Site icon Kundapra.com ಕುಂದಾಪ್ರ ಡಾಟ್ ಕಾಂ

ಸುಜ್ಞಾನ ಪಿಯು ಕಾಲೇಜಿನಲ್ಲಿ ಸಿಎ, ಸಿಎಸ್ ಓರಿಯೆಂಟೇಶನ್ ಕಾರ್ಯಕ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಯಡಾಡಿ-ಮತ್ಯಾಡಿಯಲ್ಲಿರುವ ಸುಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಸೋಮವಾರದಂದು ಸಿಎ ಹಾಗೂ ಸಿಎಸ್ ಫೌಂಡೇಶನ್ ಕೋರ್ಸ್‌ನ  ಓರಿಯೆಂಟೇಶನ್  ಕಾರ್ಯಕ್ರಮವು ಜರುಗಿತು.

ಕೆ.ವಿ.ಸಿ ಸಂಸ್ಥೆಯ ಸಿ.ಎ. ದೀಪಿಕಾ ವಸನಿ ಅವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಕಷ್ಟವೆಂದುಕೊಂಡರೆ ಎಲ್ಲವೂ ಕಷ್ಟವಾಗುತ್ತದೆ. ಹಾಗಾಗಿ ನಿರಂತರ ಅಭ್ಯಾಸದಿಂದ ಸಾಧನೆ ಸಾಧ್ಯವಾಗುತ್ತದೆ. ಬದುಕಿನಲ್ಲಿ ಪರಿಶ್ರಮ  ಅತೀ ಅಗತ್ಯ. ವಿದ್ಯಾರ್ಥಿ ಜೀವನವನ್ನು ಖುಷಿಯಿಂದ ಕಳೆಯುವುದರ ಜೊತೆಗೆ ಪರಿಶ್ರಮದ ಕಡೆ ಗಮನಹರಿಸಿ. ಇದರಿಂದ ನಿಮ್ಮ ಜೀವನ ಚೆನ್ನಾಗಿರುತ್ತದೆ ಎಂದು ಹೇಳಿದರು. ಹಾಗೇ ಸಿಎ, ಸಿಎಸ್ ಕೋರ್ಸ್ ಬಗ್ಗೆ ವಿದ್ಯಾರ್ಥಿಗಳಿಗೆ ಮೌಲ್ಯಯುತವಾದ ಮಾಹಿತಿ ನೀಡಿದರು.

ಸಂಸ್ಥೆಯ ಅಧ್ಯಕ್ಷರಾದ ಡಾ.ರಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,  “ಸಿಎ ಮತ್ತು ಸಿಎಸ್ ಹುದ್ದೆಗಳಿಗೆ ಇರುವ ಬೇಡಿಕೆಯ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಸರಿಯಾದ ರೀತಿಯಲ್ಲಿ ಪರಿಶ್ರಮ ವಹಿಸಿದರೆ ಜೀವನದಲ್ಲಿ ಸಾಧನೆ ಮಾಡಬಹುದು. ಸವಾಲುಗಳನ್ನು ಎದುರಿಸಬಹುದು. ವಿದ್ಯಾರ್ಥಿಗಳಲ್ಲಿ ಆ ಶಕ್ತಿ ಇದೆ” ಎಂದು ಪ್ರೋತ್ಸಾಹದ ಮಾತುಗಳನ್ನಾಡಿದರು.

ಇನ್ನು ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಸೋಶಿಯಲ್ ಮೀಡಿಯಾ, ಟಿವಿ ಎಂದು ಸಮಯವನ್ನು ದುರುಪಯೋಗಪಡಿಸಿಕೊಳ್ಳದೇ, ಬದುಕಿನಲ್ಲಿ ಒಂದು ಗುರಿ ಇಟ್ಟುಕೊಂಡು ಕನಸನ್ನು ನನಸು ಮಾಡಿಕೊಳ್ಳಬೇಕು. ಸಿಎ, ಎಸ್‌ ನಂತಹ ವೃತ್ತಿಪರ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು  ಹೇಳಿದರು.

ಕಾರ್ಯದರ್ಶಿ ಪ್ರತಾಪ್ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಮಂಗಳೂರಿನ ಕೆ.ವಿ.ಸಿ ಅಕಾಡೆಮಿಯ ನಿರ್ದೇಶಕರಾದ ಸಿಎ ಜೇಸನ್ ಕ್ಯಾಸ್ತಲಿನೊ, ಕುಂದಾಪುರದ ಚಾರ್ಟೆಡ್ ಅಕೌಂಟೆಂಟ್ ಸಿಎ ನಾಗರಾಜ್ ಹೆಬ್ಬಾರ್, ಕಾಲೇಜಿನ ಭೋದಕ ಹಾಗೂ ಭೋದಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಇಂಗ್ಲಿಷ್ ವಿಭಾಗದ ಮುಖ್ಯಸ್ಥ ವಿನಯ್ ಕುಮಾರ್ ನಿರೂಪಿಸಿದರು. ಪ್ರಾಂಶುಪಾಲರಾದ ರಂಜನ್ ಬಿ.ಶೆಟ್ಟಿ ಸ್ವಾಗತಿಸಿದರೆ, ಸಿಎ ಫೌಂಡೇಶನ್ ಸಂಯೋಜಕ ಪ್ರಮಥ್ ಶೆಟ್ಟಿ ವಂದಿಸಿದರು.

Exit mobile version