ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಗಂಗೊಳ್ಳಿ ಬಂದರು ಬಳಿ ಮಂಗಳವಾರ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿದ್ದ ವೇಳೆ ಅಲೆಗಳ ಅಬ್ಬರಕ್ಕೆ ದೋಣಿ ಮಗುಚಿ ಮೂವರು ಮೀನುಗಾರರು ನಾಪತ್ತೆಯಾಗಿದ್ದು, ಪತ್ತೆ ಕಾರ್ಯಾಚರಣೆ ಮುಂದುವರಿದಿದೆ. ಘಟನಾ ಸ್ಥಳಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡಿ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ವೇಳೆ ಸಂಸದ ಬಿ. ವೈ. ರಾಘವೇಂದ್ರ ಅವರು ಮಾತನಾಡಿ, ಇಂತಹ ಘಟನೆ ನಡೆದಿರುವುದು ವಿಷಾದನೀಯ. ಈಗಾಗಲೇ ಶಾಸಕರು, ಉಡುಪಿ ಸಂಸದರು ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ನಾನು ಕೂಡ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿದ್ದೇನೆ. ನಾಳೆ ಮಧ್ಯಾಹ್ನದ ತನಕ ಮೃತದೇಹವನ್ನು ಹುಡುಕುವ ಕೆಲಸ ಮಾಡಲಾಗುತ್ತದೆ. ಆಗಲೂ ಮೃತದೇಹ ಪತ್ತೆಯಾಗದಿದ್ದರೇ, ಹೆಲಿಕಾಪ್ಟರ್ ಮೂಲಕ ಪತ್ತೆ ಕಾರ್ಯಕ್ಕೆ ರಾಜ್ಯ ಸರಕಾರ ಮುಂದಾಗಬೇಕು ಎಂದು ವಿನಂತಿಸಿದರು.

ದೋಣಿ ದುರಂತದಲ್ಲಿ ನಾಪತ್ತೆಯಾಗಿರುವ ಪ್ರತಿ ಮೀನುಗಾರರ ಕುಟುಂಬಕ್ಕೆ ಕೇಂದ್ರ ಸರಕಾರದ ಜನತಾ ಪರಿವಾರ್ ಯೋಜನೆಯಡಿ ರೂ, 5 ಲಕ್ಷ, ನಾಡದೋಣಿ ಸಂಘಟನೆಯಿಂದ ಸಂಕಷ್ಟ ಪರಿಹಾರ ನಿಧಿಯಿಂದ ರೂ.10 ಲಕ್ಷ ನೀಡಲಾಗುತ್ತಿದೆ. ರಾಜ್ಯ ಸರಕಾರ ಕೂಡ ಪ್ರತಿ ಕುಟುಂಬಕ್ಕೆ ರೂ.25 ಲಕ್ಷ ಪರಿಹಾರ ನೀಡಿದರೆ ಕುಟುಂಬಕ್ಕೆ ಸಹಕಾರವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ಕೈಗೊಳ್ಳಲಿ ಎಂದರು.
ಹವಾಮಾನ ಇಲಾಖೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಿದ್ದು ಯಾವ ಮೀನುಗಾರರು ಜೀವ ಪಣಕ್ಕಿಟ್ಟು ಸಮುದ್ರಕ್ಕೆ ಇಳಿಯದಂತೆ ಈ ಸಂದರ್ಭದಲ್ಲಿ ಮನವಿ ಮಾಡುತ್ತೇನೆ. ಜೊತೆಗೆ ಕಾಣೆಯಾಗಿರುವ ಮೀನುಗಾರರ ಕುಟುಂಬಗಳೊಂದಿಗೆ ನಾನು ಸದಾ ಜೊತೆಗಿರುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಡುಪಿ – ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕರಾದ ಕಿರಣ್ ಕೊಡ್ಗಿ, ಉಡುಪಿ ಎಸ್ಪಿ ಹರಿರಾಂ ಶಂಕರ್, ಕರಾವಳಿ ಕಾವಲು ಪಡೆ ಎಸ್ಪಿ ಮಿಥುನ್, ಕುಂದಾಪುರ ಡಿವೈಎಸ್ಪಿ ಸೇರಿದಂತೆ ಇನ್ನತರರು ಉಪಸ್ಥಿತರಿದ್ದರು.
ಘಟನಾ ಸ್ಥಳಕ್ಕೆ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಭೇಟಿ ನೀಡಿ ಪತ್ತೆ ಕಾರ್ಯಾಚರಣೆಗೆ ಸೂಕ್ತ ನೆರವು ನೀಡುವಂತೆ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಬೈಂದೂರು ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ ಸೇರಿದಂತೆ ಹಲವರು ಘಟನಾ ಸ್ಥಳಕ್ಕೆ ಪ್ರತ್ಯೇಕ ಮಾಹಿತಿ ನೀಡಿದ್ದಾರೆ.