ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ್ರೌಢಶಾಲೆ ಇಲ್ಲಿನ ವಿದ್ಯಾದಾಯಿನಿ ಸಭಾಭವನದಲ್ಲಿ ಈ ದಿನ ವಿಜ್ಞಾನ ಪ್ರಯೋಗಾಲಯಕ್ಕೆ ಅಗತ್ಯವಿರುವ ಉಪಕರಣಗಳನ್ನು ಮತ್ತು ತರಗತಿಗಳಿಗೆ ಗ್ರೀನ್ ಬೋರ್ಡ್ ಗಳನ್ನು ರೋಟರಿ ಕ್ಲಬ್ ಕುಂದಾಪುರ ಮಿಡ್ ಟೌನ್ ಇವರ ವತಿಯಿಂದ ನೀಡಲಾಯಿತು.
ರೋಟರಿ ಕುಂದಾಪುರ ಮಿಡ್ ಟೌನ್ ಇದರ ಅಧ್ಯಕ್ಷರಾದ ರೊಟೇರಿಯನ್ ಶೇಖರ್. ಎನ್. ಶೆಟ್ಟಿ aವರು ತಮ್ಮ ಅಧ್ಯಕ್ಷೀಯ ಅವಧಿಯ ಕೊನೆಯ ದಿನದ ಕೊನೆಯ ಕಾರ್ಯಕ್ರಮವನ್ನು ತಮ್ಮ ಊರಿನ ಶಾಲೆಗೆ ದೇಣಿಗೆ ನೀಡಿ, ಮಕ್ಕಳಿಗೆ ಉತ್ತಮ ಕಿವಿಮಾತು ಹೇಳುವ ಮೂಲಕ ನಡೆಸಿಕೊಟ್ಟರು ಮತ್ತು ಇದರೊಂದಿಗೆ ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಮಾಡಿದ ಅನೇಕಾನೇಕ ಸಮಾಜ ಸೇವೆಗಳಿಂದ ಸಾರ್ಥಕತೆ ಕಂಡು ಕೊಂಡಿರುವುದಾಗಿ ತಿಳಿಸಿದರು.

ಗ್ರಾಮೀಣ ಭಾಗದ ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯದ ಕನಸು ನನಸಾಗಿಸುವಲ್ಲಿ ರೊಟೇರಿಯನ್ ಶೇಖರ್. ಎನ್. ಶೆಟ್ಟಿ ಅವರ ದೇಣಿಗೆ ಬೃಹತ್ ಕೊಡುಗೆಯಾಗಿದೆ ಎಂದು ಸಂಜಯಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಅವರು ತಿಳಿಸಿದರು.
ಟ್ರಸ್ಟ್ ನ ಖಜಾಂಚಿ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಅವರು ಪ್ರಾಸ್ತಾವಿಕ ನುಡಿಯಲ್ಲಿ ಶಾಲೆಯ ಸಾಧನೆ, ಶಾಲಾ ನಿರ್ವಹಣೆಯಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಿಳಿಸಿ, ಟ್ರಸ್ಟ್ ಶಾಲೆಯ ಚುಕ್ಕಾಣಿ ಹಿಡಿದುದರ ಉದ್ದೇಶ, ಶಾಲೆಯ ಧ್ಯೇಯಗಳ ಬಗ್ಗೆ ಮಾತನಾಡಿದರು.
ಶಾಲಾ ಆಡಳಿತಾಧಿಕಾರಿ ಮತ್ತು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ವಿಜ್ಞಾನ ಪ್ರಯೋಗಾಲಯಕ್ಕೆ ನೀಡಿದ ಉಪಕರಣಗಳನ್ನು ಸ್ವೀಕರಿಸಿದರು.
ಚೈತ್ರ ಯಡಿಯಾಳ ಅವರು ಪ್ರಯೋಗಾಲಯದ ಅಗತ್ಯವನ್ನು ತಿಳಿಸಿ, ಇಂದಿನ ದೇಣಿಗೆಯಿಂದ ಮಕ್ಕಳು ವಿಜ್ಞಾನದ ಬಗ್ಗೆ ಕುತೂಹಲ, ಆಸಕ್ತಿ ಬೆಳೆಸಿಕೊಳ್ಳಲು ಅನುವು ಮಾಡಿಕೊಡುತ್ತದೆ.ಇದರಿಂದ ಮುಂದೆ ಮಕ್ಕಳಿಗೆ ವಿಜ್ಞಾನ ಕ್ಷೇತ್ರದಲ್ಲಿ ಅನೇಕ ಆವಿಷ್ಕಾರ ಮಾಡಲು ಪ್ರೇರೇಪಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಂಜಯಗಾಂಧಿ ಪ್ರೌಢಶಾಲಾ ವಿದ್ಯಾರ್ಥಿ ಚಂದನ ಅವರಿಗೆ ರಾಷ್ಟ್ರ ಮಟ್ಟದ ಎನ್‌ಎಮ್‌ಎಮ್‌ಎಸ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿರುವುದಕ್ಕೆ ಮುಖ್ಯೋಪಾಧ್ಯಾಯರಾದ ಉದಯ್ ಕುಮಾರ್ ಅವರು ಅಭಿನಂದನೆ ಸಲ್ಲಿಸಿದರು ಮತ್ತು ರೊಟೇರಿಯನ್ ಜಯಪ್ರಕಾಶ್ ಶೆಟ್ಟಿ ಅವರು ಚಂದನ್ ಅವರಿಗೆ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕುಂದಾಪುರ ಮಿಡ್ ಟೌನ್ ನ ಮುಂದಿನ ನೂತನ ಅಧ್ಯಕ್ಷರು, ಕಾರ್ಯದರ್ಶಿಯವರು ಮತ್ತು ಇತರ ರೊಟೇರಿಯನ್ಸ್, Rtn ಅಬ್ದುಲ್ ಬಷೀರ್, Rtn ಸುಕುಮಾರ್ ಶೆಟ್ಟಿ, Rtn. ನಿರಂಜನ್, Rtn ಉದಯ್ ಕಮಾರ ಶೆಟ್ಟಿ, Rtn ಸುನಿಲ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಕುಂದಾಪುರ ಮಿಡ್ ಟೌನ್ ವತಿಯಿಂದ ಮಕ್ಕಳಿಗೆ ಸಿಹಿ ಹಂಚಲಾಯಿತು. ಶಾಲಾ ಸಂಯೋಜಕಿ ಸರೋಜ ಅವರು ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯಿನಿ ವಿಲಾಸಿನಿ ಶೆಟ್ಟಿ ವಂದಿಸಿದರು.