Site icon Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಪರಿವರ್ತನ- ವ್ಯಕ್ತಿತ್ವವಿಕಸನ ಕಾರ್ಯಕ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರ ಲಯನ್ಸ್ ಕ್ಲಬ್ ಇವರ ಸಹಯೋಗದೊಂದಿಗೆ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಪರಿವರ್ತನ- ವ್ಯಕ್ತಿತ್ವ ವಿಕಸನ ಕಾರ್ಯಕ್ರಮವು ಇತ್ತೀಚಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಧಾನವಾಗಿ ವ್ಯಕ್ತಿತ್ವವಿಕಸನದ ತರಬೇತುದಾರರಾದ ವಿ. ವಾಮನ ಕುಮಾರ್ ಕೇರಳ ಅವರು ಮಕ್ಕಳಿಗೆ ಮಾಹಿತಿಯನ್ನು ನೀಡುತ್ತಾ, ಶಿಸ್ತಿನ ವಿದ್ಯಾರ್ಥಿಗಳಾದ ನಿಮಗೆ ಮಾರ್ಗದರ್ಶನ ಮಾಡಲು ನಮಗೆ ಹೆಮ್ಮೆಯಾಗುತ್ತಿದೆ. ಮಾರ್ಗದರ್ಶನ, ಭರವಸೆ, ಸಾಮರ್ಥ್ಯಗಳೇ ನಿಮ್ಮ ಯಶಸ್ಸಿನ ಮೂಲಸೂತ್ರಗಳು. ಗುರಿಯ ಆಯ್ಕೆಯಲ್ಲಿ ಯಾವತ್ತೂ ತಪ್ಪಬಾರದು. ಎಂತಹ ಕಠಿಣ ಪರಿಸ್ಥಿತಿಯಲ್ಲೂ ತೆಗೆದುಕೊಂಡ ನಿರ್ಧಾರವನ್ನು ತ್ಯಜಿಸಬಾರದು.

ಸ್ಪರ್ಧಾತ್ಮಕವಾದ ಜಗತ್ತಿನಲ್ಲಿ ಆಳಾಗಿ ಬದುಕುವುದಕ್ಕಿಂತ ಅರಸನಾಗಲು ಪ್ರಯತ್ನಿಸಬೇಕು. ಧೀರುಬಾಯಿ ಅಂಬಾನಿ ನಮಗೆ ಇಂದು ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ನಮ್ಮ ಕೌಶಲವನ್ನು ಸದಾ ನಾವೀನ್ಯತೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ಎಂದು ತಮ್ಮ ಕೆಲವು ವೀಡಿಯೋ ಚಿತ್ರಗಳ ತುಣುಕುಗಳ ಮೂಲಕ ಮಕ್ಕಳ ಹೃದಯ ಕಮಲವನ್ನು ಅರಳಿಸುತ್ತಾ ಬೋಧಿಸಿದರು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಮತ್ತು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕುಂದಾಪುರ ಲಯನ್ಸ್ ಕ್ಲಬ್ ಅವರು ಸದಾ ದಣಿವಿಲ್ಲದೇ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ನಮ್ಮಲ್ಲಿ ಇಂದು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟಿರುವುದರಿಂದ ನಮ್ಮ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ಸಿಕ್ಕಂತಾಯಿತು. ಮೌಲ್ಯಯುತವಾದ ವಿಚಾರಗಳ ಬೋಧನೆ ಸ್ಫೂರ್ತಿದಾಯಕವಾಗಿತ್ತು. ಎಂದು ನುಡಿಯುತ್ತಾ ಲಯನ್ಸ್ ಕ್ಲಬ್‌ನ ಸದಸ್ಯರನ್ನು ಗೌರವಿಸಿ, ಧನ್ಯವಾದಗಳನ್ನು ಸಮರ್ಪಿಸಿದರು.

ಕುಂದಾಪುರದ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ಸದಾನಂದ ನಾವಡ, ಕಾರ್ಯದರ್ಶಿಗಳಾದ ಸುಧಾಕರ ಶೆಟ್ಟಿ, ಖಜಾಂಚಿಗಳಾದ ಕೃಷ್ಣಮೂರ್ತಿ ಶೇಟ್, ಭೀಮಾ ವಾಮನ ಕುಮಾರ್,  ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಮ್., ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಸುಜಾತಾ ಸದಾರಾಮ್, ಶಾಲಾ  ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಶಿಕ್ಷಕ ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಹಿತಾ ನಿರೂಪಿಸಿ, ವಿದ್ಯಾರ್ಥಿನಿ ಶ್ರೇಯಾ ಸ್ವಾಗತಿಸಿದರು.

Exit mobile version