Site icon Kundapra.com ಕುಂದಾಪ್ರ ಡಾಟ್ ಕಾಂ

ಜೇಸಿಐ ಕುಂದಾಪುರ ಸಿಟಿ ಪ್ರಾಯೋಜಿತ ನೂತನವಾದ ಜೇಸಿಐ ಗಂಗೊಳ್ಳಿ ಸಂಸ್ಥೆ ಉದ್ಘಾಟನೆ

oplus_0

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಸಮಾಜವನ್ನು ತಿದ್ದಬೇಕಾದರೆ ಅಥವಾ ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಬೇಕಾದರೆ ಸಂಘಗಳ ಪಾತ್ರ ಬಹು ಮುಖ್ಯವಾಗಿರುತ್ತದೆ. ಜೇಸಿಐ, ರೋಟರಿ ಹಾಗೂ ಲಯನ್ಸ್ ಕ್ಲಬ್ ಮನುಕುಲದ ಏಳಿಗೆಗಾಗಿ ಹುಟ್ಟಿಕೊಂಡಿರುವ ಸಂಸ್ಥೆಗಳು. ಯುವ ಜನರನ್ನು ಒಳ್ಳೆ ದಾರಿಗೆ ಕೊಂಡೊಯ್ಯಲು ಮತ್ತು ಅವರ ವ್ಯಕ್ತಿತ್ವ ವಿಕಸನ ಮಾಡಲು ಜೇಸಿಐನಂತಹ ಸಂಸ್ಥೆಗಳು ಸಹಕಾರಿಯಾಗುತ್ತದೆ. ಯುವ ಜನಾಂಗವನ್ನು ವ್ಯವಸ್ಥಿತ ಸನ್ಮಾರ್ಗದಲ್ಲಿ ನಡೆಯುವಂತೆ ಮತ್ತು ಒಳ್ಳೆಯ ನಾಗರಿಕರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರ ಕೆ.ಆರ್. ನಾಯ್ಕ್ ಹೇಳಿದರು.

ಅವರು ಗಂಗೊಳ್ಳಿಯ ಸ.ವಿ. ಪದವಿ ಪೂರ್ವ ಕಾಲೇಜಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಒಳಾಂಗಣದಲ್ಲಿ ಭಾನುವಾರ ಜೇಸಿಐ ಕುಂದಾಪುರ ಸಿಟಿ ಪ್ರಾಯೋಜಿತ ನೂತನವಾದ ಜೇಸಿಐ ಗಂಗೊಳ್ಳಿ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು.

ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷ ಯೂಸೂಫ್ ಸಲೀಂ ಅಧ್ಯಕ್ಷತೆ ವಹಿಸಿದ್ದರು. ಜೇಸಿಐ ರೀಜಿನ್ ಎ. ವಲಯ 15ರ ವಲಯ ಉಪಾಧ್ಯಕ್ಷೆ ಅಶ್ವಿನಿ ಐತಾಳ್ ಅವರು ಜೇಸಿಐ ಗಂಗೊಳ್ಳಿ ಸಂಸ್ಥೆಯ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಿ ಶುಭ ಹಾರೈಸಿದರು.

ಜೇಸಿಐ ಗಂಗೊಳ್ಳಿಯ ನೂತನ ಅಧ್ಯಕ್ಷರಾಗಿ ರೋಶನ್ ಖಾರ್ವಿ, ಕಾರ್ಯದರ್ಶಿಯಾಗಿ ನಾಗರಾಜ ಖಾರ್ವಿ ಹಾಗೂ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.

ಇದೇ ಸಂದರ್ಭ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರ್ಯಾಂಕ್ ವಿಜೇತ ಸುಶ್ಮಿತಾ ಗಾಣಿಗ ಮತ್ತು ಮನಾಲಿ ಹಾಗೂ ಶೌರ್ಯ ವಿಪತ್ತು ನಿರ್ವಹಣೆ ಘಟಕವನ್ನು ಗೌರವಿಸಲಾಯಿತು. ಗಂಗೊಳ್ಳಿಯ ನಿವೇದಿತಾ ಶಿಶು ಮಂದಿರಕ್ಕೆ ಕೊಡುಗೆಯಾಗಿ ನೀಡಿದ ಇನ್ವರ್ಟರ್‌ನ್ನು ಹಸ್ತಾಂತರಿಸಲಾಯಿತು. ‌

ಜೇಸಿಐ ಕುಂದಾಪುರ ಸಿಟಿ ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ಕುಲಾಲ್ ಶುಭಾಶಂಸನೆಗೈದರು. ಗಿರೀಶ್ ಖಾರ್ವಿ ಸನ್ಮಾನಿತರನ್ನು ಪರಿಚಯಿಸಿದರು. ಜೇಸಿಐ ಕುಂದಾಪುರ ಸಿಟಿ ಕಾರ್ಯದರ್ಶಿ ಕಿರಣ್ ದೇವಾಡಿಗ ಸ್ವಾಗತಿಸಿ, ಕಾರ್ಯದರ್ಶಿ ನಾಗರಾಜ ಖಾರ್ವಿ ವಂದಿಸಿದರು.

Exit mobile version