Kundapra.com ಕುಂದಾಪ್ರ ಡಾಟ್ ಕಾಂ

ಬೆಳ್ವೆ ಉಷಾ ಶೆಟ್ಟಿ ಕೊಲೆ ಪ್ರಕರಣ: ಈರ್ವ ಆರೋಪಿಗಳ ಬಂಧನ

ಕುಂದಾಪುರ: ತಾಲೂಕಿನ ಬೆಳ್ವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಮ್ಮೊಲ – ಹಳ್ನೀರು ಎಂಬಲ್ಲಿನ ಸೀತಾನದಿಯ ದಡದಲ್ಲಿ ಸೋಮವಾರ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಕಂದಾವರ ಗ್ರಾಮದ ನೆಚ್ಚೂರು ನಿವಾಸಿ ಉಷಾ ಶೆಟ್ಟಿ ಕೊಲೆ ಮಾಡಲಾಗಿತ್ತು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ. ಅಣ್ಣಾಮಲೈ ಹೇಳಿದ್ದಾರೆ. ಈ ಬಗ್ಗೆ ಕುಂದಾಪುರದಲ್ಲಿ ಕರೆಯಲಾದ ಸುದ್ಧಿಗೋಷ್ಟಿಯಲ್ಲಿ ಅವರು ಮಾಧ್ಯಮದ ಜೊತೆ ಮಾತನಾಡಿದರು.

ಮರಣೋತ್ತರ ಶವ ಪರೀಕ್ಷೆಯ ನಂತರ ಬಂದ ವರದಿಯ ಪ್ರಕಾರ ಶವ ಪತ್ತೆಯಾಗುವ ಏಳು ದಿನಗಳ ಹಿಂದೆ ಕೊಲೆಯಾಗಿದ್ದು, ಮುಖ ಹಾಗೂ ತಲೆಗೆ ಗಾಯಗಳಾಗಿರುವುದು ಪತ್ತೆಯಾಗಿತ್ತು. ಅಲ್ಲದೇ ಸ್ಥಳೀಯವಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ ಸಂದರ್ಭ ಉಷಾಳ ಸಂಪರ್ಕದಲ್ಲಿದ್ದ ಏಳು ಜನ ವ್ಯಕ್ತಿಗಳನ್ನು ತನಿಖೆಗೊಳಪಡಿಸಲಾಗಿತ್ತು. ಇವರುಗಳ ಪೈಕಿ ಗುಮ್ಮೊಲದ ನಿವಾಸಿ ವಿಶ್ವನಾಥ ನಾಯ್ಕ್ ಎಂಬಾತನ್ನು ಕೊನೆಯ ಭಾರಿ ಸಂಪರ್ಕಿಸಿದ್ದು ಪೊಲೀಸರು ಈತನ ಬಗೆಗೆ ಸಂಶಯ ಬಲಗೊಂಡಿತ್ತು.

ತನಿಕೆಯನ್ನು ಮುಂದುವರಿಸಿದಾಗ ಕೊಲೆಯ ಹಿಂದಿನ ಸತ್ಯ ಹೊರಬಿದ್ದಿದೆ. ಸುಮಾರು ಎಂಟು ವರ್ಷಗಳಿಂದ ಉಷಾಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ವಿಶ್ವನಾಥ ನಾಯ್ಕ ಆಕೆ ಕೇಳಿದಂತೆಲ್ಲಾ ಹಣ ನೀಡುತ್ತಿದ್ದಳೆನ್ನಲಾಗಿದೆ. ಅಲ್ಲದೇ ಆಕೆಯೂ ನಿತ್ಯವೂ ಸ್ಥಳೀಯವಾಗಿ ಮನೆಯೊಂದನ್ನು ಕಟ್ಟಿಕೊಡುವಂತೆ ಪೀಡಿಸುತ್ತಿದ್ದಳೆನ್ನಲಾಗಿದೆ. ಆದರೆ ಇತ್ತೀಚೆಗೆ ವಿಶ್ವನಾಥ ನಾಯ್ಕ ಹಣ ನೀಡುವುದನ್ನು ನಿಲ್ಲಿಸಿದ್ದಲ್ಲದೇ ನೀಡಿದ ಹಣ ವಾಪಾಸ್ಸು ನೀಡಬೇಕು. ನಾನು ಹೊಸದಾಗಿ ಕಟ್ಟುತ್ತಿರುವ ಮನೆ ನಿರ್ಮಾಣಕ್ಕೆ ಹಣದ ಅಡಚಣೆಯಿದೆ ಎಂದು ಪೀಡಿಸುತ್ತಿದ್ದನೆನ್ನಲಾಗಿದೆ. ಈ ವಿಚಾರವಾಗಿ ವಿಶ್ವನಾಥ ನಾಯ್ಕ್ ಹಾಗೂ ಉಷಾಳ ನಡುವೆ ಸಣ್ಣಪುಟ್ಟ ಮನಸ್ತಾಪಗಳೂ ಉಂಟಾಗಿದ್ದು ರೋಸಿ ಹೋದ ವಿಶ್ವನಾಥ ನಾಯ್ಕ್ ಉಪಾಯವಾಗಿ ಆಕೆಯನ್ನು ಬರಮಾಡಿಸಿಕೊಂಡು ಆತನ ಹೊಸ ಮನೆಯಲ್ಲಿಯೇ ಕೊಲೆ ಮಾಡಿ ಸ್ಥಳೀಯ ಕರುಣಾಕರ ಶೆಟ್ಟಿ ಎಂಬಾತನ ಸಹಾಯದೊಂದಿಗೆ ಹೊಳೆಯ ತೀರದಲ್ಲಿ ಬಿಸಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಮದು ಅವರು ಎಸ್ಪಿ ತಿಳಿಸಿದರು.

ಪ್ರಮುಖ ಆರೋಪಿ ಮೂವತ್ತನಾಲ್ಕು ವರ್ಷ ಪ್ರಾಯದ ವಿಶ್ವನಾಥ ನಾಯ್ಕ ವೃತ್ತಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದವನು. ಕಳೆದ ಎಂಟು ವರ್ಷಗಳಿಂದ ಗೇರು ಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಉಷಾಳ ಸಂಪರ್ಕದಲ್ಲಿದ್ದವನು. ನವೆಂಬರ್ 23ರಂದು ಉಪಾಯವಾಗಿ ಉಷಾಳನ್ನು ಎಂದಿನಂತೆ ಆತನ ಹೊಸ ಮನೆಯಾದ ಗುಮ್ಮೊಲ ಸಮೀಪದ ಹಳ್ನೀರ್ ಎಂಬಲ್ಲಿಗೆ ಆಹ್ವಾನಿಸಿದ್ದ. ಬಿದ್ಕಲ್‌ಕಟ್ಟೆಯ ತನಕ ರಿಕ್ಷಾದಲ್ಲಿ ಬರುವಂತೆ ಸೂಚಿಸಿ ಅಲ್ಲಿಂದ ಬೈಕಿನಲ್ಲಿ ಕರೆದೊಯ್ಯುವುದಾಗಿ ತಿಳಿಸಿದ್ದ. ಅದರಂತೆಯೆ ಆಕೆ ಆಟೋದಲ್ಲಿ ಮನೆಯಿಮದ ಹೊರಟಿದ್ದಳು. ಸೀರೆಯುಟ್ಟುಕೊಂಡು ಹೊರಟಿದ್ದ ಆಕೆ, ವಿಶ್ವನಾಥ ನಾಯ್ಕನ ಹೊಸ ಮನೆಯಲ್ಲಿ ಬಟ್ಟೆ ಬದಲಾಯಿಸಿ ನೈಟಿ ಧರಿಸಿದ್ದಾಳೆ. ಇದೇ ಸಂದರ್ಭ ಇನ್ನೊಬ್ಬ ಆರೋಪಿ ಕರಣಾಕರ ಶೆಟ್ಟಿ ಎಂಬಾತನಿಗೆ ಬರಹೇಳಿದ್ದನೆನ್ನಲಾಗಿದೆ. ಅದೇ ರೀತಿ ಕೊಲೆಯಾದ ಉಷಾ ಹಾಗೂ ಆರೋಪಿ ವಿಶ್ವನಾಥ ನಾಯ್ಕ ಬರುತ್ತಿರುವುದನ್ನು ಗಮನಿಸಿದ ಕರುಣಾಕರ ಶೆಟ್ಟಿ ಅವರನ್ನು ಹಿಂಬಾಲಿಸಿದ್ದಾನೆ.

ಬಟ್ಟೆ ಬದಲಾಯಿಸಿದ ನಂತರ ಉಷಾಳನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡ ವಿಶ್ವನಾಥ ನಾಯ್ಕ್ ಮತ್ತೊಬ್ಬ ಆರೋಪಿ ಕರುಣಾಕರ ಶೆಟ್ಟಿಗೆ ಬಿಟ್ಟುಕೊಟ್ಟಿದ್ದಾನೆ. ನಂತರ ಹಣದ ವಿಚಾರವಾಗಿ ಚರ್ಚೆ ನಡೆದಿದೆ. ಚರ್ಚೆ ವಿಕೋಪಕ್ಕೆ ಹೋಗಿ ಮನೆಯಲ್ಲಿದ್ದ ಕೆಂಪುಕಲ್ಲಿನಿಂದ ಉಷಾಳ ಮುಖಕ್ಕೆ ಹೊಡೆಯುತ್ತಾನೆ. ಆಯಕಟ್ಟಿನ ಜಾಗಕ್ಕೆ ಬಿದ್ದ ಪೆಟ್ಟಿನಿಂದಾಗಿ ಆಕೆ ಅಲ್ಲಿಯೇ ಸಾಯುತ್ತಾಳೆ. ಕೊನೆಗೆ ಆಕೆಯ ಮೈಮೇಲಿನ ಆಭರಣಗಳು ಚಿನ್ನದ್ದೆಂದು ಭಾವಿಸಿದ ಆರೋಪಿ ವಿಶ್ವನಾಥ ಅದನ್ನು ತನ್ನ ಪತ್ನಿಯ ಮೆನಯಲ್ಲಿ ಭದ್ರವಾಗಿಡುತ್ತಾನೆ. ಇತ್ತ ಸತ್ತ ಉಷಾಳ ದೇಹವನ್ನು ಇಬ್ಬರೂ ಸೇರಿ ಮನೆ ಸಮೀಪದ ನೂರೈವತ್ತು ಮೀಟರ್ ದೂರದಲ್ಲಿರುವ ಹೊಳೆಯ ಬದಿಯ ಹೊಂಡದಲ್ಲಿ ಬಿಸಾಡಿದ್ದಾರೆ, ಮನೆಯಲ್ಲಿದ್ದ ಆಕೆಯ ಸಾರಿಯಲ್ಲಿ ನೆಲದ ಮೇಲೆ ಬಿದ್ದಿದ್ದ ರಕ್ತವನ್ನು ಒರೆಸಿ ಹೊಳೆಯಲ್ಲಿ ಹಾಕಿದ್ದಾರೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಯಾರೀ ಉಷಾ: ಜಪ್ತಿಯ ನೆಚ್ಚೂರಿನವಳೆನ್ನಲಾದ ಉಷಾ(39) ಎಂಬ ಹೆಸರಿನ ವಿವಾಹಿತ ಮಹಿಳೆಯೊಬ್ಬರು ಗೋಳೀಯಂಗಡಿ ಎಂಬಲ್ಲಿರುವ ರಾಜೀವ ಶೆಟ್ಟಿ ಎಂಬುವರಿಗೆ ಸೇರಿದ ಎಸ್.ಎಲ್.ವಿ. ಗೇರು ಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದವರು. ಮನೆಯಲ್ಲಿ ವಯಸ್ಸಾದ ತಂದೆ ತಾಯಿಯಿದ್ದು ಸಹೋದರರು ಹೊರರಾಜ್ಯಗಳಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ತಿಂಗಳಿಗೊಮ್ಮೆ, ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದ ಆಕೆ ಉಳಿದ ದಿನಗಳಲ್ಲಿ ಕಾರ್ಖಾನೆಯಲ್ಲಿಯೇ ಇರುವ ವಸತಿ ವ್ಯವಸ್ಥೆಯಲ್ಲಿಯೇ ಉಳಿದುಕೊಳ್ಳುತ್ತಿದ್ದಳೆನ್ನಲಾಗಿದೆ. ಐದು ವರ್ಷಗಳ ಹಿಂದೆ ಆಕೆಯ ಗಂಡ ಬಿಟ್ಟು ಹೋಗಿದ್ದು, ಇರುವ ಎರಡು ಮಕ್ಕಳನ್ನು ಮನೆಯಲ್ಲಿರುವ ತಾಯಿ ನೋಡಿಕೊಂಡಿರುತ್ತಿದ್ದರು.

ಕಳೆದ ತಿಂಗಳು ದೀಪಾವಳಿಗೆಂದು ಊರಿಗೆ ಬಂದವಳು ವಾರದ ವರೆಗೆ ಮತ್ತೆ ಕೆಲಸಕ್ಕೆ ಹೋಗಿರಲಿಲ್ಲ ಎನ್ನಲಾಗಿದೆ. ನಂತರ ಹೊರಹೋಗಿದ್ದ ಆಕೆ ನವೆಂಬರ್ 23ರ ನಂತರ ಮನೆಗೆ ಬಂದಿರಲಿಲ್ಲ ಈ ಬಗ್ಗೆ ಕಾರ್ಖಾನೆ ಮಾಲೀಕರಲ್ಲಿ ಕೇಳಿದಾಗ ಹಬ್ಬಕ್ಕೆ ಹೋದವಳು ತಿರುಗಿ ಕಾರ್ಖಾನೆಗೆ ಬಂದಿಲ್ಲ ಎನ್ನುವ ಉತ್ತರ ನೀಡಿದ್ದು, ಮನೆಯವರು ಬೇರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರಬಹುದು ಎಂಬುದಾಗಿ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದ್ದ ಕಾರಣ ಮನೆಯವರಿಗೆ ಅನುಮಾನ ಕಾಡಲಾರಂಭಿಸಿತ್ತು. ಸೋಮವಾರ ಗುಮ್ಮೊಲದಲ್ಲಿ ಶವ ಪತ್ತೆಯಾದ ವಿಚಾರ ತಿಳಿದಾಗ ಮನೆಯವರಿಗೆ ಸಂಶಯ ಮೂಡಿತ್ತು. ಆಕೆಯ ತಮ್ಮ ವಿಶ್ವನಾಥ ಶೆಟ್ಟಿ ಎಂಬಾತ ಆಕೆಯ ಬಟ್ಟೆಗಳನ್ನು ಗುರುತಿಸಿ ಶವ ಉಷಾಳದ್ದೇ ಎಂದು ಪತ್ತೆ ಮಾಡಿದ್ದರು.

ಇದೀಗ ಇಬ್ಬರೂ ಆರೋಪಿಗಳು ಪೊಲೀಸರಿಂದ ಬಂಧಿಸಲ್ಪಟ್ಟು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಂದ ಎರಡು ರೋಲ್ಡ್ ಗೋಲ್ಡ್ ಕರಿಮಣಿ ಸರ, ರೋಲ್ಡ್ ಗೋಲ್ಡ್ ಕಿವಿಯೋಲೆ, ಜುಮುಕಿ, ಒಂದು ಜೊತೆ ಬೆಳ್ಳಿಯ ಕಾಲ್ಗೆಜ್ಜೆ, ರಿಕೋ ವಾಚ್, ಎರಡು ಮೊಬೈಲ್ ಫೋನ್ ಹಾಗೂ ಹತ್ತು ಸಾವಿರದ ನೂರಾತೊಂಭತ್ತು ರೂಪಾಯಿಗಳನ್ನು ವಶಪಡಿಸಿಕೊಳ್ಲಲಾಗಿದೆ

Exit mobile version