Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದ ರಥಬೀದಿಯ ಶ್ರೀದುರ್ಗಾ ಫ್ರೆಂಡ್ಸ್‌ನ ನಾಲ್ಕನೇ ವಾರ್ಷಿಕೋತ್ಸವ

ಬೈಂದೂರು: ಅಧ್ಯಕ್ಷ, ಪದಾಧಿಕಾರಿಗಳಿಲ್ಲದೇ ಎಲ್ಲರೂ ಸಮಾನರು ಎಂಬ ನೆಲೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಳದ ರಥಬೀದಿ ಪರಿಸರದ ೫೦ ಜನರ ಯುವಪಡೆ ಶ್ರೀದುರ್ಗಾ ಫ್ರೆಂಡ್ಸ್ ತಂಡವನ್ನು ಕಟ್ಟಿಕೊಂಡು ಎಲ್ಲರೂ ಕಾರ್ಯಕರ್ತರಂತೆ ಎಲೆ ಮರೆಯ ಕಾಯಿಯ ಹಾಗೆ ಯಾವುದೇ ಪ್ರಚಾರ ಬಯಸದೇ ಸಾಮಾಜಿಕ ಕಾರ್ಯ ಚಟುವಟಿಕೆ ಮಾಡುತ್ತಿರುವುದು ಶ್ಲಾಘನೀಯ ಎಂದು ಕೊಲ್ಲೂರು ದೇವಳದ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ. ಸುಕುಮಾರ್ ಶೆಟ್ಟಿ ಹೇಳಿದರು.

ಉಪ್ಪುಂದ ರಥಬೀದಿಯ ಶ್ರೀದುರ್ಗಾ ಫ್ರೆಂಡ್ಸ್‌ನ ನಾಲ್ಕನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಸಮಾಜಮುಖಿ ಹಾಗೂ ಜನಹಿತ ಕೆಲಸ ಮಾಡುವವರಿಗೆ ದೇವರ ವಿಶೇಷ ಕೃಪೆ ಇರುತ್ತದೆ. ವೈಜ್ಞಾನಿಕ ಯುಗದಲ್ಲಿಯೂ ಕೂಡಾ ವರ್ಷದಿಂದ ವರ್ಷಕ್ಕೆ ದೇವತಾಕಾರ್ಯ ಮತ್ತು ಜಾತ್ರೆಗೆ ಹೆಚ್ಚು ಜನ ಸೇರುತ್ತಿರುವುದರಿಂದ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡುವುದರ ಮೂಲಕ ಸಮಾಜವನ್ನು ದೈವತ್ವದ ಕಡೆಗೆ ಅಕರ್ಷಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.

ನಂತರ ಜಿಪಂ ಮಾಜಿ ಸದಸ್ಯ ಮದನ್‌ಕುಮಾರ್ ಮಾತನಾಡಿ, ನಾಡುಕಟ್ಟುವ ಕೆಲಸ ಕೇವಲ ಸರಕಾರ, ಮಂತ್ರಿ, ಜನಪ್ರತಿನಿಧಿಗಳಿಂದ ಮಾತ್ರ ಸಾಧ್ಯವಿಲ್ಲ. ದೇಶದ ಪ್ರತಿಯೊಬ್ಬ ನಾಗರಿಕ ಹಾಗೂ ಮುಖ್ಯವಾಗಿ ಯುವಸಮುದಾಯ ಆತ್ಮಪೂರ್ವಕವಾಗಿ ನಿಸ್ವಾರ್ಥದಿಂದ ಪ್ರತಿಫಲಾಪೇಕ್ಷೆಗಳಿಲ್ಲದೇ ನಾಡುಕಟ್ಟುವ ಕೆಲಸದಲ್ಲಿ ಭಾಗಿಯಾಗಬೇಕು. ಸಂಘ-ಸಂಸ್ಥೆಗಳು ಪ್ರತಿಭಾವಂತರನ್ನು ಗುರುತಿಸಿ ಗೌರವಿಸುವುದು ಹಾಗೂ ಪ್ರೋತ್ಸಾಹಿಸುವುದು ಒಂದು ಉತ್ತಮ ಬೆಳವಣಿಗೆ. ಇದು ಕೂಡಾ ನಾಡುಕಟ್ಟುವಲ್ಲಿ ಸಹಕಾರಿಯಾಗುತ್ತದೆ ಎಂದರು.

ಜಿಪಂ ಶಿಕ್ಷಣ ಮತ್ತು ಆರೋಗ್ಯಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ ಅಧ್ಯಕ್ಷತೆವಹಿಸಿದ್ದರು. ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಪ್ರೌಢಶಾಲಾ ವಿಭಾಗದ ಬೈಲ್‌ಮನೆ ಪ್ರಶಾಂತ್ ದೇವಾಡಿಗ ಮತ್ತು ಬೆಮ್ಮಣ್ಣುಮನೆ ಸಂಜಯ್ ದೇವಾಡಿಗರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ರೈತ ಮುಖಂಡ ಎನ್. ದೀಪಕ್‌ಕುಮಾರ್ ಶೆಟ್ಟಿ, ಗ್ರಾಪಂ ಸದಸ್ಯ ಯು.ಎ.ಮಂಜು ದೇವಾಡಿಗ, ಗ್ರಾಪಂ ಮಾಜಿ ಅಧ್ಯಕ್ಷ ಜಗನ್ನಾಥ ಉಪ್ಪುಂದ, ತಾರಾಪತಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಎ. ಅನಂದ ಖಾರ್ವಿ, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಬಿ.ಹೆಚ್.ಕೆ. ಕುಮಾರ್ ಖಾರ್ವಿ ಉಪಸ್ಥಿತರಿದ್ದರು.

ಸಂಘದ ಕಾರ್ಯಕರ್ತ ನಾಗೇಶ್ ದೇವಾಡಿಗ ಸ್ವಾಗತಿಸಿ, ಗಣೇಶ ದೇವಾಡಿಗ ವಂದಿಸಿದರು. ಶಿಕ್ಷಕ ನಾರಾಯಣರಾಜು ದೇವಾಡಿಗ ನಿರೂಪಿಸಿದರು. ನಂತರ ವಿವಿಧ ಭಾಗಗಳಿಂದ ಆಗಮಿಸಿದ ನೃತ್ಯತಂಡದವರಿಂದ ಫಿಲ್ಮಿಡ್ಯಾನ್ಸ್ ಪ್ರದರ್ಶನ ನಡೆಯಿತು.

-ಜನನಿ ಉಪ್ಪುಂದ

Exit mobile version