ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿನ 1994-96ನೇ ಸಾಲಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಕೊಡುತ್ತಿರುವ ಪ್ರೋತ್ಸಾಹ ಧನದ ವಿತರಣೆ ಕಾರ್ಯಕ್ರಮ ನಡೆಯಿತು.
ಇದು ಹತ್ತನೇ ವರ್ಷದ ಕಾರ್ಯಕ್ರಮವಾಗಿದ್ದು ಈ ವರ್ಷ ದ್ವಿತೀಯ ಪಿ. ಯು.ಸಿ.ವಾರ್ಷಿಕ ಪರೀಕ್ಷೆಯಲ್ಲಿ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಅತ್ಯಧಿಕ ಅಂಕಗಳಿಸಿದ ದೀಪಕ್ ಶೆಟ್ಟಿ ಅವರಿಗೆ 15 ಸಾವಿರ ರೂಪಾಯಿ ಪ್ರೋತ್ಸಾಹ ಧನವನ್ನು ನೀಡಲಾಯಿತು.
1994-96 ನೇ ಸಾಲಿನ ಹಳೆ ವಿದ್ಯಾರ್ಥಿಗಳ ಪ್ರತಿನಿಧಿಯಾಗಿ ಯು .ಎಸ್. ಎ. ನ ಬೋಸ್ಟನ್‌ನ ಟಾಕೆಡ ಫಾರ್ಮಸಿಟಿಕಲ್ಸ್ ನಲ್ಲಿ ಎಸೋಸಿಯೇಟ್ ಡೈರೆಕ್ಟರ್ ಆಗಿರುವ ದೀಪಕ್ ಕಂಬದಕೋಣೆ ಅವರು ಆಗಮಿಸಿ ಮಾತನಾಡಿ, ಯಾವುದೇ ಸಂಸ್ಥೆಯಲ್ಲಿ ಕಲಿತರೂ ಮಕ್ಕಳ ಸ್ವ ಪ್ರಯತ್ನವೇ ಮುಖ್ಯ ಹಾಗೂ ಸಂವಹನ ಕಲೆಯನ್ನು ಈಗಿನಿಂದಲೇ ಉತ್ತಮಪಡಿಸಿಕೊಳ್ಳಬೇಕು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪಿಯುಸಿ ಮುಗಿದ ತಕ್ಷಣ ಇರುವಂತಹ ವಿಫುಲ ಅವಕಾಶಗಳ ಬಗ್ಗೆ ಕೂಡ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಸುಜಾತ ಎಂ. ಅವರು ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆ ಮಾತ್ರ ಗುರಿಯಾಗಿಸಿಕೊಳ್ಳದೆ ಜ್ಞಾನವನ್ನು ಗಳಿಸುವತ್ತ ಗಮನ ಹರಿಸಬೇಕು ಎಂದು ಹೇಳಿದರು.
ಇತಿಹಾಸ ಉಪನ್ಯಾಸಕರಾದ ಗಣೇಶ ಎಂ. ಮತ್ತು ಅರ್ಥಶಾಸ್ತ್ರ ಉಪನ್ಯಾಸಕಿ ನೇತ್ರಾವತಿ ಉಪಸ್ಥಿತರಿದ್ದರು. ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸಿಂಚನ ಪ್ರಾರ್ಥಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ಸಾವಿತ್ರಿ ಎಸ್. ಕಾರ್ಯಕ್ರಮವನ್ನು ನಿರೂಪಿಸಿ, ಭೌತಶಾಸ್ತ್ರ ಉಪನ್ಯಾಸಕಿ ಗಾಯತ್ರಿ ಭಟ್ ಸ್ವಾಗತಿಸಿ, ದೈಹಿಕ ಶಿಕ್ಷಣ ಉಪನ್ಯಾಸಕರಾದ ಜೀವನ್ ಕುಮಾರ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.

