Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಕನಸಾಗೇ ಉಳಿದ ಮೆಸ್ಕಾಂ ಸಬ್‌ಸ್ಟೇಶನ್. ಹೋರಾಟ ಮುಂದುವರಿಸಲು ನಿರ್ಧಾರ

ಗಂಗೊಳ್ಳಿ: ಮೆಸ್ಕಾಂ ಸಬ್‌ಸ್ಟೇಶನ್ ಆರಂಭಿಸಲು ಎದುರಾಗಿದ್ದ ತೊಡಕುಗಳು ಇನ್ನೂ ನಿವಾರಣೆಯಾಗದಿರುವುದರಿಂದ ಸಬ್‌ಸ್ಟೇಶನ್ ಆರಂಭವಾಗುವವರೆಗೆ ಹೋರಾಟ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಮೆಸ್ಕಾಂ ಸಬ್‌ಸ್ಟೇಶನ್ ಹೋರಾಟ ಸಮಿತಿ ಅಧ್ಯಕ್ಷ ರಾಜೇಂದ್ರ ಸುವರ್ಣ ಹೇಳಿದರು.

ಅವರು ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ನಡೆದ ಸಮಿತಿ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ನಡುವಿನ ಜಟಾಪಟಿ ಹಾಗೂ ಗೊಂದಲದಿಂದ ಸಬ್‌ಸ್ಟೇಶನ್ ಇನ್ನೂ ಕಾರ್ಯಾರಂಭ ಮಾಡಿಲ್ಲ. ಈ ಸಂಬಂಧ ಸಚಿವರು ಹಾಗೂ ಇಲಾಖಾಧಿಕಾರಿಗಳ ಸಭೆ ನಡೆಸಿದ್ದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಸುಮಾರು ಒಂದು ತಿಂಗಳ ಹಿಂದೆ ಬೈಂದೂರು ಶಾಸಕರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಲಾಗಿದ್ದು, ಆದರೆ ಈವರೆಗೆ ಯಾವುದೇ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹೀಗಾಗಿ ಮೆಸ್ಕಾಂ ಆಡಳಿತ ನಿರ್ದೇಶಕರನ್ನು ಭೇಟಿಯಾಗಿ ಅಹವಾಲು ಸಲ್ಲಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಸರಕಾರದ ಎರಡು ಇಲಾಖೆಗಳ ನಡುವಿನ ಗೊಂದಲವನ್ನು ಆದಷ್ಟು ಬೇಗನೇ ಬಗೆಹರಿಸಿ ಗಂಗೊಳ್ಳಿ ಮೆಸ್ಕಾಂ ಸಬ್‌ಸ್ಟೇಶನ್ ವ್ಯಾಪ್ತಿಯ ನಾಗರಿಕರ, ಗ್ರಾಹಕರ ಬೇಡಿಕೆಗಳಿಗೆ ಕೂಡಲೇ ಸ್ಪಂದಿಸಬೇಕು. ಗಂಗೊಳ್ಳಿಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಪೂರ್ಣಗೊಂಡಿರುವ 33/11 ಕೆವಿ ಸಬ್‌ಸ್ಟೇಶನ್ ಕಾರ್ಯಾರಂಭಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಎಂದು ಒತ್ತಾಯಿಸಿರುವ ಹೋರಾಟ ಸಮಿತಿಯ ಪ್ರಮುಖರು, ಈ ಬಗ್ಗೆ ಕ್ರಮಕೈಗೊಳ್ಳದಿದ್ದಲ್ಲಿ ಸಮಸ್ತ ನಾಗರಿಕರ ಸಭೆ ಕರೆದು ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಮಿತಿಯ ಉಪಾಧ್ಯಕ್ಷ ಹರೀಶ ಮೇಸ್ತ, ಕಾರ್ಯದರ್ಶಿಗಳಾದ ರಾಮನಾಥ ಚಿತ್ತಾಲ್, ಬಿ.ಗಣೇಶ ಶೆಣೈ, ಸಮಿತಿಯ ಪದಾಧಿಕಾರಿಗಳಾದ ಸುರೇಂದ್ರ ಖಾರ್ವಿ, ರವೀಂದ್ರ ಪಟೇಲ್, ಬಿ.ರಾಘವೇಂದ್ರ ಪೈ ಮೊದಲಾದವರು ಉಪಸ್ಥಿತರಿದ್ದರು.

Exit mobile version