ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪ್ರ ಕನ್ನಡ ಸಂಸ್ಕೃತಿ, ಮುಖ್ಯವಾಗಿ ಭಾಷೆ, ಸಾಹಿತ್ಯ, ಕಲೆ, ಜಾನಪದ ಸೊಗಡು ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಈ ವಿಷಯದಲ್ಲಿ ಅಧ್ಯಯನ ನಡೆಸಬೇಕು. ಗಾದೆ ಹೇಳಲು, ಕುಂದಾಪ್ರ ಕನ್ನಡ ಶಬ್ದಗಳನ್ನು ಬರೆಯಲು ಕುಂದಾಪುರ ತಾಲೂಕಿನಿಂದ ನೂರಾರು ಮಂದಿ ಆಗಮಿಸಿರುವುದು ಸಂತೋಷ ತಂದಿದೆ. ತಮ್ಮ ಊರು, ತಮ್ಮ ಭಾಷೆ, ತಮ್ಮ ಕುಟುಂಬದ ವೃತ್ತಿ, ಮನೆ ಕೆಲಸ, ಪರಿಸರ ರಕ್ಷಣೆ ಎಲ್ಲವನ್ನೂ ಕಲಿತ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮುನ್ನಡೆಯುತ್ತಾರೆ. ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆ ಹಾಗೂ ಭಂಡಾರ್‌ಕಾರ‍್ಸ್ ಕಾಲೇಜು, ಕುಂದಾಪುರ ವಿದ್ಯಾರ್ಥಿಗಳಿಗೆ ಕುಂದಾಪ್ರ ಕನ್ನಡದ ಬಗ್ಗೆ ಆಸಕ್ತಿ ಬೆಳೆಸುತ್ತಿರುವುದು ಅಭಿನಂದನೀಯ ಎಂದು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಮಾಜ ಸೇವಕ, ಕೊರ್ಗಿ ವಿಠಲ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ಕೊರ್ಗಿ ವಿಠಲ ಶೆಟ್ಟಿ ಹೇಳಿದರು.
ಅವರು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನ ರೇಡಿಯೋ ಕುಂದಾಪ್ರ 89.6 ಸಭಾಂಗಣದಲ್ಲಿ ಏರ್ಪಡಿಸಿದ ಕುಂದಾಪ್ರ ಕನ್ನಡ ಗಾದೆಗಳನ್ನು ಹೇಳುವ ಸ್ಪರ್ಧೆ ಹಾಗೂ ಕುಂದಾಪ್ರ ಕನ್ನಡ ಶಬ್ದಗಳನ್ನು ಬರೆಯುವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್‌ಕಾರ‍್ಸ್ ಕಾಲೇಜಿನ ಪ್ರಾಂಶುಪಾಲ ಡಾ| ಶುಭಕರಾಚಾರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ವಿದ್ಯುತ್ ಗುತ್ತಿಗೆದಾರ ಕೆ. ಆರ್. ನಾಕ್, ಭಂಡಾರ್‌ಕಾರ‍್ಸ್ ಪ. ಪೂ. ಕಾಲೇಜಿನ ಪ್ರಾಂಶುಪಾಲ ಡಾ| ಜಿ. ಎಂ. ಗೊಂಡ, ತೆಂಕನಿಡಿಯೂರು ಸರಕಾರಿ ಪ. ಪೂ. ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ, ಕುಂದ ಕನ್ನಡ ಭಾಷಾ ತಜ್ಞ ಕಿಶನ್ ಕೆಂಚನೂರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಹಂದಕುಂದ ಸೋಮಶೇಖರ ಶೆಟ್ಟಿ ಉಪಸ್ಥಿತರಿದ್ದರು.
ಕೊರ್ಗಿ ವಿಠಲ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆ ಸಂಚಾಲಕ ಯು. ಎಸ್. ಶೆಣೈ ಸ್ವಾಗತಿಸಿ, ಕುಂದ ಕನ್ನಡ ಭಾಷಾಭಿವೃದ್ಧಿಗಾಗಿ ವಿವಿಧ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗಾಗಿ ನಡೆಸಲಾಗುತ್ತಿದೆ. ಗ್ರಾಮೀಣ ಪರಿಸರದ ನೂರಾರು ಜಾನಪದ ಕಲಾವಿದರಿಗೆ ರೇಡಿಯೋ ಕುಂದಾಪ್ರ ೮೯.೬ ಎಫ್. ಎಮ್. ಮೂಲಕವೂ ಬೆಳಕಿಗೆ ತರಲಾಗುತ್ತಿದೆ. ಎಂದು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಭೃಂಗ ಕೆ. ಉಡುಪ ಕುಂದ ಗೀತೆ ಹಾಡಿದರು. ಸ್ಪರ್ಧೆಗಳ ತೀರ್ಪುಗಾರರನ್ನು ಗೌರವಿಸಲಾಯಿತು. ಅನಂತಕೃಷ್ಣ ನಾವಡ, ಮಿಥುನ್, ಸಿಂಚನ, ಸಂಜನ, ಪುಣ್ಯವತಿ, ಕುಂದಾಪ್ರ ಕನ್ನಡ ಶಬ್ದ ಬರೆಯುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ರಮ್ಯ, ಅನೂಪ್, ಉರಾಳ, ನಿವೇದಿತಾ, ಸಂದೀಪ, ಗೌತಮ, ಪ್ರತೀಕ್ಷಾ, ಸುಧೀಕ್ಷಾ ಗಾದೆ ಹೇಳುವ ಸ್ಪರ್ಧಿಗಳಿಗೆ ಮಾರ್ಗದರ್ಶನ ಮಾಡಿದರು. ರೇಡಿಯೋ ಕುಂದಾಪ್ರದ ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜು ವ್ಯವಸ್ಥಾಪಕ ಗೋಪಾಲ ನಾಯ್ಕ್ ವಂದಿಸಿದರು.

