ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಪ್ರಧಾನ ಕಛೇರಿ ಹಾಗೂ ಕಂಬದಕೋಣೆ ಶಾಖೆಗೆ ಒಡಿಸ್ಸಾ ಅಂಗುಲ್ ಜಿಲ್ಲೆಯ ವಿವಿಧ ಸಹಕಾರಿ ಸಂಘಗಳ 22 ಮಂದಿ ಸಿಇಓ ಹಾಗೂ ಅಧ್ಯಕ್ಷ – ನಿರ್ದೇಶಕರುಗಳ ಅಧ್ಯಯನ ತಂಡ ಬುಧವಾರ ಭೇಟಿ ನೀಡಿತು.

ಸಂಘದ ವ್ಯವಹಾರ ಚಟುವಟಿಕೆಗಳ ವೈವಿದ್ಯೀಕರಣ, ಕ್ರೆಡಿಟ್ ಮಾನಿಟರಿಂಗ್, ಕೃಷಿ ಸಾಲ, ಬಡ್ಡಿದರ, ವಹಿವಾಟು, ಸದಸ್ಯರ ಒಳಗೊಳ್ಳುವಿಕೆ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಸೊಸೈಟಿಯ ಕಾರ್ಯವೈಖರಿಯನ್ನು ಶ್ಲಾಘಿಸಿ ಮುಂದಿನ ಯೋಜನೆಗಳ ಮಾಹಿತಿ ಪಡೆದುಕೊಂಡರು.
ಸಂಘದ ಅಧ್ಯಕ್ಷರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ಮಾತನಾಡಿ, ಒಂದು ಸಾವಿರ ಕೋಟಿ ವಹಿವಾಟು ಇರುವ ನಮ್ಮ ಸಂಘವು ನಾಲ್ಕು ಗ್ರಾಮಗಳ ಸದಸ್ಯರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಾ ಬಂದಿದೆ. ಆರ್ಥಿಕ ವಹಿವಾಟಿನ ಜೊತೆಗೆ ರೈತರಿಗೆ ಬಲ ತುಂಬುವ ನಿಟ್ಟಿನಲ್ಲಿ ಮಾಹಿತಿ ಕಾರ್ಯಗಾರ, ಪ್ರಾತ್ಯಕ್ಷಿಕೆ, ಕೃಷಿ ಪೂರಕ ಉತ್ಪನ್ನಗಳು ಹಾಗೂ ಸಲಕರಣೆಗಳ ಒದಗಿಸುವಿಕೆಗೆ ಆದ್ಯತೆ ನೀಡಲಾಗುತ್ತಿದೆ. ಸಂಘದ ಮಹಾತ್ವಕಾಂಕ್ಷಿಯ ಯೋಜನೆಯಾದ ರೈತ ಸಿರಿ ಅಗ್ರಿ ಮಾಲ್ ಮೂಲಕ ಆರ್ಥಿಕ ವ್ಯವಹಾರ ವಿಸ್ತರಣೆ ಹಾಗೂ ಎಲ್ಲಾ ಬಗೆಯ ರೈತೋಪಯೋಗಿ ವಸ್ತುಗಳ ಒದಗಿಸಿಕೊಡುವ ಯೋಜನೆ ಜಾರಿಯಲ್ಲಿದೆ ಎಂದರು.
ಒಡಿಸ್ಸಾ ಅಂಗುಲ್ ಜಿಲ್ಲೆಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಂತೋಷ್ ಕುಮಾರ್ ಪ್ರದಾನ್ ಹಾಗೂ ಬ್ಯಾಂಕರ್ಸ್ ಇನ್ಸ್ಟಿಟ್ಯೂಟ್ ಆಫ್ ರೂರಲ್ ಡೆವಲಪ್ಮೆಂಟ್ ಇದರ ಸಹಾಯಕ ಜನರಲ್ ಮ್ಯಾನೇಜರ್ ಶಕ್ತಿ ಪಿ. ಮೊಹಪತ್ರ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ವೇಳೆ ಉಪಾಧ್ಯಕ್ಷರಾದ ಮಂಜು ದೇವಾಡಿಗ, ನಿರ್ದೇಶಕರಾದ ಮೋಹನ್ ಪೂಜಾರಿ, ಹೂವ ನಾಯ್ಕ್, ರಾಜೇಶ್ ದೇವಾಡಿಗ, ಲಲಿತಾ ಪೂಜಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್. ಪೈ. ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.