Kundapra.com ಕುಂದಾಪ್ರ ಡಾಟ್ ಕಾಂ

ಡಿ.5-6: ಶ್ರೀ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಸರಕಾರಿ ಪ್ರೌಢಶಾಲೆ ಸುವರ್ಣ ಮಹೋತ್ಸವ ಸಂಭ್ರಮ

ಕುಂದಾಪುರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಭವಿಷ್ಯದ ಭದ್ರ ಬುನಾದಿಯಾದ ಹಕ್ಲಾಡಿ ಸೂರಪ್ಪ ಶೆಟ್ಟಿ ಸರಕಾರಿ ಪ್ರೌಢಶಾಲೆ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿದೆ. ಸುವರ್ಣ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಶಾಲೆಯ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಶಿಕ್ಷಕರು, ಎಸ್.ಡಿ.ಎಂ.ಸಿ ಸದಸ್ಯರು, ಊರವರು ಒಂದಾಗಿ ನಿಂತಿದ್ದು ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ಜರುಗಲಿದೆ.

ಡಿಸೆಂಬರ್ 5ರ ಬೆಳಿಗ್ಗೆ 8ಗಂಟೆಗೆ ಮಾಣಿಕೊಳಲು ಶ್ರೀಚನ್ನಕೇಶ್ವರ ದೇವಸ್ಥಾನದಿಂದ ಕುಂದರಬಾಡಿ ಮಾಸ್ತಿಕಟ್ಟೆಯವರೆಗೆ ಸುವರ್ಣ ಪುರಮೆರವಣಿಗೆ ನಡೆಯಲಿದೆ. 9ಗಂಟೆಗೆ ಸುವರ್ಣ ಮಹೋತ್ಸವದ 1ನೇ ವೇದಿಕೆಯಲ್ಲಿ ಆರಂಭಗೊಳ್ಳುವ ಕಾರ್ಯಕ್ರಮಕ್ಕೆ ಗೌರಿ ದೇವಾಡಿಗ ಚಾಲನೆ ನೀಡಲಿದ್ದಾರೆ, ಶಾಲಾ ಮುಖಮಂಟಪವನ್ನು ಆನಗಳ್ಳಿ ಶ್ರೀ ನರಸಿಂಹ ಶೆಟ್ಟಿ ಬಾಳೆಮನೆ ಉದ್ಘಾಟಿಸಲಿದ್ದಾರೆ. ರಾತ್ರಿ 7ಗಂಟೆಗೆ ಸುವರ್ಣ ಮಹೋತ್ಸವ 2ನೇ ವೇದಿಕೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ವಹಿಸಲಿದ್ದು, ಉಸ್ತುವಾರಿ ಮತ್ತು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಸುವರ್ಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಹೂವಿ ನಾಟಕ, ಹಿರಿಯ ವಿದ್ಯಾರ್ಥಿಗಳಿಂದ ನೃತ್ಯ ವೈವಿದ್ಯ ಹಾಗೂ ಚೋರ ಚರಣದಾಸ ನಾಟಕ ಹಾಗೂ ಸುಧನ್ವಾರ್ಜುನ ನಾಟಕ ಪ್ರದರ್ಶನಗೊಳ್ಳಲಿದೆ.

ಡಿಸೆಂಬರ್ 6ರಂದು ಸುವರ್ಣ ಮಹೋತ್ಸವ ವೇದಿಕೆ 3ರಲ್ಲಿ ನಡೆಯವ ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಹಕ್ಲಾಡಿ ವಹಿಸಲಿದ್ದು ವಿವಿಧ ಗಣ್ಯರು ಉಪಸ್ಥಿತರಿರಲಿದ್ದಾರೆ. ಬಳಿಕ ಮೂಡುಬಿದ್ರೆ ಆಳ್ವಾಸ್ ವಿದ್ಯಾರ್ಥಿಗಳಿಂದ ಸುವರ್ಣ ಸಾಂಸ್ಕೃತಿಕ ನೃತ್ಯ ವೈವಿಧ್ಯ ಜರುಗಲಿದ್ದು ಎಲ್ಲಾ ಕಾರ್ಯಕ್ರಮದಲ್ಲೂ ಭಾಗಿಯಾಗುವಂತೆ ಶಾಲಾ ಮುಖ್ಯೋಪಧ್ಯಾಯ ಡಾ. ಕೆ. ಕಿಶೋರಕುಮಾರ್ ಶೆಟ್ಟಿ, ಕಾರ್ಯಾಧ್ಯಕ್ಷ ಸಂತೋಷಕುಮಾರ್ ಶೆಟ್ಟಿ ಹಕ್ಲಾಡಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ, ವಿದ್ಯಾರ್ಥಿ ನಾಯಕಿ ಶಾಂತಿ ತಿಳಿಸಿದ್ದಾರೆ.

Exit mobile version