ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಭಜನೆ ಎಂಬ ಮೂರಕ್ಷರಕ್ಕೆ ಬಹಳ ಮಹತ್ವವಿದ್ದು, ನಮ್ಮಿಂದ ಮನಃಪೂರ್ವಕವಾಗಿ ದೇವರಿಗೆ ನೀಡುವಂತಹ ಒಂದು ಭಾವನಾತ್ಮಕ ಸಂಪತ್ತು. ಭಜನೆಯನ್ನು ಭಕ್ತಿಪೂರ್ವಕವಾಗಿ ಅರ್ಪಿಸಿದರೆ ಭಗವಂತನಿಗೆ ಅದಕ್ಕಿಂತ ದೊಡ್ಡ ಹರಕೆಯಿಲ್ಲ ಎಂದು ತಾಲೂಕು ಭಜನಾ ಪರಿಷತ್ ಗೌರವಾಧ್ಯಕ್ಷ ರಘುರಾಮ ಕೆ. ಪೂಜಾರಿ ಹೇಳಿದರು.
ಅವರು ಇಲ್ಲಿನ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಭಾನುವಾರ ತಾಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತು ವತಿಯಿಂದ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ನಡೆದ ಹಿರಿಯ ಭಜನಾ ಹಾಡುಗಾರರಿಗೆ ಗೌರವಾರ್ಪಣೆ, ಹಾಗೂ ಭಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಲಿಯುಗದಲ್ಲಿ ಭಜನೆಯಿಂದ ಮಾತ್ರ ದೇವರ ಒಲಿಸಿಕೊಳ್ಳಬಹುದು. ಪ್ರಸ್ತುತ ಹಿರಿಯ ಭಜನಾ ಕಲಾವಿದರು ಭಜನೆಯನ್ನು ಶ್ರೇಷ್ಠತೆಯ ಕಡೆಗೆ ಕೊಂಡು ಹೋಗುವ ಕೆಲಸ ಮಾಡಿದ್ದಾರೆ. ಇನ್ನು ಮುಂದಕ್ಕೆ ಇಂದಿನ ಯುವ ಪೀಳಿಗೆ ಭಜನೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕಡೆಗೆ ಹಿರಿಯ ಭಜನಾ ಕಲಾವಿದರು ತಮ್ಮ ಸೇವೆಯನ್ನು ಮಡಿಪಾಗಿಡಬೇಕು ಎಂದರು.
ಭಜನಾ ಪರಿಷತ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಹಿರಿಯ ಭಜನಾ ಹಾಡುಗಾರರಿಗೆ ಗೌರವಾರ್ಪಣೆ ಸಮರ್ಪಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಬಿ. ಕೃಷ್ಣಮೂರ್ತಿ ನಾವಡ, ತಾಲೂಕು ಕೇಂದ್ರ ಸಮಿತಿ ಅಧ್ಯಕ್ಷ ವಾಸು ಮೇಸ್ತ, ಯೋಜನಾಧಿಕಾರಿ ಸಂಜಯ್ ನಾಯ್ಕ್, ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ರಾಮ ಮೇಸ್ತ, ತಾಲೂಕು ಜನಜಾಗೃತಿ ಸಮಿತಿ ಅಧ್ಯಕ್ಷ ಸುಧಾಕರ ಆಚಾರ್ಯ ಇದ್ದರು.
ಸುರೇಖಾ ಪೂಜಾರಿ ಸ್ವಾಗತಿಸಿ, ಭಜನಾ ಪರಿಷತ್ ತಾಲೂಕು ಅಧ್ಯಕ್ಷ ಕೃಷ್ಣ ಪೂಜಾರಿ ಪ್ರಾಸ್ತಾವಿಸಿದರು. ಕಾರ್ಯದರ್ಶಿ ಮಂಜುನಾಥ ಉಳ್ಳೂರು ವರದಿ ಮಂಡಿಸಿದರು. ರಾಜು ಜೋಗಿ ನಿರೂಪಿಸಿ, ಕೃಷ್ಣ ಮರಾಠಿ ವಂದಿಸಿದರು. ಬೆಳಿಗ್ಗೆ 7ರಿಂದ 11ರ ತನಕ ಭಜನೋತ್ಸವ ಜರುಗಿತು.

