ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಜೂ.21: ಜನ ಸಾಮಾನ್ಯರ ದೃಷ್ಟಿಯಿಂದ ಕಾರ್ಯಕ್ರಮ ರೂಪಿಸಿ ಬದ್ದತೆಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಅಧಿಕಾರ ಶಾಶ್ವತ ಅಲ್ಲದೇ ಇರಬಹುದು ಆದರೆ ಜನರ ನೋವಿಗೆ ಸ್ಪಂದಿಸುವ ಕಾರ್ಯವನ್ನು ಜನಪ್ರತಿನಿಧಿಗಳು ನಿರಂತರವಾಗಿ ಮಾಡಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೈಂದೂರು ರೋಟರಿ ಸಮುದಾಯ ಭವನದಲ್ಲಿ ಶನಿವಾರ ವಿಧಾನಸಭಾ ಕ್ಷೇತ್ರದ ಅರ್ಹ ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರಗಳ ವಿತರಣೆ ಮತ್ತು ವಿವಿಧ ಸರ್ಕಾರಿ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಜಿಲ್ಲೆಯ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸೋಣ ಎಂದರು.

ಬೈಂದೂರು ಕ್ಷೇತ್ರದಲ್ಲಿ ಮಾಜಿ ಶಾಸಕ ಗೋಪಾಲ್ ಪೂಜಾರಿ ಹಾಗೂ ಶಾಸಕ ಗುರುರಾಜ್ ಗಂಟಿಹೊಳೆ ಇಬ್ಬರು ಕ್ಷೇತ್ರದ ದೃಷ್ಟಿಯಿಂದ ಯಾವುದೇ ರಾಜಕೀಯ ಇಲ್ಲದೆ, ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಇದು ರಾಜಕಾರಣಿಗಳಿಗೆ ಬೇಕಿರುವ ಬದ್ಧತೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಉಡುಪಿ ಜಿಲ್ಲೆ ಬುದ್ದಿವಂತರ, ಸಂವೇದನಾ ಶೀಲತೆ ಹೊಂದಿರುವ ಜಿಲ್ಲೆ. ಅಧಿಕಾರಿಗಳು ಉಡುಪಿ ಜಿಲ್ಲೆಗೆ ಕೆಲಸ ಮಾಡಲು ಬರಬೇಕು ಅಂದರೆ ಎರಡ್ಮೂರು ಬಾರಿ ಯೋಚನೆ ಮಾಡುತ್ತಾರೆ.ಉಡುಪಿ ಜಿಲ್ಲಾ ಉಸ್ತುವಾರಿ ನನಗೆ ಸಿಕ್ಕಿದ್ದು, ಶ್ರೀಕೃಷ್ಣ ನ ಆಶೀರ್ವಾದ ಸಿಕ್ಕಂತಾಯಿತು. ಇದು ನನ್ನ ಸೌಭಾಗ್ಯ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಕೂಸು ಇಂದಿರಾ ಕ್ಯಾಂಟೀನ್, ಬಡವರಿಗೆ ಕಡಿಮೆ ದುಡ್ಡಿನಲ್ಲಿ ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ಈ ಕ್ಯಾಂಟೀನ್ ಆರಂಭಿಸಲಾಯಿತು. ಐದು ರೂಪಾಯಿಗೆ ತಿಂಡಿ, ಹತ್ತು ರೂಪಾಯಿಗೆ ಮಧ್ಯಾಹ್ನದ ಊಟ, ಇಷ್ಟು ಕಡಿಮೆ ದುಡ್ಡಿನ ಲ್ಲಿ ಹೊಟ್ಟೆ ತುಂಬಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ಸಿದ್ದರಾಮಯ್ಯನವರ ಅಂದಿನ ಸರ್ಕಾರದಲ್ಲಿ ಅಕ್ರಮ ಸಕ್ರಮ ಜಾರಿಗೆ ತಂದು, ಜನರಿಗೆ ಹತ್ತಿರ ಆಗುವಂತ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಸಿಕ್ಕಂತ ಅವಕಾಶಗಳನ್ನು ಸೂಕ್ತ ವಾಗಿ ಬಳಸಿಕೊಂಡಿದ್ದೇವೆ. ರಾಜಕೀಯ ಅಷ್ಟು ಸುಲಭವಲ್ಲ, ಜನಸೇವೆಯೇ ಜನಾರ್ದನನ ಸೇವೆ ಅಂದುಕೊಂಡಿದ್ದೇವೆ, ವೈಯಕ್ತಿಕ ಕೆಲಸವನ್ನು ಪಕ್ಕಕ್ಕಿಟ್ಟು ಮಾಡುತ್ತಿದ್ದೇವೆ. ಜನ ಪ್ರತಿನಿಧಿಗಳು ಜವಾಬ್ದಾರಿ ಅರ್ಥ ಮಾಡಿಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ಸಚಿವರು ಹೇಳಿದರು.
ಅಂಗನವಾಡಿ ಆರಂಭಗೊಂಡು ಐವತ್ತು ವರ್ಷಗಳಾಯಿತು,ಇಂದಿರಾ ಗಾಂಧಿಯವರು ಶುರು ಮಾಡಿದರು, ಇದೇ ಅಕ್ಟೋಬರ್ ಎರಡನೇ ತಾರೀಖು ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಲಾಗುವುದು ಎಂದರು.
ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ ಬೈಂದೂರು ಕ್ಷೇತ್ರದಲ್ಲಿ ಹಕ್ಕುಪತ್ರ ವಿತರಣೆಯಲ್ಲಿ ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಅರ್ಹರ ಫಲಾನುಭವಿಗಳ ಜೊತೆಗೆ 12 ಸಾವಿರಕ್ಕೂ ಅಧಿಕ ಅರ್ಜಿಗಳು ಈಗಾಗಲೇ ನಮ್ಮ ಮುಂದಿವೆ. ಇದಕ್ಕೆ ತುರ್ತಾಗಿ ಸ್ಪಂದಿಸುವ ಕಾರ್ಯ ಮಾಡಬೇಕಿದೆ. ಬೈಂದೂರು ಕ್ಷೆತ್ರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಅಗ್ನಿಶಾಮಕ ಠಾಣಾ ಕಟ್ಟಡವನ್ನು ಶೀರ್ಘವೇ ಲೋಕಾರ್ಪಣೆಗೊಳಿಸಲು ಸಚಿವರು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. ಬೈಂದೂರು ಕ್ಷೇತ್ರದಲ್ಲಿ ಮಾಜಿ ಶಾಸಕ ಗೋಪಾಲ ಪೂಜಾರಿ ಅವರು ನಾನು ಒಟ್ಟಾಗಿ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ ಎಂದರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಮಾತನಾಡಿ, ಮಳೆಗಾಲದಲ್ಲಿ ಕರಾವಳಿ ಭಾಗದ ಜನರಿಗೆ ಸಮುದ್ರ ಕೊರೆತ ಖಾಯಂ ಸಮಸ್ಯೆಯಾಗಿದ್ದು, ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ನಾವುಂದ ಸಾಲ್ಬುಡದಲ್ಲಿ ನೆರೆಯಾಗುತ್ತಿದ್ದು ಹಳ್ಳಗಳ ಹೂಳೆತ್ತುವುದು ಅಗತ್ಯವಾಗಿದೆ. ಶಾಶ್ವತ ಕಾಮಗಾರಿಗಳಿಗೆ ಅನುದಾನ ಒದಗಿಸಿಕೊಡಲು ಸಚಿವರು ಸ್ಪಂದಿಸಬೇಕು ಎಂದು ಮನವಿ ಮಾಡಿದರು. ಬೈಂದೂರು ಸೋಮೇಶ್ವರದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಕಾಮಗಾರಿಗಳು ನಡೆಯುತ್ತಿದ್ದರೂ ಅದರ ರೂಪುರೇಷೆಗಳ ಅರಿವು ಇಲ್ಲದಾಗಿದೆ. ಈ ಬಗ್ಗೆಯೂ ಸಚಿವರು ನಿಗಾ ವಹಿಸಬೇಕು ಎಂದರು.
ವಿದ್ಯಾರ್ಥಿಗಳಿಗೆ ಕ್ಯಾಂಟೀನ್ ಊಟ ಕೊಡಿಸಿದ ಸಚಿವರು
ಕ್ಯಾಂಟೀನ್ ಉದ್ಘಾಟಿಸಿ ವಾಪಸ್ ತೆರಳುವ ವೇಳೆ ಸ್ವಾಗತಿಸಲು ಸಾಲಾಗಿ ನಿಂತಿದ್ದ ವಿದ್ಯಾರ್ಥಿಗಳನ್ನು ಕಂಡ ಸಚಿವರು, ಮತ್ತೆ ಕಾರಿನಿಂದ ಕೆಳಗಿಳಿದು ಕ್ಯಾಂಟೀನ್ ಒಳಗೆ ಕರೆದೊಯ್ದು ಊಟ ನೀಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು. ಕಾರಿನಲ್ಲಿ ಕುಳಿತಾಗ ಸಚಿವರೊಂದಿಗೆ ಸೆಲ್ಫಿ ಕ್ಲಿಕಿಸಿಕೊಳ್ಳಲು ಬಂದಾಗ, ಬನ್ನಿ ಕ್ಯಾಂಟೀನ್ ನಲ್ಲಿ ತಿಂಡಿ ತಿನ್ನಿ ಎಂದು ವಿದ್ಯಾರ್ಥಿನಿಯರನ್ನು ಕೈಹಿಡಿದು ಒಳಗೆ ಕರೆದುಕೊಂಡು ಬಂದರು.
ಶಾಸಕ ಗುರುರಾಜ ಗಂಟೊಹೊಳೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಉಪವಿಭಾಗಾಧಿಕಾರಿ ರಶ್ಮೀ ಎಸ್.ಆರ್, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಶೋಕ್ ಕೊಡವೂರು, ಉಪಾಧ್ಯಕ್ಷ ಉದಯ ಕುಮಾರ್ ಶೆಟ್ಟಿ ಕಾರ್ಕಳ, ಸದಸ್ಯರಾದ ಅರವಿಂದ ಪೂಜಾರಿ, ಪ್ರದೀಪ್ ಕುಮಾರ್ ಶೆಟ್ಟಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಮೋಹನ್ ಪೂಜಾರಿ, ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಬೈಂದೂರು ತಹಶೀಲ್ದಾರ್ ಎಚ್. ರಾಮಚಂದ್ರಪ್ಪ, ಪ.ಪಂ ನಾಮನಿರ್ದೇಶಿತ ಸದಸ್ಯರಾದ ಸದಾಶಿವ ಡಿ. ಪಡುವರಿ, ನಾಗರಾಜ ಗಾಣಿಗ ಮೊದಲಾದವರು ಇದ್ದರು.
ಬೈಂದೂರು ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಅಜೇಯ ಭಂಡಾರ್‌ಕಾರ್ ಸ್ವಾಗತಿಸಿದರು. ಕುಂದಾಪುರ ತಹಶಿಲ್ದಾರ್ ಪ್ರದೀಪ್ ಕುರುಡೇಕರ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಮೂರ್ತಿ ಪಡುವರಿ ಪ್ರಾರ್ಥಿಸಿದರು. ಯಕ್ಷ ನೃತ್ಯದ ಮೂಲಕ ಸ್ವಾಗತಿಸಿಕೊಳ್ಳಲಾಯಿತು. ಸುಧಾಕರ ಪಿ. ಬೈಂದೂರು ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ಓದಿ
► ಬೈಂದೂರು ಪೇಟೆಯಲ್ಲಿ ನೂತನ ಇಂದಿರಾ ಕ್ಯಾಂಟಿನ್ ಉದ್ಘಾಟನೆ – https://kundapraa.com/?p=86454 .
► ಬೈಂದೂರು ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ. ನೂತನ ಅಧ್ಯಕ್ಷ ಭರತ್ ದೇವಾಡಿಗಗೆ ಅಧಿಕಾರ ಹಸ್ತಾಂತರ – https://kundapraa.com/?p=86471 .