ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆರ್ಥಿಕ ಸಮಸ್ಯೆಯ ಕಾರಣದಿಂದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬಾರದು. ಕಟ್ಟಡ ಕಾರ್ಮಿಕರ ಮಕ್ಕಳು ಕಟ್ಟಡ ಕಾರ್ಮಿಕರಾಗದೆ, ಉನ್ನತ ವ್ಯಾಸಂಗ ಪಡೆದು ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯುವಂತಾಗಬೇಕು. ಈ ದಿಸೆಯಲ್ಲಿ ವಿದ್ಯಾಭ್ಯಾಸಕ್ಕೆ ಮಕ್ಕಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪುಸ್ತಕ ಮತ್ತಿತರ ಶೈಕ್ಷಣಿಕ ಪರಿಕರಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಜಿ.ವೆಂಕಟೇಶ ಶೆಣೈ ಹೇಳಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಗಂಗೊಳ್ಳಿ ಘಟಕ ಇದರ ಆಶ್ರಯದಲ್ಲಿ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಭಾನುವಾರ ಜರಗಿದ 8ನೇ ವರ್ಷದ ಪುಸ್ತಕ ವಿತರಣಾ ಮತ್ತು ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಗಂಗೊಳ್ಳಿ ಘಟಕ ಅಧ್ಯಕ್ಷ ಚಿಕ್ಕ ಮೊಗವೀರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷೆ ಚಂದ್ರಕಲಾ ಎಸ್.ತಾಂಡೇಲ, ನಿವೃತ್ತ ಪಿಎಲ್‌ಡಿ ಬ್ಯಾಂಕ್ ಮ್ಯಾನೇಜರ್ ಪೂರ್ಣಿಮಾ ಭವಾನಿಶಂಕರ, ಗಂಗೊಳ್ಳಿ ಗ್ರಾಪಂ ಸದಸ್ಯ ರಾಜೇಂದ್ರ ಶೇರುಗಾರ್ ಶುಭಾಶಂಸನೆಗೈದರು.
ಇದೇ ಸಂದರ್ಭ ಸಾಧಕರಾದ ಶ್ಯಾಮ್ ಆಚಾರ್ಯ ಗಂಗೊಳ್ಳಿ, ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಶರಣ್ ಆರ್.ಪೂಜಾರಿ, ಪ್ರಥ್ವಿ ಖಾರ್ವಿ, ಖುಷಿ ಮತ್ತು ರಕ್ಷಿತಾ ಅವರನ್ನು ಗೌರವಿಸಲಾಯಿತು. ಮಂಗಳೂರು ಪರಿಯಾಳ ಸಮಾಜ ಮಹಾಸಭಾ ಅಧ್ಯಕ್ಷ ಮಂಜುನಾಥ ಸಾಲಿಯಾನ್, ಗಂಗೊಳ್ಳಿ ಗ್ರಾಪಂ ಸದಸ್ಯ ಮಹೇಶ್ (ಅಯ್ಯಪ್ಪ ), ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಶ್ರೀಧರ ಎನ್.ಸಕ್ಲಾತಿ ಉಪಸ್ಥಿತರಿದ್ದರು.
ದಿನಕರ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಅರುಣ್‌ಕುಮಾರ್ ಗಂಗೊಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಂದರ ಜಿ. ಕಾರ್ಯಕ್ರಮ ನಿರ್ವಹಿಸಿದರು.

