Site icon Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್ ಸ್ನಾತಕೋತ್ತರ ಸಮಾಜಕಾರ್ಯ ಫೋರಮ್‌ನ ಸಮಾರೋಪ ಸಮಾರಂಭ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಮೂಡುಬಿದಿರೆ: ಕಾಲೇಜು ವಿದ್ಯಾಭ್ಯಾಸವನ್ನು ಮುಗಿಸಿ ವೃತ್ತಿ ಜೀವನಕ್ಕೆ ಕಾಲಿಡುವ ಪ್ರತಿ ವಿದ್ಯಾರ್ಥಿಯೂ ಸಂದರ್ಶನವನ್ನು ಎದುರಿಸುವ ಕಲೆಯನ್ನು ಕರಗತ ಪಡಿಸಿಕೊಂಡಿರಬೇಕು. ಪ್ರತಿ ನಿರ್ಧಾರವನ್ನು ಜಾಗರೂಕತೆಯಿಂದ ತೆಗೆದುಕೊಳ್ಳುವ ಮನೋಭಾವವನ್ನು ಬೆಳೆಸಿಕೊಂಡರೆ ಯಶಸ್ಸು ಸುಲಭ ಸಾಧ್ಯ  ಎಂದು ಬನ್ನಡ್ಕ  ಎಸ್ ಕೆಎಫ್ ಎಲಿಕ್ಸರ್ ಪ್ರೈವೇಟ್ ಲಿಮಿಟೆಡ್‌ನ ಮಾನವ ಸಂಪನ್ಮೂಲ ವ್ಯವಸ್ಥಾಪಕ ವಿವೇಕ್ ವಲ್ಲಭ್ ನುಡಿದರು.

ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ  “ಸಮಾಜಕಾರ್ಯ ಫೋರಮ್‌ನ’ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. 

ವೃತ್ತಿ ಬದುಕಿಗೆ ಕಾಲಿಡುವಾಗ ವೃತ್ತಿಪರತೆಯನ್ನು ರೂಡಿಸಿಕೊಳ್ಳುವುದರೊಂದಿಗೆ ಹೊಸ ಉದ್ಯಮಕ್ಕಿಂತ ಸ್ಥಾಪಿತ ಕಂಪನಿಗೆ ಸೇರುವುದು ಉತ್ತಮ. ಪ್ರತಿ ಹಂತದಲ್ಲೂ ಅಲ್ಲಿ ಸಿಗುವ ವೃತ್ತಿಯ ಅನುಭವ ಮತ್ತಷ್ಟು ವೈಯಕ್ತಿಕ ಅಭಿವೃದ್ಧಿಯ ಪಥದಲ್ಲಿ ಸಾಗಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಸಮಾಜಕಾರ್ಯ ಎನ್ನುವುದು ಎಂದಿಗೂ ಸಮುದಾಯವನ್ನು ಕಟ್ಟುವ ಮತ್ತು ಅಭಿವೃದ್ಧಿ ಪೋಷಿಸುವ ಕಾರ್ಯದಲ್ಲಿ ತನ್ನೊಂದಿಗೆ ತನ್ನವರನ್ನು ಬೆಳೆಸುವ ಕ್ಷೇತ್ರ. ಹಾಗಾಗಿ ಎಂತಹ ಪರಿಸ್ಥಿಯಲ್ಲಿಯೂ ಮನುಷತ್ವವನ್ನು ಮರೆತು ವರ್ತಿಸದಿರಿ.  ನಿಮ್ಮ ಸುತ್ತಮುತ್ತಲಿನ ಸಮುದಾಯದ ಒಳಿತಿಗೆ ಸದಾ ಶ್ರಮಿಸುತ್ತಿರಿ ಎಂದು ಆಳ್ವಾಸ್ (ಸ್ವಾಯತ್ತ ) ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್  ಶುಭ ಹಾರೈಸಿದರು.

ಬಳಿಕ, ಅತ್ಯುತ್ತಮ ಸಮಾಜಕಾರ್ಯ ವಿದ್ಯಾರ್ಥಿ  ಹಾಗೂ   ಸಮುದಾಯ ಶಿಬಿರದ ಅತ್ಯುತ್ತಮ ಶಿಬಿರಾರ್ಥಿ ಪ್ರಶಸ್ತಿಯನ್ನು ಕ್ರಮವಾಗಿ ಲಾವಣ್ಯ ಹಾಗೂ ಮಹೇಶ್‌ಗೆ ನೀಡಿ ಅಭಿನಂದಿಸಲಾಯಿತು. 

ಆಳ್ವಾಸ್ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಮಧುಮಾಲ ಕೆ., ಸಮಾಜಕಾರ್ಯ ಫೋರಮ್ ಸಂಯೋಜಕ ಕೃಷ್ಣಮೂರ್ತಿ ಬಿ., ವಿದ್ಯಾರ್ಥಿ ಸಂಯೋಜಕ ಶ್ರೇಯಸ್, ಫೋರಮ್ ಪದಾಧಿಕಾರಿಗಳು ಮತ್ತು ಶಿಕ್ಷಕ ವೃಂದದವರು ಭಾಗಿಯಾಗಿದ್ದರು.

Exit mobile version