Site icon Kundapra.com ಕುಂದಾಪ್ರ ಡಾಟ್ ಕಾಂ

ನಕಲಿ ಆಧಾರ್ ಕಾರ್ಡ್‌ ಹೊಂದಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ: ಉಡುಪಿ ಡಿಸಿ

ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆ ಜೋಡಿಸುವುದು ಕಡ್ಡಾಯ.

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ:
ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ತಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ಗೆ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ತಪ್ಪದೇ ಆಧಾರ್ ಲಿಂಕ್ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಎಂದರು.

ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಕಾರ್ನ್ಪರೆನ್ಸ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಆಧಾರ್ ಮಾನಿಟರಿಂಗ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಈವರೆಗೆ 14,11,209 ಜನರು ಆಧಾರ್ ಕಾರ್ಡ್ ಅನ್ನು ಹೊಂದಿದ್ದು, ಅವರಲ್ಲಿ 13,42,275 ಜನರು ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಂಡು ಶೇ. 68.93 ರಷ್ಟು ಆಗಿದೆ. ಬಾಕಿ ಉಳಿದ ಪ್ರತಿಯೊಬ್ಬರೂ ತಮ್ಮ ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆಯನ್ನು ಶೀಘ್ರದಲ್ಲಿಯೇ ಅಪ್‌ಡೇಟ್ ಮಾಡಿಸಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿರುವ 15 ವರ್ಷ ಮೇಲ್ಪಟ್ಟ ಆಧಾರ್ ಕಾರ್ಡ್ ಹೊಂದಿರುವ ವಿದ್ಯಾರ್ಥಿಗಳು ಆಧಾರ್ ಸೆಂಟರ್‌ಗಳಿಗೆ ತೆರಳಿ ತಮ್ಮ ಬೆರಳಚ್ಚು ನೀಡಿ, ಆಧಾರ್ ಕಾರ್ಡ್ಗಳನ್ನು ಸಕ್ರೀಯಗೊಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ಆಧಾರ್ ನಿಷ್ಕಿೃಯಗೊಳ್ಳಲಿದ್ದು, ಪ್ರಸ್ತುತ 41,115 ಯುವಜನರ ಬಯೋಮೆಟ್ರಿಕ್ ನೀಡುವುದು ಬಾಕಿ ಇದೆ ಇದರಿಂದ ಭವಿಷ್ಯದಲ್ಲಿ ಯಾವುದೇ ಪರೀಕ್ಷೆಗಳನ್ನು ತೆಗೆದುಕೊಳ್ಳಲು ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಬಯೋಮೆಟ್ರಿಕ್ ನೀಡಿ, ಅಪ್‌ಡೇಟ್ ಮಾಡಿಕೊಳ್ಳಬೇಕೆಂದರು.

ಅಂಗನವಾಡಿ ಕೇಂದ್ರಗಳಿಗೆ ಪೋಷಣ್ ಟ್ರ್ಯಾಕರ್ 45,832 ಮಕ್ಕಳು ದಾಖಲಾಗಿದ್ದು, ಅವರಲ್ಲಿ 33,425 ಮಕ್ಕಳಿಗೆ ಆಧಾರ್ ಕಾರ್ಡ್ ಹೊಂದಿದ್ದಾರೆ. ಬಾಕಿ ಉಳೀದ 11,947 ಮಕ್ಕಳಿಗೂ ಆಧಾರ್ ಕಾರ್ಡ್ ಹೊಂದುವುದು ಅವಶ್ಯ. ತಮ್ಮ ಹತ್ತಿರದ ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಪೋಷಕರು ತಮ್ಮ ಮಕ್ಕಳ ಆಧಾರ್ ನೋಂದಣಿಯನ್ನು ಮಾಡಿಸಬೇಕು ಎಂದರು.

ಆಧಾರ್ ಕಾರ್ಡ್ ಹೊಂದಿರುವರು ತಮ್ಮ ಆಧಾರ್ ಬಗ್ಗೆ ಮಾಹಿತಿ ಪರಿಶೀಲಿಸಲು ಇಚ್ಛಿಸಿದ್ದಲ್ಲಿ ಪ್ಲೇಸ್ಟೋರ್ ಮೂಲಕ M-Aadhar App ನಲ್ಲಿ ಡೌನ್‌ಲೋಡ್ ಮಾಡಿಕೊಂಡು ನೋಡಿಕೊಳ್ಳಬಹುದಾಗಿದ್ದು, ಸಾರ್ವಜನಿಕರು ಇದರಸದ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದರು.

ಹೊರರಾಜ್ಯ ಹಾಗೂ ವಿದೇಶಗಳಿಂದ ಬಂದಿರುವ ಜನರು ಸಹ ಸುಳ್ಳು ದಾಖಲೆ ಪತ್ರಗಳನ್ನು ನೀಡಿ ಆಧಾರ್ ನೋಂದಣಿಗೆ ಮುಂದಾಗುವ ಸಾಧ್ಯತೆಗಳಿರುತ್ತದೆ. ಈ ಬಗ್ಗೆ ಎಚ್ಚರ ವಹಿಸಬೇಕು. ಕೆಲವರು ನಕಲಿ ಆಧಾರ್ ಪ್ರತಿಗಳನ್ನು ಹೊಂದಿರುವ ಬಗ್ಗೆ ಕ್ಯೂ ಆರ್ ಕೋಡ್ ಅನ್ನು ಪರಿಶೀಲಿಸುವುದರೊಂದಿಗೆ ಆಧಾರ್ ಕಾರ್ಡ್ನ ನೈಜತೆಯನ್ನು  ಪರಿಶೀಲಿಸಬೇಕು ಎಂದ ಅವರು, ಸುಳ್ಳು ದಾಖಲೆಗಳನ್ನು ನೀಡಿ ಆಧಾರ್ ಕಾರ್ಡ್ ಪಡೆಯಲು ಮುಂದಾಗುವುದು ಹಾಗೂ ನಕಲಿ ಆಧಾರ್ ಕಾರ್ಡ್‌ಗಳನ್ನು ಹೊಂದಿದ್ದಲ್ಲಿ ಅಂತಹವರ ಮೇಲೆ ಪೊಲೀಸ್  ಇಲಾಖೆಯು ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.  

ಜನನ ಪ್ರಮಾಣ ಪತ್ರ ಹಾಗೂ ಶಾಲೆಯ ದಾಖಲೆಗಳಲ್ಲಿ ಹೆಸರು ಬದಲಾವಣೆ ಹಿನ್ನೆಲೆ ಕೆಲವು ವಿದ್ಯಾರ್ಥಿಗಳು, ವೃದ್ಧಾಶ್ರಮದಲ್ಲಿರುವ ಹಿರಿಯ ನಾಗರಿಕರು ಹಾಗೂ ಹಾಸಿಗೆ ಹಿಡಿದ ಕೆಲವು ಅಂಗವಿಕರುಗಳು ಆಧಾರ್ ಕಾರ್ಡ್ ಅನ್ನು ಮಾಡಿಸಿಕೊಳ್ಳಲು ಸಮಸ್ಯೆ ಉಂಟಾಗುತ್ತಿದೆ. ಇವುಗಳನ್ನು ಕೂಡಲೇ ಬಗೆಹರಿಸಿ ಅವರಿಗೂ ಸಹ ಆಧಾರ್ ಕಾರ್ಡ್ ಪಡೆಯಲು ಅನುವು ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಯು.ಐ.ಡಿ.ಎ.ಐ ಉಪನಿರ್ದೇಶಕ ಗುಲ್ಷನ್ ಕುಮಾರ್ ಸಿಂಗ್, ಅಸಿಸ್ಟೆಂಟ್ ಮ್ಯಾನೆಜರ್ ಮೊಹಮ್ಮದ್ ಮೂಸಾಬ್ ವಿಡಿಯೋ ಕಾನ್ಫ್ರೆನ್ಸ್ ಮೂಲಕ ಭಾಗವಹಿಸಿದ್ದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯಕ್, ಡಿಡಿಪಿಐ ಮಾರುತಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Exit mobile version