ಕುಂದಾಪ್ರ ಡಾಟ್ ಕಾಂ ಸುದ್ದಿ.
ಅಮಾಸೆಬೈಲು: ಹುಲ್ಲು ಕೊಯ್ಯಲು ಹೋಗಿದ್ದ ಯುವತಿ ಕಾಲು ಜಾರಿ ಕಿಂಡಿ ಅಣೆಕಟ್ಟಿನ ನೀರಿಗೆ ಬಿದ್ದು ಮೃತಪಟ್ಟ ಘಟನೆ ಗುರುವಾರ ಅಮಾಸೆಬೈಲು ಗ್ರಾಮದ ಜಡ್ಡಿನಗದ್ದೆಯ ಎಂಬಲ್ಲಿ ನಡೆದಿದೆ.
ಜಡ್ಡಿನಗದ್ದೆಯ ಸಂಜೀವ ನಾಯ್ಕ ಮತ್ತು ನರ್ಸಿ ದಂಪತಿಯ ಪುತ್ರಿ ಮೂಕಾಂಬಿಕಾ (24) ಮೃತಪಟ್ಟವರು.
ಮೂಕಾಂಬಿಕಾ ಅಮಾಸೆಬೈಲಿನ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದು, ಬೆಳಿಗ್ಗೆ ಹುಲ್ಲು ತರಲು ಅತ್ತಿಗೆ ಅಶ್ವಿನಿ ಅವರೊಂದಿಗೆ ತೋಟಕ್ಕೆ ಹೋಗಿದ್ದರು. ಮರಳುವಾಗ ಅಶ್ವಿನಿ ಅವರು ಹುಲ್ಲಿನ ಹೊರೆಯನ್ನು ಹೊತ್ತುಕೊಂಡು ಮನೆಯ ಕಡೆಗೆ ಬರುವಾಗ ಕಾಣೆಯಾಗಿದ್ದರು.
ಅಶ್ವಿನಿ ಅವರು ಹಿಂದಿರುಗಿ ಹುಡುಕುತ್ತಾ ಹೋದಾಗ ಅಣೆಕಟ್ಟಿನ ದಂಡೆಯ ಮೇಲೆ ಹುಲ್ಲು ಕೊಯ್ಯುವ ಕತ್ತಿ ಕಾಣಿಸಿತು. ಭಯದಿಂದ ಅಶ್ವಿನಿ ಅವರು ಬೊಬ್ಬೆ ಹಾಕಿದಾಗ ಮನೆಯವರು ಬಂದು ಅಣೆಕಟ್ಟಿನಲ್ಲಿ ಹುಡುಕಿದಾಗ ಮೃತದೇಹ ಪತ್ತೆಯಾಯಿತು.
ಮೃತರು ತಂದೆ, ತಾಯಿ ಹಾಗೂ 6 ಮಂದಿ ಸಹೋದರಿಯರು ಮತ್ತು ಸಹೋದರರನ್ನು ಅಗಲಿದ್ದಾರೆ
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

