ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯುಜಿಡಿ ಬಾಕಿ ಉಳಿದ ಕಾಮಗಾರಿಗೆ ಒಂದು ಸ್ಪಷ್ಟವಾದ ಯೋಜನೆ ರೂಪಿಸಿ, ಏಕಕಾಲಕ್ಕೆ ಅದನ್ನು ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದು ಶಾಸಕ ಕಿರಣ್ ಕುಮಾರ ಕೊಡ್ಗಿ ಹೇಳಿದರು.
ಅವರು ಕುಂದಾಪುರ ಪುರಸಭೆಯಲ್ಲಿ ಮಂಗಳವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಸರಿಯಾದ ಪ್ಲ್ಯಾನಿಂಗ್ ಇಲ್ಲದೆ ಯುಜಿಡಿ ಪೂರ್ಣತೆ ಕಂಡುಕೊಳ್ಳಲು ಆಗಿಲ್ಲ, ಈಗಾ ಗಲೇ ಯೋಜನೆಗಾಗಿ 33 ಕೊಟಿ ಹಣ. ವ್ಯಯವಾಗಿದೆ. 13 ಕೋಟಿ ಹಣ ಉಳಿಕೆಯಾಗಿದೆ. ಯೋಜನೆ ಪೂರ್ಣಗೊಳಿಸಲು ಇನ್ನೂ 33 ಕೋಟಿ ಬೇಕಾಗುತ್ತದೆ. ಉಳಿಕೆ ಹಣದಲ್ಲಿ ಅಷ್ಟಿಷ್ಟು ಕೆಲಸ ನಿರ್ವಹಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಸದಸ್ಯ ಗಿರೀಶ್ ಜಿ.ಕೆ ಮಾತನಾಡಿ, ಯುಜಿಡಿ ಯೋಜನೆಯಿಂದ ಈಗಾಗಲೇ ಆಗಿರುವ ಪ್ರಮಾದಗಳು ಮುಂದೆ ಆಗಬಾರದು. ಆದಷ್ಟು ಬೇಗನೇ ಯೋಜನೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಂಬಂಧಿತ ಇಲಾಖೆ ಅಧಿಕಾರಿಗಳು, ಎಂಜಿನಿಯರ್‌ಗಳು ಸಹಕರಿಸಬೇಕು ಎಂದರು.
ಸದಸ್ಯ ಶ್ರೀಧರ ಶೇರೆಗಾರ್ ಮಾತನಾಡಿ, ಈ ಯೋಜನೆ ಪುರಸಭೆಗೆ ಬಿಳಿ ಆನೆ ಆಗಿಬಿಟ್ಟಿದೆ. ಯೋಜನೆ ಜಾರಿಗೊಂಡ ದಿನದಿಂದ ಇಂದಿನ ತನಕ ಆಗಮಿಸಿದ ಎಂಜಿನಿಯರ್‌ಗಳ ಒಂದೊಂದು ಕಥೆ ಕೇಳಿ ಸಾಕಾಗಿದೆ. ಇನ್ನಾದರೂ ಯೋಜನೆ ಪೂರ್ಣಗೊಳಿಸಬೇಕು ಎಂದರು. ಸದಸ್ಯ ಚಂದ್ರಶೇಖರ ಖಾರ್ವಿ ಧ್ವನಿಗೂಡಿಸಿದರು.
ಹುಂಚಾರಬೆಟ್ಟುವಿನಲ್ಲಿ ಯುಜಿಡಿ ಯೋಜನೆಯಡಿ ಎಸ್‌ಟಿಪಿ ಪ್ಯಾಂಟ್ ರಚನೆಗೆ ನಮ್ಮ ವಿರೋಧವಿದೆ. ಈಗಾಗಲೆ ಅಲ್ಲಿನ ಗ್ರಾಮಸ್ಥರು ಪ್ರತಿಭಟನೆ ಸಲ್ಲಿಸಿ ಮನವಿ ಸಲ್ಲಿಸಿದ್ದಾರೆ. ಅಧಿಕಾರಿಗಳು ಮನವಿಯನ್ನು ಪರಿಶೀ ಲಿಸಿ ಮುಂದಿನ ಹೆಜ್ಜೆ ಇರಿಸಬೇಕು ಎಂದು ಸದಸ್ಯ ಶೇಖರ ಪೂಜಾರಿ ತಿಳಿಸಿದರು.
ಯುಜಿಡಿ ಯೋಜನೆಗಾಗಿ ಕುಂದಾಪುರದ ಸದೃಢ ರಸ್ತೆಗಳು ನಾಮಾವಶೇಷಗೊಂಡಿವೆ. ಇಲ್ಲಿನ ವೆಂಕಟರಮಣ ಶಾಲೆ ರಸ್ತೆಯ ದುರಸ್ತಿಗಾಗಿ ಕಳೆದ 3 ವರ್ಷಗಳಿಂದ ಮನವಿ ಮಾಡಿ ಕೊಳ್ಳುತ್ತಲಿದ್ದರೂ ಈವರೆಗೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಸದಸ್ಯೆ ಆಶ್ವಿನಿ ಪ್ರದೀಪ್ ಆಕ್ರೋಶ ಹೊರಹಾಕಿದರು.
ನಗರ ವ್ಯಾಪ್ತಿಯಲ್ಲಿ ದಿನದ 24 ಗಂಟೆಯೂ ನೀರು ನೀಡುವ ಭರವಸೆ ಯೊಂದಿಗೆ ಜಾರಿಯಾಗಿರುವ ಜಲಸಿರಿ ಯೋಜನೆಯಡಿ ಕೆಲವೊಂದು ವಾರ್ಡ್‌ಗಳಿಗೆ ನೀರು ಪೂರೈಕೆ ಸಮರ್ಪಕ ರೀತಿಯಲ್ಲಿ ನಡೆಯುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ದೂರು ದುಮ್ಮಾನ ಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸದಸ್ಯ ಚಂದ್ರಶೇಖರ ಖಾರ್ವಿ ತಿಳಿಸಿದರು.
ಪ್ರತಿಕ್ರಿಯೆ ನೀಡಿದ ಶಾಸಕ ಕೊಡ್ಡಿ ಪುರಸಭೆಯ ಜನರಿಗೆ ಕುಡಿಯುವ ನೀರಿನ ಸರಬರಾಜು ಪೂರೈಕೆಯಲ್ಲಿ ಮೊದಲ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಜಲಸಿರಿ ಯೋಜನೆಯ ನ್ಯೂನತೆಗಳನ್ನು ಸದಸ್ಯರಾದ ಗಿರೀಶ್ ಜಿ.ಕೆ., ಸಂತೋಷ್ ಶೆಟ್ಟಿ ರಾಘವೇಂದ್ರ ಖಾರ್ವಿ ತೆರೆದಿಟ್ಟರು.
ನಗರದ ಪಾರ್ಕಿಂಗ್ ಸಮಸ್ಯೆ ಪರಿಹಾರಕ್ಕೆ ಒಮ್ಮತದ ಸಲಹೆ:
ಕುಂದಾಪುರ ನಗರದ ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಪುರಸಭೆ ಸದಸ್ಯರು ಒಮ್ಮತದ ನಿರ್ಣಯಕ್ಕೆ ಬನ್ನಿ. ಪ್ರೈಓವರ್ ಅಡಿಯಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಮತಿ ನೀಡುತ್ತಿಲ್ಲ. ಇದಕ್ಕೆ ಪರಿಹಾರವಾಗಿ ಏನು ಮಾಡಬಹುದು, ಅಲ್ಲಿ ಅವಕಾಶ ಇದ್ದರೆ 250ಕ್ಕೂ ಅಧಿಕ ಬೈಕ್‌ಗಳನ್ನು ನಿಲ್ಲಿಸಬಹುದು. ಈ ಬಗ್ಗೆ ಚರ್ಚಿಸಿ ನಿರ್ಣಯ ಮಾಡಿ ಎಂದು ಶಾಸಕ ಕಿರಣ್ ಕುಮಾರ್ ಕೊಡ್ಲಿ ಸಲಹೆ ನೀಡಿದರು.
ಫೈಓವರ್ ಸುಂದರೀಕರಣ ಕಾಯಲು ಕಾವಲುಗಾರನ್ನಿಟ್ಟು ಪುರಸಭೆಗೆ ನಷ್ಟವಾಗಿತ್ತು ಎಂದು ಸದಸ್ಯ ಶ್ರೀಧರ್ ಶೇರೆಗಾರ್ ಹೇಳಿದಾಗ, ಲಯನ್ಸ್‌ನಂತಹ ಸಂಸ್ಥೆಗಳು 45 ಲಕ್ಷ ರೂ. ಖರ್ಚು ಮಾಡಿ ಸುಂದರಗೊಳಿಸಿದ ಕಾರಣ ಪುರಸಭೆಗೂ ಪ್ರಯೋಜನವಾಗಿದೆ. ನಗರ ಪ್ರವೇಶಿಸುವಾಗ ಹಿತಾನುಭವ ಆಗುತ್ತದೆ. ಅಲ್ಲಿ ವಾಹನ ನಿಲುಗಡೆಗೆ ಅವಕಾಶ ಸಿಕ್ಕರೆ ಅದರಿಂದಲೂ ಆದಾಯ ಬರುತ್ತದೆ ಎಂದು ಕೊಡ್ಡಿ ಹೇಳಿದರು.
ನಗರದ ವಿವಿಧೆಡೆ ವಾಹನಗಳ ಪಾರ್ಕಿಂಗ್ ಗೆ ಮಾರ್ಕಿಂಗ್ ಮಾಡಿದ ನಿರ್ಣಯ ಮೇ ತಿಂಗಳ ಸಭೆಯಲ್ಲಿ ಆಗಿದ್ದರೂ ನಿನ್ನೆಯಷ್ಟೇ ಇಲಾಖೆಗೆ ಪುರಸಭೆಯಿಂದ ಕೊರಿಯರ್ ಮೂಲಕ ಬಂದಿದೆ. ಅದನ್ನು ಎಸ್‌ಪಿಗೆ ಕಳುಹಿಸಿ, ಅಲ್ಲಿಂದ ಡಿಸಿಗೆ ಕಳುಹಿಸಿ ಬಳಿಕ ಸರಕಾರದಿಂದ ಗಜೆಟ್ ನೋಟಿಫಿಕೇಶನ್ ಆಗಬೇಕು ಎಂದು ಸಂಚಾರ ಠಾಣೆ ಎಸ್‌ಐ ನೂತನ್ ಹೇಳಿದರು. 2022ರಿಂದ ಚರ್ಚೆ ಮಾಡುತ್ತಿದ್ದು ಇನ್ನೂ ಪರಿಹಾರ ಸಾಧ್ಯವಾಗಿಲ್ಲ. ಮೂರು ಡಿವೈಎಸ್‌ಪಿಗಳು ಬದಲಾದರೂ ಯೋಜನೆ ಅನುಷ್ಠಾನವಾಗಲಿಲ್ಲ ಎಂದು ಗಿರೀಶ್ ಜಿ.ಕೆ. ಹೇಳಿದರು.
ಭಂಡಾರ್‌ಕಾರ್ಸ್ ಕಾಲೇಜು ರಸ್ತೆ ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಿ ಎಂದು ರೋಹಿಣಿ ಉದಯ್ ಕುಮಾರ್ ಹೇಳಿದರು. ಬಸ್ರೂರು ಮೂರುಕೈ, ಹಾಲಾಡಿ ಕೋಟೇಶ್ವರ ಮೂರುಕೈ ಸೇರಿದಂತೆ ವಿವಿಧೆಡೆ ಫಲಕ ಅಳವಡಿಸಿ ದಂಡ ಹಾಕಲಾಗುವುದು ಎಂದು ಎಸ್‌ಐ ಹೇಳಿದರು. ನಗರದಲ್ಲಿ ಸಂಚಾರ ಸೂಚನಾ ಫಲಕಗಳಿಗೆ ಅನುದಾನ ಕೊಡುವಂತೆ ಮನವಿ ಮಾಡಿದರು.
ಪುರಸಭೆ ಅಧ್ಯಕ್ಷೆ ಕೆ.ಮೋಹನದಾಸ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಪ್ರಭಾಕರ್, ಪುರಸಭೆ ಮುಖ್ಯಾಧಿಕಾರಿ ಆನಂದ್ ಉಪಸ್ಥಿತರಿದ್ದರು.