Site icon Kundapra.com ಕುಂದಾಪ್ರ ಡಾಟ್ ಕಾಂ

ಉಡುಪಿ: ಯುವನಿಧಿ ವಿಶೇಷ ನೋಂದಣಿ ಅಭಿಯಾನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ:
ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಪಂಚಗ್ಯಾರಂಟಿ ಯೊಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯಡಿ 2024-25 ನೇ ಸಾಲಿನಲ್ಲಿ ಅರ್ಜಿ ಸಲ್ಲಿಸದೇ ಇರುವ ಅರ್ಹ ಅಭ್ಯರ್ಥಿಗಳು ಅಗಸ್ಟ್ 7 ರ ವರೆಗೆ ನಡೆಯಲಿರುವ ಯುವನಿಧಿ ವಿಶೇಷ ನೋಂದಣಿ ಅಭಿಯಾನದಲ್ಲಿ ಕರ್ನಾಟಕ ಒನ್, ಗ್ರಾಮ ಒನ್, ಸೇವಾ ಸಿಂಧೂ ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ನೋಂದಣಿ ಹಾಗೂ ನಗರದ ಮಣಿಪಾಲದ ಜಿಲ್ಲಾಧಿಕಾರಿ ಕಛೇರಿ ಸಂಕೀರ್ಣದ ಬಿ. ಬ್ಲಾಕ್ ರೂ. ನಂಬರ್ 201 ಮೊದಲನೆ ಮಹಡಿಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

2024-25 ನೇ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ (ವೃತ್ತಿಪರ ಸೇರಿದಂತೆ) ಹಾಗೂ ಯಾವುದೇ ಡಿಪ್ಲೋಮಾ ಪಡೆದು ನಿರುದ್ಯೋಗಿಯಾಗಿರುವ ಅರ್ಹರಿಗೆ ಯುವನಿಧಿ ಯೋಜನೆಯ ಮೂಲಕ ಪ್ರತಿ ತಿಂಗಳು 3,000 ರೂ. (ಪದವೀಧರ ನಿರುದ್ಯೋಗಿಗಳಿಗೆ) ಹಾಗೂ 1,500 ರೂ. (ಡಿಪ್ಲೋಮಾ ಪಡೆದ ನಿರುದ್ಯೋಗಿಗಳಿಗೆ) ನೇರ ನಗದು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.

ಪ್ರತಿ ತಿಂಗಳು ಸ್ವಯಂ ಘೋಷಣೆ ಕಡ್ಡಾಯ:
ಯುವನಿಧಿ ಯೋಜನೆಯ ಫಲಾನುಭವಿಗಳು ತ್ರೈಮಾಸಿಕ (ಮೂರು ತಿಂಗಳಿಗೊಮ್ಮೆ) ಮೇ, ಅಗಸ್ಟ್, ನವಂಬರ್ ಹಾಗೂ ಫೆಬ್ರವರಿ ಮಾಹೆಗಳಲ್ಲಿ 25 ನೇ ತಾರೀಕಿನ ಒಳಗಾಗಿ ಆನ್‌ಲೈನ್‌ನಲ್ಲಿ ಲಾಗಿನ್ ಆಗಿ ಸ್ವಯಂ ಘೋಷಣೆ ನೀಡಬೇಕು.

ಸ್ವಯಂ ಘೋಷಣೆ ನೀಡದ್ದಿದಲ್ಲಿ ಆ ತಿಂಗಳ ನೇರ ನಗದು ಖಾತೆಗೆ ಜಮೆಯಾಗುವುದಿಲ್ಲ. ಆದ್ದರಿಂದ ಫಲಾನುಭವಿಗಳು ತಪ್ಪದೇ ಸೇವಾ ಸಿಂಧೂ ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಸ್ವಯಂ ಘೋಷಣೆ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ: 0820-2574869 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Exit mobile version