ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಮರವಂತೆಯ ಶ್ರೀ ರಾಮ ಮಂದಿರ ಮೀನುಗಾರರ ಸೇವಾ ಸಮಿತಿ ವತಿಯಿಂದ ಮರವಂತೆ ಬ್ರೇಕ್ ವಾಟರ್ ಸಮೀಪದ ಕಡಲ ತೀರದಲ್ಲಿ ಸಮುದ್ರ ಪೂಜೆ ಸೋಮವಾರ ನಡೆಯಿತು.
ಇಂದು ಬೆಳಿಗ್ಗೆ ಮರವಂತೆಯ ಶ್ರೀ ರಾಮ ಮಂದಿರದ, ಶ್ರೀ ಗಂಗಾಧರೇಶ್ವರ ದೇವಸ್ಥಾನ ಹಾಗೂ ವರಾಹ ಸ್ವಾಮಿ ದೇವಸ್ಥಾನದ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮೀನುಗಾರರು ವಿಶೇಷ ಪೂಜೆ ಸಲ್ಲಿಸಿದರು.
ಕರಾವಳಿ ಮಹಾ ಬೊಬ್ಬರ್ಯ ದೇವಸ್ಥಾನದಲ್ಲಿ ಗಣಹೋಮ ಸೇವೆ ಸಲ್ಲಿಸಿದ ಬಳಿಕ ಮರವಂತೆ ಬ್ರೇಕ್‌ವಾಟರ್‌ನ ಕಡಲ ತೀರದಲ್ಲಿ ಸಮುದ್ರ ರಾಜನಿಗೆ ಹಾಲು, ಅಣಬೆ, ಹಣ್ಣು, ಹಳದಿ ಕುಂಕುಮದೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು.
ಅರ್ಚಕ ಮಹಾಬಲೇಶ್ವರ ಭಟ್ ನೇತೃತ್ವದಲ್ಲಿ ಸಮುದ್ರ ಪೂಜೆಯ ಧಾರ್ಮಿಕ ವಿಧಿವಿಧಾನಗಳು ಸಂಪನ್ನಗೊಂಡಿತು. ಮುಂದಿನ ಮೀನುಗಾರಿಕಾ ಋತುವಿನಲ್ಲಿ ಸಮೃದ್ಧ ಮತ್ಸ್ಯ ಸಂಪತ್ತು ದೊರೆಯುವಂತಾಗಲಿ, ಮೀನುಗಾರರು ಸಮುದ್ರಕ್ಕೆ ಇಳಿಯುವಾಗ ಯಾವುದೇ ಅಪಾಯ ಎದುರಾಗದಿರಲಿ, ಪ್ರಕೃತಿ ವಿಕೋಪಗಳು ಬಾರದಿರಲಿ, ಎಲ್ಲಾ ಮೀನುಗಾರರ ಬಾಳಿನಲ್ಲಿ ಸುಖ ಶಾಂತಿ ನೆಮ್ಮದಿ ಇರುವಂತಾಗಲಿ, ಸಮಸ್ತ ಮೀನುಗಾರರಿಗೆ ಒಳ್ಳೆಯದಾಗಲಿ ಎಂದು ಸಮುದ್ರರಾಜ ಹಾಗೂ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಮರವಂತೆಯ ಶ್ರೀ ರಾಮ ಮಂದಿರ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ಸುರೇಶ ಖಾರ್ವಿ, ಕಾರ್ಯದರ್ಶಿ ಶೇಖರ ಖಾರ್ವಿ, ಉಪಾಧ್ಯಕ್ಷ ನಾರಾಯಣ ಖಾರ್ವಿ, ಮಾಜಿ ಅಧ್ಯಕ್ಷ ವಾಸುದೇವ ಖಾರ್ವಿ, ಮಾರ್ಕೇಟಿಂಗ್ ಸಮಿತಿ ಅಧ್ಯಕ್ಷ ವೆಂಕಟರಮಣ ಖಾರ್ವಿ, ಉಪಾಧ್ಯಕ್ಷ ಸೋಮಯ್ಯ ಖಾರ್ವಿ, ಕಾರ್ಯದರ್ಶಿ ಮಹಾಬಲ ಖಾರ್ವಿ, ಸಮಿತಿ ಪದಾಧಿಕಾರಿಗಳು, ಮೀನುಗಾರರು ಉಪಸ್ಥಿತರಿದ್ದರು.
ಪೋಟೋ ಪೈಲ್ ನೇಮ್ : ೩೦ಜಿಎಎನ್೭, ೩೦ಜಿಎಎನ್೮ (ಮರವಂತೆಯ ಶ್ರೀ ರಾಮ ಮಂದಿರ ಮೀನುಗಾರರ ಸೇವಾ ಸಮಿತಿ ವತಿಯಿಂದ ಮರವಂತೆ ಬ್ರೇಕ್ ವಾಟರ್ ಸಮೀಪದ ಕಡಲ ತೀರದಲ್ಲಿ ಸಮುದ್ರ ಪೂಜೆ ನಡೆಯಿತು)

