ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಆಡಳಿತದಲ್ಲಿ ನಡೆಯುತ್ತಿದ್ದು, ಶಾಲಾ ಆರಂಭದ ಸಮಯದಲ್ಲಿ ಶಿಕ್ಷಕರೊಂದಿಗೆ ಆಡಳಿತ ಮಂಡಳಿಯ ಸಭೆಯು ಸೋಮವಾರದಂದು ಜರುಗಿತು.
ಪ್ರಗತಿ ಪರಿಶೀಲನೆಯ ಸಲುವಾಗಿ, ನಡೆದ ಈ ಸಭೆಯಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿಗಳಾದ ಎ. ನಾರಾಯಣ ರಾವ್ ಮಾತನಾಡಿ, ಶಿಕ್ಷಕರು ತಮ್ಮನ್ನು ತಾವು ಅಧ್ಯಾಪನ ಕಾರ್ಯದಲ್ಲಿ ಸದಾ ತೊಡಗಿಸಿಕೊಳ್ಳಬೇಕು. ಪುಸ್ತಕದ ವಿಚಾರ ತಲುಪಿಸುವುದರ ಜೊತೆಗೆ ಅವರಲ್ಲಿ ಉತ್ತಮ ಸಂಸ್ಕಾರಗಳನ್ನು ಬಿತ್ತಬೇಕು. ಶಿಕ್ಷಣಸಂಸ್ಥೆ ಹೆಸರು ಮಾಡುವುದು ಉತ್ತಮ ಅಧ್ಯಾಪಕ ವೃಂದದಿಂದಲೇ. ಶಿಕ್ಷಕವೃತ್ತಿ ಅತ್ಯಂತ ಗುರುತರವಾದ ಕೆಲಸ.
ತನ್ನ ವ್ಯಕ್ತಿತ್ವವನ್ನು ವಿಕಾಸಗೊಳಿಸಿಕೊಂಡು ತಾಳ್ಮೆಯಿಂದ ವರ್ತಿಸಬೇಕು. ಮಕ್ಕಳ ಮಾತನ್ನು ಕೇಳುವ ಗುಣ ಬೆಳೆಸಿಕೊಳ್ಳಬೇಕು. ಉತ್ತಮಸಂಸ್ಕಾರವಂತರನ್ನಾಗಿ ವಿದ್ಯಾರ್ಥಿಗಳನ್ನು ರೂಪಿಸಬೇಕಾದುದು ತಮ್ಮ ಆದ್ಯ ಕರ್ತವ್ಯವಾಗಿದೆ. ನನ್ನಿಂದ ನೂರಾರು ಜನ ಕಲಿಯುತ್ತಿದ್ದಾರೆಂಬ ಜ್ಞಾನವಿದ್ದು, ಕಾರ್ಯದಲ್ಲಿತೊಡಗಿಕೊಳ್ಳಿ ಎಂದು ಶಿಕ್ಷಕರಿಗೆ ಕಿವಿಮಾತುಗಳನ್ನಾಡಿದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿಗಳಾದ ಗಣೇಶ್ ಕಾಮತ್ ಮಾತನಾಡುತ್ತಾ ನಾವು ಕೊಡಪಾನ ತಂಬಿಗೆಗಳಿಂದ ಪಾಠ ಕಲಿತಿರಬೇಕು. ಕೊಡಪಾನ ಬಾವಿಯಿಂದ ನೀರನ್ನು ಸ್ವೀಕರಿಸುವಾಗ ಬಗ್ಗುತ್ತದೆ, ಹಾಗೆಯೇ ತನ್ನ ನೀರನ್ನು ತಂಬಿಗೆಗೆ ತುಂಬಿಸುವಾಗಲೂ ತಂಬಿಗೆಯ ಯೋಗ್ಯತೆಗನುಗುಣವಾಗಿ ಬಗ್ಗುತ್ತದೆ. ಅದರಂತೆ ಶಿಕ್ಷಕರು ಅಧ್ಯಯನ ಅಧ್ಯಾಪನದ ಸಮಯಗಳಲ್ಲಿ ವಿನಯಾದಿಗುಣಗಳಿಂದ ಅಲಂಕೃತರಾಗಿರಬೇಕು ಎಂದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಎಲ್. ಟಿ. ತಿಮ್ಮಪ್ಪ ಹೆಗಡೆ, ಡಾ. ಹೆಚ್ ಶಾಂತಾರಾಮ್ ಹಾಗೂ ಸಂಸ್ಥಾಪಕರಾದ ವೇದಮೂರ್ತಿ ರಾಮಚಂದ್ರ ಭಟ್ಟರೆಂಬ ಹಿರಿಯ ತ್ರಿಮೂರ್ತಿಗಳಿಂದ ಸೃಜಿಸಲ್ಪಟ್ಟ. ಈ ಶಾಲೆಯು ಉತ್ತಮ ಸಂಸ್ಕಾರವನ್ನು ಕೊಡುತ್ತಿರಬೇಕೆಂದು ಮನದಾಳದ ಮಾತನ್ನಾಡಿದರು.
ಶಿಕ್ಷಕರ ಬೇಡಿಕೆಗಳನ್ನು ಗಮನಿಸಿ, ಅಧ್ಯಕ್ಷತೆಯ ನುಡಿಗಳಲ್ಲಿ ಎಲ್.ಟಿ. ತಿಮ್ಮಪ್ಪನವರು ಮಾತನಾಡುತ್ತಾ ಯಾವುದೇ ಕಾರಣದಿಂದಲೂ ವಿದ್ಯಾರ್ಥಿಗಳನ್ನು ದೈಹಿಕವಾಗಿ ಶಿಕ್ಷಿಸಬಾರದು. ಭೇದಭಾವ ಮಾಡಬಾರದು. ವಿದ್ಯಾರ್ಥಿಗಳನ್ನು ದೇಶದ ಸತ್ಪ್ರ್ರಜೆಗಳನ್ನಾಗಿ ರೂಪಿಸಿರಿ. ಹಿಂದಿನ ವರ್ಷದ ಸಾಧನೆ ಅಭಿನಂದನಾರ್ಹ ಎನ್ನುತ್ತಾ ಶಿಕ್ಷಕರನ್ನು ಹುರಿದುಂಬಿಸಿದರು.
ಶಾಲೆಯ ಆಡಳಿತಾಧಿಕಾರಿ ವೀಣಾ ರಶ್ಮಿ ಎಮ್., ಶಾಲೆಯ ಶಿಕ್ಷಕವೃಂದ ಹಾಗೂ ಶಿಕ್ಷಕೇತರವೃಂದದ ಸರ್ವ ಸದಸ್ಯರೂ ಸಭೆಯಲ್ಲಿ ಉಪಸ್ಥಿತರಿದ್ದರು.
ಉಪಪ್ರಾಂಶುಪಾಲರಾದ ರಾಮ ದೇವಾಡಿಗ ಸರ್ವರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

