Kundapra.com ಕುಂದಾಪ್ರ ಡಾಟ್ ಕಾಂ

ಭವಿಷ್ಯದಲ್ಲಿ ಸಮಾಜದ ಉತ್ತಮ ಪ್ರಜೆಗಳಾಗಿ: ಶಾಸಕ ಗೋಪಾಲ ಪೂಜಾರಿ

ಕೊಲ್ಲೂರು: ಪೂರ್ವ ಪ್ರಾಥಮಿಕ ಮಕ್ಕಳ ಭವಿಷ್ಯವನ್ನು ಮತ್ತು ಅವರ ಬಾಲ್ಯಜೀವನವನ್ನು ಹಸನಾಗಿ ಮಾಡುವಲ್ಲಿ ಕೊಲ್ಲೂರು ಅಂತಮ್ಮ ಪ್ರತಿಷ್ಟಾನ ಅತ್ಯಂತ ಪ್ರಾಮುಖ್ಯವಾದ ಹೆಜ್ಜೆಯನ್ನಿಟ್ಟಿದೆ. ಒಂದು ಸದೃಢ ಸಮಾಜದ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಬದುಕಲು ಹಾಗೂ ಪ್ರಾರಂಭದಿಂದಲೇ ವಿದ್ಯಾಭ್ಯಾಸ ಮಾಡಲು ಈ ಅಂಗನವಾಡಿ ಕೇಂದ್ರ ಸಹಕಾರಿಯಾಗಲಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಅಭಿಪ್ರಾಯಪಟ್ಟರು.

ಕೊಲ್ಲೂರಿನಿಂದ ಸುಮಾರು ಏಳು ಕಿ.ಮಿ. ದೂರದ ನಕ್ಸಲ್ ಪೀಡಿತ ಪ್ರದೇಶ ವ್ಯಾಪ್ತಿಯ ಗುಡ್ಡಗಾಡು ಪ್ರದೇಶವಾಗಿರುವ ಹಳ್ಳಿಬೇರಿನಲ್ಲಿ ಕೊಲ್ಲೂರು ಅಂತಮ್ಮ ಪ್ರತಿಷ್ಟಾನದಿಂದ ರೂ.2.30ಲಕ್ಷ ಹಾಗೂ ತಾಪಂನಿಂದ 95 ಸಾವಿರ ರೂ.ಗಳ ಅನುದಾನದಿಂದ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕೇಂದ್ರವನ್ನು ಲೋಕಾರ್ಪಣೆ ಮಾಡಿ, ಬಳಿಕ ಮಾತನಾಡಿದರು.

ಕಷ್ಟದಲ್ಲಿರುವವರಿಗೆ ನೆರವಿನ ಸಹಾಯದ ಮೂಲಕ ಸ್ಪಂದಿಸುವ, ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿತ್ವ ಹಾಗೂ ಉತ್ತಮ ಚಿಂತನೆ ಹೊಂದಿದ ತಾಪಂ ಸದಸ್ಯ ಕೊಲ್ಲೂರು ರಮೆಶ ಗಾಣಿಗ, ತಮ್ಮ ಹೊಣೆಯರಿತು ತಾಯಿ ಅಂತಮ್ಮ ಗಾಣಿಗ ಹೆಸರಿನ ಪ್ರತಿಷ್ಟಾನ ಸ್ಥಾಪಿಸಿ ಸಾಮಾಜಿಕ ಚಟುವಟಿಕೆಗಳ ಮೂಲಕ ಸಮಾಜಸೇವೆ ಮಾಡುತ್ತಿರುವುದು ಅವರ ಹೃದಯವೈಶಾಲ್ಯತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಶ್ಲಾಘಿಸಿದರು. ಈ ಭಾಗದ ಮುದ್ದು ಮಕ್ಕಳ ಬದುಕಿಗೆ ಅವರ ನಿರ್ಮಾಣದ ಅಂಗನವಾಡಿ ಕೇಂದ್ರದ ಮೂಲಕ ಎಲ್ಲರೂ ವಿದ್ಯಾವಂತರಾಗಿ ರಾಷ್ಟ್ರದ ಸತ್ಪ್ರ್‌ಜೆಗಳಾಗಲಿ ಎಂದು ಅವರು ಶುಭಹಾರೈಸಿದರು. ಈ ಭಾಗದ ಜನರಿಗೆ ಮೂಲಸೌಕರ್ಯಗಳ ಕೊರತೆ ಕಾಡುತ್ತಿದ್ದು, ಆದಷ್ಟು ಶೀಘ್ರವಾಗಿ ರಸ್ತೆ ನಿರ್ಮಾಣ, ವಿದ್ಯೂದ್ದೀಕರಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು. ನಂತರ ಅಲ್ಲಿನ ಪ್ರಾಥಮಿಕ ಶಾಲೆಯ ಸುಮಾರು ೭೦ ವಿದ್ಯಾರ್ಥಿಗಳಿಗೆ ಗುರುತು ಚೀಟಿ (ಐಡಿ ಕಾರ್ಡ್) ವಿತರಿಸಿದರು.

ತಾಪಂ ಸದಸ್ಯ ಕೆ. ರಮೆಶ ಗಾಣಿಗ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ಗ್ರಾಪಂ ಅಧ್ಯಕ್ಷ ಕೆ.ಎನ್.ವಿಶ್ವನಾಥ ಅಡಿಗ, ಉಪಾಧ್ಯಕ್ಷೆ ಗಿರಿಜಾ, ಸದಸ್ಯರಾದ ಎಸ್. ಕುಮಾರ್, ಜಯಪ್ರಕಾಶ್ ಶೆಟ್ಟಿ, ಪ್ರಕಾಶ್, ಪ್ರೇಮಾ, ನೇತ್ರಾವತಿ, ಅಂಗನವಾಡಿ ಸಿಡಿಪಿಒ ಸದಾನಂದ ಉಪಸ್ಥಿತರಿದ್ದರು. ಶಿಕ್ಷಕರಾದ ಹರೀಶ್ ಸ್ವಾಗತಿಸಿ, ಕೇಶವ ವಂದಿಸಿದರು.

Exit mobile version