ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸೇವೆ, ಸಂಸ್ಕೃತಿ, ಸಮ್ಮಿಲನ ಎಂಬ ಧ್ಯೇಯದೊಂದಿಗೆ ಬೆಂಗಳೂರಿನಲ್ಲಿ ನೆಲೆಸಿರುವ ಕುಂದಾಪುರ ಮೂಲದ ಉತ್ಸಾಹಿ ಯುವ ಸಮೂಹದ ತಂಡ – ́ಟೀಮ್ ಕುಂದಾಪುರಿಯನ್ಸ್ʼ ನೇತೃತ್ವದಲ್ಲಿ ಪ್ರತಿವರ್ಷದಂತ ಈ ಭಾರಿಯೂ ʼಕುಂದಾಪ್ರ ಕನ್ನಡ ಉತ್ಸವ 2025ʼ ಅದ್ದೂರಿಯಾಗಿ ಆಯೋಜಿಸಲಾಗಿದೆ. ವಿಶ್ವ ಕುಂದಾಪ್ರ ಕನ್ನಡದ ದಿನಾಚರಣೆ ಅಂಗವಾಗಿ ಆಯೋಜಿಸಲಾಗುತ್ತಿರುವ ಈ ಉತ್ಸವವು ಜುಲೈ 20ರ ಭಾನುವಾರ ಬೆಳಿಗ್ಗೆ 8:30ರಿಂದ ಮೊದಲ್ಗೊಂಡು ಸಂಜೆಯ ತನಕ ಬೆಂಗಳೂರು ಬಸವೇಶ್ವರ ನಗರದ ನೇತಾಜಿ ಮೈದಾನದಲ್ಲಿ ನಡೆಯಲಿದೆ. ಕ್ರೀಡೆ, ಸಂಸ್ಕೃತಿ, ನಡಿತೋರಣ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳು ದಿನವಿಡಿ ಕುಂದಾಪ್ರ ಕನ್ನಡ ಉತ್ಸವದಲ್ಲಿ ಇರಲಿವೆ.
ಮೆರವಣಿಗೆಯೊಂದಿಗೆ ಚಾಲನೆ:
ಜು.20ರ ಬೆಳಿಗ್ಗೆ 8.30ಕ್ಕೆ ಆರಂಭ ರಾಜಾಜಿನಗರ ಮೆಟ್ರೋ ನಿಲ್ದಾಣದಿಂದ ನೇತಾಜಿ ಮೈದಾನದವರೆಗೆ ಕೊಲ್ಲೂರು ತಾಯಿ ಮೂಕಾಂಬಿಕೆಯ ಟ್ಯಾಬ್ಲೋ ಮೆರವಣಿಗೆ – ಸಂಕಲ್ಪ ಯಾತ್ರೆ ನಡೆಯಲಿದ್ದು, ಪೇಜಾವರ ಮಠ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ನಿರಂಜನಿ ಅಖಾಡ ನಾಗಸಾಧು ಶ್ರೀ ಧನಂಜಯಗಿರಿ ಮಹಾರಾಜ್ ಅವರ ದಿವ್ಯ ಸಾನಿಧ್ಯವಿರಲಿದೆ.
ವೈವಿದ್ಯಮಯ ಕಾರ್ಯಕ್ರಮಗಳು
ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಂತ್ರಮಹಿಮೆ – ಯಕ್ಷವೈಭವ, ಒಡ್ಲ್ – ಕುಂದಾಪುರದ ಸಾಂಸ್ಕೃತಿಕ ಕಲೆಗಳ ನೃತ್ಯರೂಪಕ, ದಿಮ್ಸಾಲ್ – ಗುಮ್ಟಿ – ಒಳಲ್ – ಹೌಂದರಾಯನ ವಾಲ್ಗ – ಸ್ವಾಮಿಕೋಲ, ಕಟ್ಟೆ ಪಂಚಾಯ್ತಿ, ಹಾಡು ಸಂತೋಷಕ್ಕೆ – ಸಂಗೀತ ಕಾರ್ಯಕ್ರಮ, ರಂಗ್ – ಮಕ್ಕಳಿಂದ ವಿವಿಧ ವಿಭಿನ್ನ ಕಾರ್ಯಕ್ರಮ, ಹಂಬ್ಲ್- ಹಳೆ ಕಾಲದ ವಸ್ತುಗಳ ಪ್ರದರ್ಶನ, ಸಂಸ್ಕ್ರತಿ ಶಿಬಿರ – ಮರೆಯುತ್ತಿರೋ ಕಲೆ ಸಂಸ್ಕ್ರತಿಗಳ ಕಲಿಕಾ ಶಿಬಿರ, ಬೆನ್ ಚೆಂಡ್ – ಕುಂದಗನ್ನಡದ ಆಟೋಟ ಸ್ಪರ್ಧೆ, ಕೈಕೋಚ್ – ಸಾಂಸ್ಕೃತಿಕ ಸ್ಪರ್ಧೆಗಳು, ಕಾಂತಾರ – ಇದ್ ಆತರ ಈತರ ಅಲ್ಲ ಎಂಬ ವಿಶೇಷ ಸ್ಪರ್ಧೆಯ ಜೊತೆಗೆ ಸಮಾರೋಪ ಸಮಾರಂಭದಲ್ಲಿ ಕುಂದಾಪ್ರ ರತ್ನ – ಕುಂದಾಪ್ರ ಸನ್ಮಾನ – ಕುಂದಾಪ್ರ ಯುವಸಿರಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಕಾರ್ಯಕ್ರಮಕ್ಕೆ ವಿವಿಧ ಗಣ್ಯರು:
ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಕ್ಕೆ ವಿವಿಧ ಗಣ್ಯರು ಜೊತೆಯಾಗಲಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರುಗಳಾದ ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಗಂಟಿಹೊಳೆ ಹಾಗೂ ಸುರೇಶ್ ಕುಮಾರ್ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರು, ಸಿನಿಮಾ ತಾರೆಯರು ಭಾಗವಹಿಸಲಿದ್ದಾರೆ.

