ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಪಾಲಕರ ಶಿಕ್ಷಕರ ಮತ್ತು ಆಡಳಿತ ಮಂಡಳಿಯ ಸಮಾಲೋಚನ ಸಭೆಯು ನಡೆಯಿತು.
ಶಾಲೆಯ ವಾರ್ಷಿಕಪತ್ರಿಕೆ ಜ್ಯೋತಿಷ್ಮತಿಯನ್ನು ಉದ್ಘಾಟಿಸಿ, ಸಭೆಯ ಅಧ್ಯಕ್ಷತೆಯನ್ನು ನಿರ್ವಹಿಸಿದ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷರಾದ ಎಲ್. ಟಿ ತಿಮ್ಮಪ್ಪನವರು ಮಾತನಾಡಿ, ಶಾಲೆಯ ಊಟೋಪಚಾರವು ಇಲ್ಲಿನ ವಾತಾವರಣಕ್ಕೆ ಹೊಂದಿಕೆಯಾಗುವಂತಿದ್ದು, ಅತಿಖಾರ, ಉಪ್ಪು, ಸಿಹಿಗಳಿಂದ ಮುಕ್ತವಾಗಿದ್ದು, ಆರೋಗ್ಯದಾಯಕವಾಗಿದೆ. ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಯಾವ ಶಿಸ್ತನ್ನು ರೂಢಿಸಿಕೊಂಡಿರುವರೋ ಅದನ್ನು ಮನೆಯಲ್ಲೂ ಮುಂದುವರಿಸಲು ಪಾಲಕರು ಪ್ರೇರೇಪಿಸಬೇಕು. ಮಕ್ಕಳ ಪ್ರೀತಿಯನ್ನು ಉಳಿಸಿ, ಬೆಳೆಸಿಕೊಳ್ಳಿ. ಎನ್ನುತ್ತಾ ಹಿತವಚನಗಳನ್ನಾಡಿದರು.

ಈ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಂಗಳೂರು ಅಕಾಡೆಮಿಕ್ಸ್ ಮತ್ತು ಟ್ರೈನಿಂಗ್ ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಪರಿಷತ್ ನಿರ್ದೇಶಕರಾದ ಡಾ. ಸಿ. ಕೆ. ಮಂಜುನಾಥ ಅವರು ಮಾತನಾಡಿ, ಭಾರತ ಈ 47% ನಷ್ಟು ಯುವಕರಿಂದ ಕೂಡಿದ ದೇಶ. ಯುವಕರಾಗಲಿರುವ ಮಕ್ಕಳಲ್ಲಿ ಸ್ಪರ್ಧಾತ್ಮಕವಾದ ಜಗತ್ತಿನಲ್ಲಿ ಬದುಕಲು ಹೊಸ ಹೊಸ ನೀತಿಗಳ ಅರಿವು ಅತ್ಯಗತ್ಯ. ಶಾಲಾ ಪಠ್ಯ ಅಧ್ಯಯನ ಮತ್ತು ಅದರಲ್ಲಿ ಪೂರ್ಣಾಂಕವನ್ನು ಗಳಿಸುವುದಷ್ಟೇ ವಿದ್ಯಾರ್ಥಿಯ ಗುರಿಯಾಗಿರಬಾರದು. ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿ ಈ ಶಾಲೆಯಲ್ಲಿ ನಡೆಯುತ್ತಿದೆ ಎಂದು ಸ್ಪರ್ಧಾತ್ಮಕವಾದ ಪರೀಕ್ಷೆಗಳ ಬಗ್ಗೆ ತಿಳಿಸುತ್ತಾ ನುಡಿದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಉಪಾಧ್ಯಕ್ಷರಾದ, ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿಗಳಾದ ವೇದಮೂರ್ತಿ ಬಾಲಚಂದ್ರ ಭಟ್ಟರು ಮಾತನಾಡುತ್ತಾ ವಿಶೇಷ ಚೈತನ್ಯವುಳ್ಳ ಮಕ್ಕಳೇ ಸಾಧನೆ ಮಾಡುತ್ತಿರುವಾಗ ಮಕ್ಕಳು ಚೈತನ್ಯಪೂರ್ಣರಾಗಿ ಬೆಳೆಯಲು ಪಾಲಕರ ಪ್ರೋತ್ಸಾಹ ಅತ್ಯಗತ್ಯ. ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳೇ ಆಸ್ತಿಯಾಗುವಂತೆ ಮಾಡಿಕೊಳ್ಳಬೇಕು ಎಂದು ಸ್ವಾನುಭವದ ಮೂಲಕ ತಿಳಿಸಿದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿಗಳಾದ ಎಸ್. ನಾರಾಯಣ ರಾವ್ ತಮ್ಮ ಅಧ್ಯಾಪನ ಜೀವನದ ಅನುಭವಗಳ ಜೊತೆ ಜೊತೆಯಲ್ಲಿ ಜ್ಞಾನದ ಮಹತ್ವವನ್ನು ವಿವರಿಸಿ, ಕರ್ಣನ ಸ್ಥಿತಿಯನ್ನು ವರ್ಣಿಸಿ, ನುಡಿಯುತ್ತಾ ಮಕ್ಕಳು ಮಕ್ಕಳ ಮಧ್ಯೆ ಹೋಲಿಕೆ ಮಾಡಬಾರದು. ಉತ್ತಮ ಸಂಸ್ಕಾರಗಳನ್ನು ನೀಡಬೇಕು. ಸಂಸ್ಕಾರಗಳಿಂದಷ್ಟೇ ಆತ್ಮಜ್ಞಾನ ಸಾಧ್ಯ. ಏನೇ ಉದ್ಯೋಗ ಮಾಡಿದರೂ ಮಗು ನಾಳೆ ಮಾನವನಾಗಿರಲರಿತಿರಬೇಕು. ತಂದೆ ತಾಯಿ ಗುರು ಹಿರಿಯರನ್ನು ಗೌರವಿಸುವಂತೆ ನಾವು ಬೆಳೆಸಬೇಕು.
ಮನಸ್ಸು ಹೇಳಿದಂತೆ ಸ್ವಚ್ಛಂದವಾಗಿ ತಿರುಗದೆ, ಬುದ್ಧಿ ಹೇಳಿದ್ದನ್ನು ಕೇಳುವ ಪ್ರಜೆಯನ್ನಾಗಿಸಬೇಕು. ಅಕ್ಷರಸ್ಥರಿಂದಲೇ ತುಂಬಿದ ಭಾರತ ಅವಿದ್ಯಾವಂತರ ದೇಶವಾಗದಂತೆ ವಿನಯಾದಿಗುಣಭರಿತ ಜನಾಂಗವನ್ನು ಬೆಳೆಸಬೇಕು. ಆತ್ಮಗೌರವ ಹಾಗೂ ದೇವರ ಭಯವಿರುವ ಮಾನವರನ್ನಾಗಿಸಬೇಕು. ಮಕ್ಕಳ ಬುದ್ಧಿಶಕ್ತಿಯಲ್ಲಿ ನಮ್ಮ ಮನೆ, ನಮ್ಮೂರು, ನಮ್ಮ ದೇವರು, ನಮ್ಮ ಆಚಾರ, ನಮ್ಮ ಸಂಪ್ರದಾಯ, ನಮ್ಮ ರಾಜ್ಯ, ನಮ್ಮ ದೇಶವೆಂಬ ಸ್ವಾಭಿಮಾನ ಹೊಂದುವಂತೆ ಬೆಳೆಸಬೇಕು. ದೇಶದ ಗುರುಪರಂಪರೆ ನೀಡಿದ ಮಾರ್ಗದರ್ಶನವನ್ನು ತಿಳಿದು, ನಡೆದು, ತಿಳಿಸುವಂತೆ ಮಕ್ಕಳನ್ನು ಬೆಳೆಸಬೇಕು. ಎಂದರು.
ಶ್ರೀ ಸಿದ್ಧಿ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ಶರಣ ಕುಮಾರ ಪೋಷಕರ ಅಹವಾಲುಗಳಿಗೆ ಸ್ಪಂದಿಸಿ, ಅವರಿಗೆ ಉತ್ತರಗಳನ್ನು ನೀಡಿ ಸಮಾಧಾನ ಪಡಿಸುತ್ತಾ ಪೋಷಕರ ಬೆಂಬಲವೇ ನಮ್ಮೀ ಸಂಸ್ಥೆಯ ಜೀವಾಳವಾಗಿದೆ. ವಿದ್ಯಾರ್ಥಿಗಳು ದೇವರ ಅದ್ಭುತವಾದ ಸೃಷ್ಟಿ. ಗಾಂಧಾರಿಯಂತೆ ಕುರುಡು ಪ್ರೇಮ ತೋರಿಸದೇ, ಶಬರಿಯಂತೆ ಪ್ರೀತಿ, ಮಮತೆಯನ್ನು ಮಕ್ಕಳಿಗೆ ನೀಡಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿಗಳಾದ ಎನ್. ಪಿ. ನಾರಾಯಣ ಶೆಟ್ಟಿ, ಶಾಲೆಯ ಆಡಳಿತಾಧಿಕಾರಿಗಳಾದ ವೀಣಾ ರಶ್ಮಿ ಎಂ., ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಸುಜಾತಾ ಸದಾರಾಮ, ಪೋಷಕ- ಶಿಕ್ಷಕ – ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿಯಾದ ಸಂಗೀತಾ ಕೆ. ಆರ್. ನಿರೂಪಿಸಿ, ಶಿಕ್ಷಕಿ ವಿನುತಾ ಸ್ವಾಗತಿಸಿ, ಶಿಕ್ಷಕಿ ಅಕ್ಷತಾ ಕೆ. ವಂದಿಸಿದರು.