Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಗುರುಪೂರ್ಣಿಮೆಯ ಸಂಭ್ರಮಾಚರಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಗುರುವಾರದಂದು ಗುರುಪೂರ್ಣಿಮೆಯ ಪ್ರಯುಕ್ತ ವ್ಯಾಸಪೂಜೆಯು ಹಟ್ಟಿಅಂಗಡಿ ಶಾಂತಾರಾಮ ಸಭಾಂಗಣದಲ್ಲಿ ನಡೆಯಿತು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲಾಶಿಕ್ಷಕವೃಂದದವರು ’ಕಲಿಸು ಗುರುವೆ ನೀ ಕಲಿಸು’ಎಂಬ ಗೀತೆಯನ್ನು ಸುಮಧುರವಾಗಿ ಹಾಡಿ ಮಕ್ಕಳಿಗೆ ಆನಂದವನ್ನು ಉಂಟುಮಾಡಿದರು.

ಶಾಲೆಯ ಸಂಸ್ಕೃತ ಅಧ್ಯಾಪಕರಾದ ರಾಮಕೃಷ್ಣ ಉಡುಪರು ಗುರುಪೂರ್ಣಿಮೆಯ ಮಹತ್ವವನ್ನು ತಿಳಿಸುತ್ತಾ  ಎಲ್ಲಾ ಗುರುಗಳು ಅವರ ಗುರುಗಳನ್ನು ಸ್ಮರಿಸುವ ಈ ದಿನ ಜಗತ್ತಿಗೆ ಆದಿಗುರುವಾದ ವೇದವ್ಯಾಸರನ್ನು ಸ್ಮರಿಸುವ ಪುಣ್ಯದಿನ. ದೇಶದ ಎಲ್ಲಾ ವೇದಪರಂಪರೆಗಳಿಗೂ ಸನ್ಮಾರ್ಗವಿತ್ತು, ಎಲ್ಲಾ ದೇವ ದೇವತೆಯರನ್ನು ಆರಾಧಿಸುವ ಜನರ ಮನಸ್ಸಿನಲ್ಲಿ ದೇವರ ನಂಬಿಕೆ, ಜ್ಞಾನ ಮತ್ತು ದೃಢಭಕ್ತಿಯನ್ನು ಜನಿಸುವ ಹದಿನೆಂಟು ಪುರಾಣಗಳನ್ನು ಸಂರಚಿಸಿ, ಉಪನಿಷತ್ತಿನ ಸಾರವನ್ನು ಸರ್ವರಿಗೂ ಬೋಧಿಸಿದ ಗುರುವೆಂದರೆ ವೇದವ್ಯಾಸರು. 

ಭಗವದ್ಗೀತೆ, ವಿಷ್ಣುಸಹಸ್ರನಾಮವೇ ಮೊದಲಾದ ಪುಣ್ಯತಮವಾದ ವಿಚಾರಗಳನ್ನು ಸಮಾಜಕ್ಕೆ ಒದಗಿಸಿದ ಗುರು ವೇದವ್ಯಾಸರು. ಅಂತಹ ಗುರುಗಳನ್ನು ನಮ್ಮ ಶಿಕ್ಷಕರಲ್ಲಿ ನಾವು ಕಾಣಬೇಕು. ಶಿಕ್ಷಕರ ಜೊತೆ ವಿದ್ಯಾರ್ಥಿಗಳು ನಯ ವಿನಯದಿಂದ ವರ್ತಿಸಬೇಕು. ಗುರುವನ್ನು ಗೌರವಿಸುವುದು ಸ್ವಾಭಿಮಾನವೃದ್ಧಿಗೆ ಪೂರಕ ಎಂದು ಹಿತನುಡಿದರು. ಗುರುವಿನ ಅಷ್ಟಕವನ್ನು ವಿದ್ಯಾರ್ಥಿಗಳು ಏಕಕಂಠದಿಂದ ಹಾಡಿ ಆನಂದಿಸಿದರು.

ಈ ಸಂದರ್ಭದಲ್ಲಿ ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಮ್., ಶಾಲಾ ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದಾಕ್ಷಾಯಣಿ ಎಸ್. ಕಿಣಗಿ ನಿರೂಪಿಸಿ, ವಂದಿಸಿದರು.

Exit mobile version