ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗದಿನದ ಅಂಗವಾಗಿ ವಿಜಯ ಕರ್ನಾಟಕ ಮತ್ತು ಟೈಮ್ಸ ಆಫ್ ಇಂಡಿಯಾ ಪತ್ರಿಕೆಗಳ ಸಹಯೋಗದೊಂದಿಗೆ ಶನಿವಾರ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಕುಂದಾಪುರ ವಿಭಾಗದ ಸಹಾಯಕ ಆಯುಕ್ತರಾದ ರಶ್ಮಿ ಎಸ್. ಆರ್. ಅವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಯೋಗವೆಂದರೆ ಕೇವಲ ಆಸನಗಳಲ್ಲ. ಅಷ್ಟಾಂಗಗಳನ್ನು ಹೊಂದಿದೆ. ನಾವು ಏಕಾಗ್ರತೆಗೆ ತಲುಪಿದರೆ ಮಾತ್ರ ಯೋಗ ಫಲ ನೀಡುವುದು. ಯೋಗಾಸನಗಳ ಅಭ್ಯಾಸ ಮಾಡುವುದು ದೇಹದ ಅಂಗಾಂಗಗಳಿಗೂ ಪುಷ್ಟಿದಾಯಕ. ಗುರಿಯನ್ನಿಟ್ಟುಕೊಂಡು ಸಾಧನೆ ಮಾಡಿ ಎಂದರು.

ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಬರಹಗಾರರಾದ ಜಾನ್ ಡಿಸೋಜಾ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ದಿವಂಗತ ವೇದಮೂರ್ತಿ ರಾಮಚಂದ್ರ ಭಟ್ಟರ ಕನಸಿನ ಕೂಸಾದ ಈ ಶಾಲೆ ಭವ್ಯ ಭಾರತದ ಭವಿಷ್ಯ ನಿರ್ಮಿಸಬೇಕಾದ ಮಕ್ಕಳಿಗೆ ತಾಯಿಯ ಗರ್ಭಗೃಹದಂತೆ ಅಗತ್ಯತೆಗಳನ್ನು ಪೂರೈಸುತ್ತಿದೆ. ಮರಗಿಡಬಳ್ಳಿಗಳ ಮಧ್ಯದಲ್ಲಿ ಶುದ್ಧವಾದ ವಾತಾವರಣದಲ್ಲಿದ್ದು, ಮಕ್ಕಳಿಗೆ ಯೋಗಗಳ ಪೂರ್ಣಪ್ರಯೋಜನ ಪಡೆಯಲು ಸಹಕಾರಿಯಾಗಿದೆ. ಯುವ ಜನರಲ್ಲಿ ಜಾಗೃತಿಮೂಡಿಸಲು ನಾವು ಈ ಶಾಲೆಯ ಸಹಯೋಗದೊಂದಿಗೆ ಯೋಗದಿನಾಚರಣೆಯನ್ನು ಇಲ್ಲಿ ಆಚರಿಸುತ್ತಿದ್ದೇವೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಆಲೂರಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ವೈದ್ಯರಾದ ಡಾ. ರಾಜೇಶ ಬಾಯರಿ ಅವರು ಮಕ್ಕಳನ್ನುದ್ದೇಶಿಸಿ ಮಾತನಾಡಿ, ಚಿತ್ತವೃತ್ತಿನಿರೋಧವೇ ಯೋಗ. ಮನಸ್ಸಿನ ನಿಯಂತ್ರಣವೇ ಯೋಗಾಭ್ಯಾಸದ ಪ್ರಧಾನ ಗುರಿ. ನಮ್ಮ ಭಾವನೆಗಳ ಹತೋಟಿ ಸಾಧಿಸಿ, ವಿಚಾರಧಾರೆಯನ್ನು ಸರಿಯಾದ ದಾರಿಯಲ್ಲಿ ಹರಿಸಲು ಅರ್ಥಾತ್ ಮಾನಸಿಕ ಆರೋಗ್ಯ ಸಾಧನೆಗೆ ಯೋಗಮಾರ್ಗ ಸಹಕಾರಿ. ನಮ್ಮ ಆಹಾರವೇ ನಮ್ಮ ಭಾವನೆಗಳ ಜಾಗೃತಿಗೆ ಕಾರಣವಾಗಿದ್ದು, ಉತ್ತಮ ಆಹಾರಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಕರಿದ ಆಹಾರಸೇವನೆ ಆರೋಗ್ಯಕ್ಕೆ ಬಹಳ ಹಾನಿಕರ. ಇವೆಲ್ಲವನ್ನು ಅರಿತು ಈ ಎಳೆಯ ವಯಸ್ಸಿನಲ್ಲಿಯೇ ಸರಿಯಾದ ಮಾರ್ಗ ರೂಢಿಸಿಕೊಂಡರೆ ನಿಮ್ಮ ಭವಿಷ್ಯ ಹಾಗೂ ಮುಂದಿನ ಭಾರತದ ನಾಗರೀಕತೆ ಜಗತ್ತನ್ನೇ ನಿಬ್ಬೆರಗಾಗುವಂತೆ ಮಾಡುತ್ತದೆಂಬುದರಲ್ಲಿ ಸಂದೇಹವಿಲ್ಲ. ಎನ್ನುತ್ತಾ ತಮ್ಮ ಅನುಭವಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಮತ್ತೋರ್ವ ಅತಿಥಿಗಳಾದ ಕುಂದಾಪುರ ತಾಲೂಕು ಆಯುಷ್ ಆಸ್ಪತ್ರೆಯ ವೈದ್ಯರಾದ ಡಾ. ಶಿಲ್ಪಾ ಮಾತಾಡುತ್ತಾ ಯೋಗದಿನಾಚರಣೆ ಎಂದರೆ ಪ್ರತಿನಿತ್ಯ ಯಾರೆಲ್ಲ ಯೋಗ ಮಾಡಿಲ್ಲ ಅವರು ಪ್ರಾರಂಭಿಸಲು, ಯಾರೆಲ್ಲ ಯೋಗ ಮಾಡುತ್ತಿದ್ದರೋ ಅವರು ಮುಂದುವರಿಸಲು ಸ್ಪೂರ್ತಿಪಡೆವ ದಿನ ಎಂದರ್ಥ. ಸ್ವಚ್ಛತೆಗೂ ಯೋಗಕ್ಕೂ ಬಹಳ ನಂಟು. ಪರಿಸರ ನೈರ್ಮಲ್ಯ ಆರೋಗ್ಯಕ್ಕೆ ಬಾಹ್ಯ ಕಾರಣವಾದಂತೆ ಯೋಗವು ಅಂತಃಶುದ್ಧಿಯನ್ನು ಉಂಟುಮಾಡಿ ಆರೋಗ್ಯಕ್ಕೆ ಕಾರಣವಾಗುವುದು. ಎನ್ನುತ್ತಾ ಯೋಗಾಸನಗಳನ್ನು ತಾವೂ ಮಾಡಿ ಮಕ್ಕಳಿಗೂ ಬೋಧಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ವಿಶ್ವಯೋಗದಿನವು ಜನಸಮುದಾಯದಲ್ಲಿ ಪ್ರಚಾರಮಾಡುವ ಕಾರ್ಯಕ್ರಮವಲ್ಲ. ಜವಾಬ್ದಾರಿ ಹೆಚ್ಚಿಸುವ ಕಾರ್ಯ. ಭಾರತದೇಶವನ್ನು ಕಟ್ಟಿ ಬೆಳೆಸುವ ಚೈತನ್ಯಗಳಾದ ವಿದ್ಯಾರ್ಥಿಗಳಿಗೆ ಪುಸ್ತಕದ ಜ್ಞಾನ ಮಾತ್ರ ಸಾಕಾಗಲ್ಲ. ಅವರ ಸರ್ವತೋಮುಖ ಅಭಿವೃದ್ಧಿ ನಮ್ಮ ಕರ್ತವ್ಯವಾಗಿದ್ದು, ಆ ಪ್ರಯತ್ನವೇ ಒಂದು ಅಂಗ ಈ ಕಾರ್ಯಕ್ರಮ. ೧೯೦ ಕ್ಕೂ ಹೆಚ್ಚು ದೇಶಗಳಲ್ಲಿ ಯೋಗದಿನಾಚರಣೆ ನಡೆಸುತ್ತಿದ್ದಾರೆ. ಸ್ವಾಮಿ ವಿವೇಕಾನಂದರು ’ದಿನಕ್ಕೆ ೧೦ ನಿಮಿಷಯೋಗಾಭ್ಯಾಸ ಮಾಡಿದರೆ ಜೀವನದ ಎಲ್ಲಾ ಸಮಸ್ಯೆಯನ್ನೂ ನಗುಮುಖದಿಂದ ಎದುರಿಸಲು ಶಕ್ತಿ ದೊರಕುತ್ತದೆ’ ಎಂದಿದ್ದಾರೆ. ನಿರಂತರವಾದ ಅಭ್ಯಾಸ ಪೂರ್ಣಫಲಸಿದ್ಧಿಗೆ ಕಾರಣ. ಎನ್ನುತ್ತಾ ಅತಿಥಿಗಳಿಗೆ ಗೌರವಾರ್ಪಣೆ ನಡೆಸಿ, ವಿಜಯಕರ್ನಾಟಕ ಹಾಗೂ ಟೈಮ್ಸ್ ಆಫ಼್ ಇಂಡಿಯಾ ಪತ್ರಿಕಾತಂಡದವರ ಸಹಯೋಗವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಮ್, ಶಾಲಾ ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ, ಶಿಕ್ಷಕ, ಶಿಕ್ಷಕೇತರ ವೃಂದದವರೂ ಉಪಸ್ಥಿತರಿದ್ದು ಕೆಲವಷ್ಟು ಯೋಗಾಸನಗಳ ಅಭ್ಯಾಸ ನಡೆಸಿದರು.
ಸಿರಿ ಗೌಡ ಕಾರ್ಯಕ್ರಮವನ್ನು ನಿರೂಪಿಸಿ, ಮಾನಸ ಸ್ವಾಗತಿಸಿ, ದಿಶಾ ಧನ್ಯವಾದ ಸಮರ್ಪಿಸಿದರು.