ಯವೇ ಇಲ್ಲ. ಈಗಾಗಲೇ ಅವರಿಗೆ ಅಧಿಕಾರ ನೀಡಲಾಗಿದೆ. ಪಕ್ಷದ ರಾಜ್ಯ ಕಾರ್ಯದರ್ಶಿಯವರು ಧ್ವಜ ಹಸ್ತಾಂತರ ಮಾಡಲಿ ಎಂದು ತಮ್ಮ ಪಕ್ಷದ ನಡೆದ ವಿರುದ್ಧ ಕಾರ್ಯಕರ್ತರ ಎದುರು ಅಸಮಾಧಾನ ವ್ಯಕ್ತಪಡಿಸಿ ತೆರಳಿದ್ದಾರೆ.

ಸಭೆಯಲ್ಲಿ ಮಾಜಿ ಸಚಿವ, ಶಾಸಕ ವಿ. ಸುನಿಲ್‌ ಕುಮಾರ್‌ ಸೇರಿದಂತೆ ಶಾಸಕರು, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

Exit mobile version