Site icon Kundapra.com ಕುಂದಾಪ್ರ ಡಾಟ್ ಕಾಂ

ಕೋಡಿ ಪ್ರವಾಸೋದ್ಯಮ ಅಭಿವೃದ್ಧಿ: ಡಿಸಿ ಪರಿಶೀಲನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ರಾಜ್ಯ ಸರಕಾರದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಗಳು ಘೋಷಿಸಿದಂತೆ ಸಮುದ್ರತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಸಿದ್ಧತೆಗಳಾಗುತ್ತಿವೆ. ಆದರೆ ಈಗಾಗಲೇ ಪ್ರವಾಸೋದ್ಯಮ ಪೂರಕ ಚಟುವಟಿಕೆ ನೀಡುತ್ತಿರುವವರು ತಮಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿದ ಹಿನ್ನೆಲೆಯಲ್ಲಿ ಯಾರಿಗೂ ಸಮಸ್ಯೆ ಆಗದಂತೆ ಮುತುವರ್ಜಿ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪಾ ಹೇಳಿದರು.

ಅವರು ಮಂಗಳವಾರ ಕೋಡಿ ಸೀವಾಕ್‌ನಲ್ಲಿ ಪರಿಶೀಲನೆ ನಡೆಸಿ ಮಾತನಾಡಿದರು.

ಹೊಸದಾಗಿ ಪ್ರವಾಸೋದ್ಯಮ ಚಟುವಟಿಕೆ ಹಮ್ಮಿಕೊಳ್ಳುವುದರಿಂದ ಈಗಾಗಲೇ ನಿರ್ವಹಿಸುತ್ತಿರುವವರಿಗೆ ತೊಂದರೆ ಕೊಡುವ ಉದ್ದೇಶ ಇಲ್ಲ. ಪ್ರವಾಸ ಪೂರಕ ಚಟುವಟಿಕೆಗಳು ನಡೆದಷ್ಟೂ ಸ್ಥಳೀಯರ ಆದಾಯ ಹೆಚ್ಚಾಗುತ್ತದೆ. ಚಟುವಟಿಕೆಗಳಿಗೆ ಊರು ತೆರೆದುಕೊಳ್ಳುತ್ತದೆ. ಬೇರೆ ಬೇರೆ ಊರುಗಳಿಂದ ಜನ ಆಗಮಿಸುತ್ತಾರೆ. ಡಿಜಿಟಲ್ ಸಾಧನ, ಮಾಧ್ಯಮದ ಮೂಲಕ ತಿಳಿದುಕೊಳ್ಳುತ್ತಾರೆ.

ಆಗ ಸೌಕರ್ಯಗಳು ಚೆನ್ನಾಗಿದ್ದಷ್ಟು ಅದಕ್ಕೆ ಮಹತ್ವ ಬರುತ್ತದೆ. ಈಗಾಗಲೇ ಇಲ್ಲಿ ಬೋಟಿಂಗ್, ಕಯಾಕಿಂಗ್, ಡಾಲ್ಟಿನ್ ವೀಕ್ಷಣೆ ಇತ್ಯಾದಿ ನಡೆಯುತ್ತಿದೆ. ಅದರ ಜತೆಗೆ ವಾಟರ್ ಗೇಮ್ಸ್ ಮೊದಲಾದ ಚಟುವಟಿಕೆ ಹಮ್ಮಿಕೊಳ್ಳಲಾಗುವುದು ಎಂದರು.

ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಿಧೀಶ್ ಕೆ.ಜೆ., ಅಧಿಕಾರಿ ಭವಿಷ್, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಕಂದಾಯ ನಿರೀಕ್ಷಕ ದಿನೇಶ್ ಮೊದಲಾದವರು ಇದ್ದರು.

Exit mobile version