Site icon Kundapra.com ಕುಂದಾಪ್ರ ಡಾಟ್ ಕಾಂ

ಕಾಲ್ತೋಡು: ಉಚಿತ ಆಯುಷ್ ಚಿಕಿತ್ಸಾ ಶಿಬಿರ ಉದ್ಘಾಟನೆ

ಬೈಂದೂರು: ದೇಹದ ಮೇಲೆ ಯವುದೇ ಅಡ್ಡ ಪರಿಣಾಮ ಆಗದಂತಹ ಪ್ರಾಚೀನ ಪರಂಪರಾಗತವಾದ ಆಯುರ್ವೇದ ವೈದ್ಯಪದ್ದತಿಯಿಂದ ರೋಗಗಳಿಗೆ ಚಿಕಿತ್ಸೆ ಪಡೆದರೆ ಈ ಔಷಧಿಗಳು ದೇಹದ ಮೇಲೆ ನಿಧಾನವಾಗಿ ಪರಿಣಾಮ ಬೀರುವುದರ ಮೂಲಕ ಕಾಯಿಲೆ ಗುಣವಾಗಿ ಪುನಃ ಮರುಕಳಿಸದಂತೆ ತಡೆಯಬಲ್ಲದು. ರೋಗ ಬಂದಮೇಲೆ ಚಿಕಿತ್ಸೆ ಪಡೆಯುದಕ್ಕಿಂತ ಅದು ಬಾರದಂತೆ ಮುಂಜಾಗೃತೆವಹಿಸುವುದು ಉತ್ತಮ ಎಂದು ಬೈಂದೂರು ಠಾಣಾಧಿಕಾರಿ ಸಂತೋಷ್ ಎ. ಕಾಯ್ಕಿಣಿ ಹೇಳಿದರು.

ಕಾಲ್ತೋಡು ಸರಕಾರಿ ಆಯುರ್ವೇದ ಚಿಕಿತ್ಸಾಲಯದ ಆವರಣದಲ್ಲಿ, ಆಯುಷ್ ಇಲಾಖೆ ಬೆಂಗಳೂರು, ಜಿಪಂ ಉಡುಪಿ ಹಾಗೂ ಜಿಲ್ಲಾ ಆಯುಷ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಆಯುಷ್ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಬೈಂದೂರು ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್ ಅಧ್ಯಕ್ಷತೆವಹಿಸಿದ್ದರು. ಪ್ರಕೃತಿಯಲ್ಲಿರುವ ಎಲ್ಲಾ ವಿಧದ ಸಸ್ಯಸಂಕುಲಗಳು ಕೂಡಾ ಒಂದಲ್ಲಾಒಂದು ಔಷಧಯುಕ್ತ ಗುಣಗಳನ್ನು ಹೊಂದಿದೆ. ನಮ್ಮ ಹಿಂದಿನವರು ಇವುಗಳಿಂದಲೇ ಮನೆಮದ್ದು ತಯಾರಿಸುತ್ತಿದ್ದರು. ಅವರಿಗೆ ಈ ಔಷಧಿಗಳನ್ನು ತಯಾರಿಸುವ ಬಗ್ಗೆ ಜ್ಞಾನವಿತ್ತು ಆದರೆ ಪ್ರಚಾರಕ್ಕೆ ಸಾಧ್ಯವಾಗಿಲ್ಲ. ಇಂದಿನ ತಾಂತ್ರಿಕ ಬದುಕಿನಲ್ಲಿ ಆಯುರ್ವೇದದ ಬಗ್ಗೆ ನಂಬಿಕೆ ಕಡಿಮೆಯಾಗಿ ಶೀಘ್ರ ಉಪಶಮನ ನೀಡುವ ಅಲೋಪತಿ ಔಷಧಗಳಿಗೆ ಹೆಚ್ಚು ಹಣ ವ್ಯಯಿಸಿ ಹೋಗುತ್ತಿರುವುದು ವಿಷಾದನೀಯ ಎಂದ ಕುಲಾಲ್, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಹಾಗಾಗಿ ವರ್ಷಕ್ಕೊಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಈ ಕ್ರಮವನ್ನು ದೈನಂದಿನ ಚಟುವಟಿಕೆಯಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನವನ್ನು ಆರೋಗ್ಯಯುತವಾಗಿ ರೂಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಕಾಲ್ತೋಡಿನ ಹಿರಿಯ ನಾಗರಿಕ ಹಾಗೂ ಸಮಾಜಸೇವಕ ಸಂಜೀವ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ತೋಳಾರ್, ಹಿರಿಯ ಶಿಕ್ಷಕ ಭಾಸ್ಕರ್ ಉಪಸ್ಥಿತರಿದ್ದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಅಲಕಾನಂದ ರಾವ್ ಸ್ವಾಗತಿಸಿ, ಸ್ಥಳೀಯ ಆಸ್ಪತ್ರೆ ವೈದ್ಯಾಧಿಕಾರಿ ಡಾ. ವೀಣಾ ಕಾರಂತ್ ವಂದಿಸಿದರು. ಸುಂದರ್ ಗಂಗೊಳ್ಳಿ ನಿರೂಪಿಸಿದರು. ಪರಿಸರದ ಸಮಾರು ೩೦೦ ಜನರು ಶಿಬಿರದ ಪ್ರಯೋಜನ ಪಡೆದರು.

Exit mobile version