Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಬಿಜೆಪಿಯ ಸುಳ್ಳು ಆರೋಪಕ್ಕೆ ಕಾಂಗ್ರೆಸ್ ಸತ್ಯ ದರ್ಶನ ಪ್ರತಿಭಟನೆ – ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ರಾಜ್ಯ ಸರಕಾರದ 9/11 ಸಮಸ್ಯೆ, ಅಕ್ರಮ ಸಕ್ರಮ 53 ಮತ್ತು 57 ಅರ್ಜಿ, ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ಮತ್ತು ವಿದ್ಯುತ್ ದರದ ಕುರಿತು ಬಿಜೆಪಿ ನಿರಂತರವಾಗಿ ಅಪಪ್ರಚಾರ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷದಿಂದ ಜನತೆಗೆ ವಾಸ್ತವ ವಿಚಾರ ತಿಳಿಸಲಿದ್ದೇವೆ. ಗ್ರಾಮ ಪಂಚಾಯತಿಯ ಮುಂದೆ ಬಿಜೆಪಿ ಸುಳ್ಳು ಹೇಳಿ ನಡೆಸಿದ ಪ್ರತಿಭಟನೆಗೆ ವಿರುದ್ಧ ಕಾಂಗ್ರೆಸ್ ಪಕ್ಷದ ಸತ್ಯ ದರ್ಶನ ಪ್ರತಿಭಟನಾ ಸಪ್ತಾಹ ಹಮ್ಮಿಕೊಂಡಿದೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದರು.

ಅವರು ಕುಂದಾಪುರ ಪುರಸಭೆ ಎದುರು ನಡೆದ ಕಾಂಗ್ರೆಸ್ ಪಕ್ಷದ ಸತ್ಯ ದರ್ಶನ ಪ್ರತಿಭಟನಾ ಸಪ್ತಾಹ ಮೊದಲ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

2 ವರ್ಷದ ಹಿಂದೆ ಬಿಜೆಪಿ ಸರಕಾರ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಸಂದರ್ಭ ಜಾರಿಗೆ ತಂದ  9/ 11 ಏಕ ನಿವೇಶನ , ಅಕ್ರಮ – ಸಕ್ರಮ ಯೋಜನೆಯಲ್ಲಿ 53 ಮತ್ತು 57 ರಲ್ಲಿ ಅರ್ಜಿ ತಿರಸ್ಕರಿಸಲು ಮತ್ತು ವೃದ್ದಾಪ್ಯ ವೇತನ , ಸಂಧ್ಯಾ ಸುರಕ್ಷಾ ಯೋಜನೆಯ ಫಲಾನುಭವಿಗಳನ್ನು ಮರು ಸಮೀಕ್ಷೆ ಕುರಿತು ಹಾಗೂ ವಿದ್ಯುತ್ ದರ ಎರಿಕೆಯಂತಹ ಸುತ್ತೋಲೆ ಮತ್ತು ಆದೇಶ ಹೊರಡಿಸಿತ್ತು. ಆದರೆ  ಈಗ ಕರ್ನಾಟಕದ ಕಾಂಗ್ರೆಸ್ ಸರಕಾರ ಇದನ್ನೆಲ್ಲಾ ಮಾಡಿರುತ್ತದೆ ಎ೦ದು ಸುಳ್ಳು ಮತ್ತು ಅಪಪ್ರಚಾರ ಮಾಡಿ ಮುಂದೆ ಬರುವ ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಮತದಾರರ ಅನುಕಂಪ ಪಡೆಯಲು ಜೂನ್ 23 ರಂದು ಬಿಜೆಪಿ ಪ್ರತಿ ಗ್ರಾಮ ಪಂಚಾಯತ ಎದುರು ಪ್ರತಿಭಟನೆ ನೆಡೆಸಿತ್ತು. ಈ ವಿಚಾರಗಳ ಕುರಿತು ವಾಸ್ತವ ವಿಚಾರ ಮತ್ತು ಸತ್ಯವನ್ನು  ಜನರ ಮುಂದಿಡಲು 1 ವಾರಗಳ ಕಾಲ  ಪ್ರತಿ ದಿನ 3 ಗ್ರಾಮ ಪಂಚಾಯತ  ಎದುರು  ಬೆಳಿಗ್ಗೆ 10-00 ಘಂಟೆಗೆ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳುವುದೆಂದು ತಿರ್ಮಾನಿಸಲಾಗಿದೆ ಎಂದರು.

ಈ ವೇಳೆ ಕುಂದಾಪುರ ನಗರ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟಾ, ಕುಂದಾಪುರ ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೇರುಗಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕುಂದಾಪುರ ಪುರಸಭೆ ಮೊಳಹಳ್ಳಿ ಗ್ರಾಮ ಪಂಚಾಯತ್, ತೆಕ್ಕಟ್ಟೆ ಗ್ರಾಮ ಪಂಚಾಯತ್, ಆನಗಳ್ಳಿ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಲಾಯಿತು.

Exit mobile version