Kundapra.com ಕುಂದಾಪ್ರ ಡಾಟ್ ಕಾಂ

ಜೋಕು ಮಾಡಿದರೆ ಜೋಕೆ !

ಎ.ಎಸ್.ಎನ್. ಹೆಬ್ಬಾರ್.

ಖ್ಯಾತ ಚಿತ್ರನಿರ್ದೇಶಕ ಸತ್ಯಜಿತ್‌ರಾಯ್ ’ಸೋನಾರ್ ಕೆಲ್ಲಾ’ (ಚಿನ್ನದ ಕೋಟೆ) ಎಂಬ ಜನಪ್ರಿಯ ಚಿತ್ರ ನಿರ್ಮಿಸಿದ್ದರು. ಅದರಲ್ಲಿ ಮುಕುಲ್ ಎಂಬ ಹುಡುಗನ ಪಾತ್ರ ಇದೆ. ಈತ ಹಿಂದಿನ ಜನ್ಮದ ನೆನಪಿದ್ದವ. ಅವನ ನೆನಪಿನಲ್ಲಿ ’ಚಿನ್ನದ ಕೋಟೆ’ ಕಾಡುತ್ತಿತ್ತು. ಅವನ ವೈದ್ಯ (ಮಾನಸಿಕ ತಜ್ಞ) ಆ ಕೋಟೆ ಉಂಟಾ ನೋಡಲು ಹುಡುಗನನ್ನು ಆತ ಹೇಳಿದಂತೆ ರಾಜಸ್ಥಾನಕ್ಕೆ ಕರಕೊಂಡು ಹೋಗುತ್ತಾನೆ. ಇದರ ಸುಳಿವರಿತ ದುಷ್ಟರು ಈ ವೈದ್ಯನನ್ನು ’ಕೆಟ್ಟ ಮನುಷ್ಯ, ತೊಲಗು’ ಎಂದು ಬೆಟ್ಟದಿಂದ ತಳ್ಳುತ್ತಾರೆ. ಅವರಲ್ಲೊಬ್ಬ ತಾನೇ ವೈದ್ಯನೆಂದು ನಟಿಸುತ್ತಾನೆ. ಮುಕುಲ್ ತನ್ನ ವೈದ್ಯ ಎಲ್ಲಿ ಎಂದು ಕೇಳಿದಾಗ ಆತ ’ದುಷ್ಟ ವೈದ್ಯ, ಆತನನ್ನು ತೊಲಗಿಸಿದೆ’ ಎನ್ನುತ್ತಾನೆ. ’ನಿನಗೆ ಚಿನ್ನದ ಕೋಟೆ ಕಾಣುತ್ತಿದೆಯಾ ಮುಕುಲ್? ಎಂದು ಕೇಳುತ್ತಾನೆ.

’ದುಷ್ಟನೇ – ತೊಲಗು’
ಇದೇ ಕತೆಯನ್ನು ನೆನಪಿಸಿ ವ್ಯಂಗ್ಯಚಿತ್ರಕಾರನೊಬ್ಬ ಮಮತಾಬ್ಯಾನರ್ಜಿ ಮೇಲೆ ಚಿತ್ರ ಬರೆದುಬಿಟ್ಟ. ಮಮತಾ ದೀದಿ ದಿನೇಶ್ ತ್ರಿವೇದಿ ಎಂಬ ರೈಲ್ವೆ ಮಂತ್ರಿಯನ್ನು ಕಿತ್ತುಹಾಕಿ, ಅವನ ಬದಲಿಗೆ ಮುಕುಲ್ ರಾಯ್‌ನನ್ನು ಮಂತ್ರಿ ಮಾಡಿದ್ದಳಲ್ಲ, ಆ ಸಂದರ್ಭಕ್ಕೆ ರಚಿಸಿದ ವ್ಯಂಗ್ಯಚಿತ್ರ ಅದು. ಆ ಚಿತ್ರದಲ್ಲಿ ಮಮತಾ ರೈಲ್ವೆಯತ್ತ ಬೊಟ್ಟು ಮಾಡಿ ಮುಕುಲ್ ರಾಯ್ ಹತ್ತಿರ ಕೇಳುತ್ತಾಳೆ, ’ನಿನಗೆ ಚಿನ್ನದ ಕೋಟೆ ಕಾಣುತ್ತದಾ ಮುಕುಲ್? ಎಂತ. ಮುಂದಿನ ಚಿತ್ರದಲ್ಲಿ ಮುಕುಲ್ ದಿನೇಶ್ ತ್ರಿವೇದಿಯನ್ನು ತೋರಿಸಿ ಆತ ಕೆಟ್ಟವ ಎನ್ನುತ್ತಾನೆ. ಆಗ ಮಮತಾ, ’ದುಷ್ಟನೇ? ಹಾಗಾದರೆ ತೊಲಗು’ ಎನ್ನುತ್ತಾಳೆ. ಇದು ಒಂದು ಜನಪ್ರಿಯ ಚಲನಚಿತ್ರದ ಕತೆಯನ್ನೇ ಮಮತಾಗೆ ವಿಡಂಬನೆಯಾಗಿ ಚಿತ್ರಿಸಿದ್ದ ಕಾರಣ ಬಂಗಾಲದ ಜನ ದೀದಿ ಬಗ್ಗೆ ನಕ್ಕಿದ್ದೇ ನಕ್ಕಿದ್ದು. ದೀದಿಗೆ ಮಾತ್ರ ವಿಪರೀತ ಕೋಪ ಬಂದುಬಿಟ್ಟಿತ್ತು. ಆ ಕೋಪಕ್ಕೆ ಬಲಿಯಾದವ ಮಾತ್ರ ಆ ವ್ಯಂಗ್ಯಚಿತ್ರಕಾರ ಅಲ್ಲ ! ಪಾಪದ ಒಬ್ಬ ರಸಾಯನಶಾಸ್ತ್ರದ ಪ್ರೊಫೆಸರ್. ಅವರ ಹೆಸರು ಪ್ರೊ.ಅಂಬಿಕೇಶ ಮಹಾಪಾತ್ರ. ಈ ವರ್ಷದ ಎಪ್ರಿಲ್ 12ರ ರಾತ್ರಿ ಗಾರಿಯಾದಲ್ಲಿನ ತನ್ನ ಮನೆಗೆ ಎಂದಿನಂತೆ ಹಿಂದಿರುಗಿ ಬರುತ್ತಿದ್ದ ಈ ಪ್ರೊಫೆಸರ್‌ರನ್ನು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಸಹಿತ ಕೆಲವರು ಅಡ್ಡಗಟ್ಟಿ ಹೊಡೆದರು. ಅವರು ಪೆಟ್ಟುತಿಂದು ಮನೆಗೆ ಬಂದೊಡನೆಯೇ ಪಶ್ಚಿಮಬಂಗಾಲದ ಪೂರ್ವ ಜಾದವಪುರ ಪೋಲೀಸರು ಅವರನ್ನು ಬಂಧಿಸಿದರು. ಇವರು ಮಾಡಿದ ಮಹಾನ್ ಅಪರಾಧವೆಂದರೆ ಮಹತಾ ಬ್ಯಾನರ್ಜಿ ಬಗ್ಗೆ ಬಂದಿದ್ದ ಆ ವ್ಯಂಗ್ಯಚಿತ್ರಗಳನ್ನು ತಮಾಷೆಗಾಗಿ ಇಂಟರ್‌ನೆಟ್‌ಗೆ ತುಂಬಿಸಿ ತಮ್ಮ ಹೌಸಿಂಗ್ ಸೊಸೈಟಿಯ 25 ಜನ ಮಿತ್ರರಿಗೆ ಫಾರ್ವರ್ಡ್ ಮಾಡಿದ್ದು. ಇದಕ್ಕೆ ಸೊಸೈಟಿಯ ಇಂಟರ್‌ನೆಟ್ಟನ್ನು ಬಳಸಲು ಎರವಲು ನೀಡಿದ ಆರೋಪದ ಮೇಲೆ 70 ಪ್ರಾಯದ ಸೊಸೈಟಿ ಕಾರ್ಯದರ್ಶಿ ಸುಬ್ರತಾ ಸೇನ್ ಗುಪ್ತಾರನ್ನೂ ಬಂಧಿಸಿ ಹಿಂಸಿಸಿದರು.

ಬಂಧನ – ಬಿಡುಗಡೆ
ಪೋಲೀಸರು ರಾತ್ರಿ ಇಡೀ ಇವರಿಬ್ಬರನ್ನು ಜೈಲಿನಲ್ಲಿಟ್ಟಿದ್ದರು. ಜಾಧವಪುರ ವಿವಿಯ ಈ ಪ್ರಾಧ್ಯಾಪಕನನ್ನು ಬೆದರಿಸಿ ಬಲಾತ್ಕಾರದಿಂದ ’ನಾನು ಸಿಪಿಐ(ಎಮ್)ಬೆಂಬಲಿಗ. ಬೇಕೆಂದೇ ಇಮೈಲ್ ಕಳಿಸಿದೆ’ ಎಂದು ಬರೆಸಿಕೊಂಡರು. ಪ್ರೊಫೆಸರರ ಪತ್ನಿ ಕೊಲ್ಕತ್ತಾದ ಗುರುದಾಸ ಕಾಲೇಜಿನಲ್ಲಿ ಪ್ರಾಧ್ಯಾಪಕಿ. ಪೋಲೀಸರೇ ಬಂಧನದ ನಂತರ ಜ್ಯಾಮೀನಿನ ಮೇಲೆ ಬಿಡುಗಡೆ ಮಾಡಬಹುದಾಗಿತ್ತಾದರೂ ಆ ವಿಚಾರ ಬಂಧಿತರಿಗೂ, ಆಕೆಗೂ ತಿಳಿಸಲೇ ಇಲ್ಲ. ’ಈ ಬಂಧನ ಮೂರ್ಖತನದ್ದು. ರಾಜಕೀಯ ಪ್ರೇರಿತ’ ಎಂದು ಆಕ್ರೋಶದಿಂದ ಹೇಳಿದಳು ಆಕೆ. ಅವರ ಮೇಲೆ ಐಪಿಸಿ 500ರ ಪ್ರಕಾರ ಮಹಿಳೆಯ ಮರ್ಯಾದೆ ತೆಗೆದದ್ದು, ಮಾನನಷ್ಟ ಮತ್ತು ಇಮೈಲ್ ಹ್ಯಾಕಿಂಗ್ ಆರೋಪಗಳನ್ನು ಹೊರಿಸಿದ್ದರು. ಮರುದಿನವೇ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ತಲಾ ರೂ.500/-ರ ಜ್ಯಾಮೀನಿನ ಮೇಲೆ ಅವರಿಗೆ ಬಿಡುಗಡೆಯಾಯಿತು.

ಯಾರೂ ನಗಾಡಬಾರದು
ಈ ಬಂಧನ ನಿರಂಕುಶಾಧಿಕಾರದ ದ್ಯೋತಕ ಎಂದು ರಾಜ್ಯಾದ್ಯಂತ ಬೊಬ್ಬೆ ಎದ್ದಿತು. ‘ಅಪರಾಧ ಮಾಡಿದವರು ಬಂಧನಕ್ಕೊಳಗಾಗುತ್ತಾರೆ. ಅಂಥವರನ್ನು ಸಹಿಸಲಾಗದು’ ಎಂದು ಗುಡುಗಿದಳು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ‘ಅವರು ಅಧಿಕಾರದಲ್ಲಿದ್ದ 32 ವರ್ಷಗಳ ಕಾಲ ಏನೂ ಕೆಲಸ ಮಾಡಲಿಲ್ಲ. ಈಗ ನನ್ನ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಮಾಡುತ್ತಿದ್ದಾರೆ. ಅಪರಾಧ ಮಾಡುತ್ತಾರೆ. ಬಂಧನವಾದರೆ ಚಾನಲ್‌ಗಳಲ್ಲಿ ಬೊಬ್ಬೆ ಹೊಡೆಯುತ್ತಾರೆ’ ಎಂದು ನಿಂದಿಸಿದಳು ದೀದಿ. ರಾಜ್ಯದ ಕಾರ್ಮಿಕ ಮಂತ್ರಿ ಪೂರ್ಣೇಂದುಬೋಸ್ ಬ್ಯಾನರ್ಜಿಗೆ ಅವಮಾನ ಮಾಡುವ ಪ್ರಯತ್ನ ನಡೆದಿದೆ. ಪೋಲೀಸರು ಏನು ಮಾಡಬೇಕೋ ಹಾಗೆ ಮಾಡಿದ್ದಾರೆ’ ಎಂದು ಬಂಧನವನ್ನು ಬೆಂಬಲಿಸಿದ. ಆದರೆ ತೃಣಮೂಲ ಕಾಂಗ್ರೆಸಿನ ಬಂಡಾಯ ಎಂಪಿ ಕಬೀರ್ ಸುಮನ್ ಮಾತ್ರ ‘ನನಗೂ ಈ ಕಾರ್ಟೂನ್ ಬಂದಿದೆ. ಅದು ಸೈಬರ್ ಅಪರಾಧ ಹೇಗಾದೀತು? ಒಳ್ಳೇ ಹಾಸ್ಯದಿಂದ ಕೂಡಿದ್ದು ಇದಕ್ಕಾಗಿ ಅವರನ್ನು ಬಂಧಿಸಿದರೆ ನಾಳೆ ನನ್ನನ್ನೂ ಬಂಧಿಸಬಹುದು’ ಎಂದ. ರಾಜ್ಯದ ವಿಪಕ್ಷ ನಾಯಕ ಸೂರ್ಜ್ಯಕಾಂತ್‌ಮಿಶ್ರಾ ‘ಈ ಆಡಳಿತದಲ್ಲಿ ಯಾರೂ ನಗಾಡಲಿಕ್ಕಿಲ್ಲ, ಯಾರೂ ಅಳುವುದಕ್ಕಿಲ್ಲ, ಯಾರೂ ಜೋಕು ಮಾಡಲಿಕ್ಕಿಲ್ಲ. ಈ ಸರಕಾರ ತನ್ನನ್ನು ತಾನೇ ನಗೆಪಾಟಲಿಗೆ ಗುರಿಮಾಡಿಕೊಂಡಿದೆ’ ಎಂದ. ಬಂಗಾಲಿ ನಟ ಕೌಶಿಕ್‌ಸೇನ್ ‘ಬಂಧನದ ಸಂಗತಿ ಕೇಳಿ ನನಗೆ ನಗು ತಡೆಯಲಿಲ್ಲ. ಆದರೆ ನಗುವಂತಹ ಸಂದರ್ಭವೂ ಅಲ್ಲ. ವ್ಯಂಗ್ಯಚಿತ್ರ ಬರೆದರೆ ಬಂಧಿಸುವುದೇ? ಇದು ಮೂರ್ಖತನ, ನಾಚಿಕೆಗೇಡು. ಕಳವಳ ಎನ್ನಿಸುತ್ತದೆ. ನಮ್ಮ ನಾಟಕಗಳನ್ನೂ ನಿಲ್ಲಿಸಿಯಾರು, ಮನೆಗೆ ದಾಳಿಮಾಡಿಯಾರು’ ಎಂದ. ‘ಅದೊಂದು ಕೆಟ್ಟ ಅಭಿರುಚಿಯ ವ್ಯಂಗ್ಯಚಿತ್ರ. ವಿವಿಯು ಶಿಕ್ಷಣದ ಹೆಸರಿನಲ್ಲಿ ಭಾವೀ ಮಾಮೋವಾದಿಗಳ ಸೃಷ್ಠಿಭೂಮಿಯಾಗುತ್ತಿದೆ’ ಎಂದು ದೂರಿದ ಸಾರಿಗೆ ಮಂತ್ರಿ ಮದನ್‌ಮಿತ್ರ. ಬಂಗಾಲದಾದ್ಯಂತ ಪ್ರತಿಭಟನೆ ಹರಿದುಬಂತು. ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ‘ಮಮತಾ ನಿರಂಕುಶಾಧಿಕಾರಿ’ ಎಂದು ಟೀಕಿಸಿದರು. ಜಾಧವಪುರ ವಿವಿಯ ವಿದ್ಯಾರ್ಥಿಗಳು ಆ ಕಾರ್ಟೂನುಗಳ ಪ್ರಿಂಟ್‌ಔಟ್‌ಗಳನ್ನು ತೆಗೆದು ಕ್ಯಾಂಪಸ್‌ನಲ್ಲಿ ಅಂಟಿಸಿದರು. ಪ್ರತಿಭಟನಾ ಪೋಸ್ಟರ್ ಪ್ರದರ್ಶಿಸಿದರು. ವಿವಿಯ ಪ್ರಾಧ್ಯಾಪಕರ ಸಂಘ ‘ಇದು ಶಿಕ್ಷಣದ ಮೇಲಿನ ಪ್ರಹಾರ’ ಎಂದು ಪ್ರತಿಭಟಿಸಿತು. ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಪ್ರತಿಕ್ರಿಯೆ ನೀಡುತ್ತಾ ‘ಹೀಗೆ ನನ್ನ ಮೇಲೆ ಹಾಸ್ಯ ಮಾಡಿ ವ್ಯಂಗ್ಯಚಿತ್ರ ರಚಿಸಿದವರನ್ನೆಲ್ಲಾ ನಾನು ಬಂಧಿಸುತ್ತಾ ಹೋದರೆ ನಮ್ಮ ರಾಜ್ಯದ ಜೈಲುಗಳೇ ಸಾಕಾಗುವುದಿಲ್ಲ’ ಎಂದರು. (ಕುಂದಾಪ್ರ ಡಾಟ್ ಕಾಂ ಅಂಕಣ)

ಅಕ್ರಮ ಬಂಧನಕ್ಕೆ ರೂ.50 ಸಾವಿರ ದಂಡ !
ಪ್ರಕರಣ ಇಲ್ಲಿಗೇ ನಿಲ್ಲಲಿಲ್ಲ. ಪಶ್ಚಿಮಬಂಗಾಳದ ಮಾನವ ಹಕ್ಕು ಆಯೋಗದ ಅಧ್ಯಕ್ಷರು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಅಶೋಕ್ ಕುಮಾರ್ ಗಂಗೂಲಿ. ಪ್ರಕರಣವನ್ನು ಯಾರ ದೂರೂ ಇಲ್ಲದಿದ್ದರೂ ತಾನಾಗಿಯೇ ಕೈಗೆತ್ತಿಕೊಂಡರು. ಪ್ರಕರಣದ ತನಿಖೆಗೆ ಆದೇಶಿಸಿದರು. ಪ್ರಕರಣದಲ್ಲಿ ಒಳಗೊಂಡ ಕೆಳಹಂತದಿಂದ ಮೇಲುಹಂತದ ತನಕದ ಪೋಲೀಸ್ ಅಧಿಕಾರಿಗಳನ್ನು ವಿಚಾರಣೆ ನಡೆಸಿದರು. ಪೋಲೀಸರು ತಾವು ಸಿಕ್ಕಿಬಿದ್ದೆವೆಂದು ಗೊತ್ತಾದ ನಂತರ ಅವರಿಬ್ಬರನ್ನು ಹಲ್ಲೆಯಿಂದ ರಕ್ಷಿಸಲಿಕ್ಕಾಗಿ ತಮ್ಮ ವಶಕ್ಕೆ ತೆಗೆದುಕೊಂಡೆವು ಎಂದು ಸುಳ್ಳು ಸಾಧಿಸಲು ನೋಡಿದರು. ಆದರೆ ಪೋಲೀಸ್ ದಾಖಲೆಗಳು ಇದಕ್ಕೆ ವಿರುದ್ಧವಾಗಿದ್ದುವು. ಹಲ್ಲೆ ನಡೆಸಿದವರ ಮೇಲೆ ಪ್ರೊಫೆಸರರ ದೂರಿತ್ತು. ಆದರೆ ಪ್ರೊಫೆಸರರ ಮೇಲೆ ದೂರೇ ಇಲ್ಲದೇ ಅವರನ್ನು ಬಂಧಿಸಲಾಗಿತ್ತು. ಹಲ್ಲೆ ನಡೆಸಿದವರನ್ನು ಹಿಡಿಯದೇ ಬಿಡಲಾಗಿತ್ತು. ಇದನ್ನೆಲ್ಲ ಮನಗಂಡ ಮಾನಹಕ್ಕು ಆಯೋಗ ಐತಿಹಾಸಿಕ ತೀರ್ಪು ನೀಡಿತು. ‘ಟೀಕೆ ಮಾಡಿದರೆಂಬ ಕಾರಣಕ್ಕಾಗಿ ಮನೆಗೆ ಬಂದು ಬಂಧಿಸುವ ಕ್ರಮ ಸರಿಯಲ್ಲ. ಇದು ನಿರಂಕುಶಾಧಿಕಾರಕ್ಕೆ ದಾರಿಯಾದೀತು. ಇಂತಹ ದುಃಖಕರ ವಾತಾವರಣವನ್ನು ಕಂಡೂ ನಾವು ಮೂಕಪ್ರೇಕ್ಷಕರಾಗಿರಲು ಸಾಧ್ಯವಿಲ್ಲ’ ಎಂದು ದೀದಿ ಸರಕಾರದ ಮೇಲೆ ಗುಡುಗಿಬಿಟ್ಟರು. ಅಕ್ರಮವಾಗಿ ಬಂಧನ ನಡೆಸಿದ ಪೂರ್ವಜಾಧವಪುರದ ಇಬ್ಬರು ಪೋಲೀಸ್ ಅಧಿಕಾರಿಗಳಾದ ಮಿಲನ್‌ದಾಸ್ ಮತ್ತು ಸಂಜಯ್ ಬಿಸ್ವಾಸ್ ವಿರುದ್ಧ ಕ್ರಮಕೈಗೊಳ್ಳಲು ಆದೇಶಿಸಿದರು. ಇದಕ್ಕಿಂತ ಹೆಚ್ಚಿನದ್ದೆಂದರೆ, ಅಕ್ರಮ ಬಂಧನಕ್ಕಾಗಿ ಪ್ರೊ.ಮಹಾಪಾತ್ರ ಮತ್ತು ಸೆನ್‌ಗುಪ್ತಾರಿಗೆ ಪಶ್ಚಿಮಬಂಗಾಳ ಸರಕಾರ ತಲಾ ರೂ.50,000/- ಪರಿಹಾರ ನೀಡಬೇಕು ಎಂದು ದಿಟ್ಟತನದ ಆಜ್ಞೆ ನೀಡಿದಾಗ, ತಾನೇ ಸರ್ವಾಧಿಕಾರಿ ಎಂದು ಬೀಗುತ್ತಿದ್ದ ಮಮತಾದೀದಿಗೆ ಕಪಾಳಮೋಕ್ಷವಾಯಿತು !

ಸ್ವಾಗತ – ಪ್ರತಿಕ್ರಿಯೆ
ಆಯೋಗದ ಈ ತೀರ್ಪನ್ನು ಸ್ವಾಗತಿಸುತ್ತಾ, ‘ನನ್ನನ್ನು ಬಂಧಿಸಲು ಆದೇಶ ನೀಡಿದವರ ಮೇಲೂ ಕ್ರಮಕೈಗೊಳ್ಳಬೇಕು’ ಎಂದರು ಮಹಾಪಾತ್ರ. ಅವರ ಮೇಲೆ ಹಲ್ಲೆ ನಡೆಸಿದ್ದ ಆರೋಪಕ್ಕಾಗಿ ಅಮಿತ್ ಸರ್ದಾರ್, ಅನೂಪ್ ಮುಖರ್ಜಿ, ಮುಸ್ತಾಫ ಮತ್ತು ನಿಶಿಕಾಂತ ಘೋರೈ ಎಂಬವರನ್ನು ಪೋಲೀಸರು ಬಂಧಿಸಿ ಕೇಸು ದಾಖಲಿಸಿಕೊಂಡರು. ಅವರಲ್ಲಿ ಇಬ್ಬರು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು. ತೀರ್ಪಿನ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಪ್ರೆಸ್‌ಕೌನ್ಸಿಲ್ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ‘ಇದು ನ್ಯೂರೆಂಬರ್ಗ್ ತನಿಖೆಯನ್ನು ನೆನಪಿಸುತ್ತದೆ. ಆ ತನಿಖೆಯಲ್ಲಿ ನಾಝೀ ಸೈನಿಕರು ತಾವು ಹುಕುಂ ಪಾಲಿಸಿದ್ದು. ಹುಕುಂ ಎಂದರೆ ಹುಕುಂ, ಪಾಲಿಸಲೇಬೇಕು ಎಂದು ತಮ್ಮ ಕೃತ್ಯಗಳಿಗೆ ಹಿಟ್ಲರನನ್ನು ತೋರಿಸಿದ್ದರು. ಆದರೆ ಅವರನ್ನು ನೇಣಿಗೇರಿಸಲಾಯಿತು. ಇದರಿಂದ ಇಲ್ಲಿಯ ಪೋಲೀಸರು ಪಾಠ ಕಲಿಯಬೇಕು ಇಲ್ಲವಾದರೆ ಅವರಿಗೂ ಅದೇ ಗತಿ ಬಂದೀತು’ ಎಂದು ಎಚ್ಚರಿಸಿದರು. ಆಯೋಗದಲ್ಲಿದ್ದ ಇನ್ನಿಬ್ಬರು ಸದಸ್ಯರುಗಳಾದ ನ್ಯಾಯಮೂರ್ತಿ ಎನ್‌ಸಿ ಸಿಲ್ ಮತ್ತು ಎಸ್‌ಎನ್ ರೋಯ್ ತೀರ್ಪಿಗೆ ಸಹಮತ ವ್ಯಕ್ತಪಡಿಸಿದ್ದರು.

ರಾಜಕೀಯ ಕಾರಣವೇ?
ಆದರೆ ಮಹಾಪಾತ್ರ ಮತ್ತು ಸೇನ್ ಗುಪ್ತರ ಬಂಧನದ ಹಿಂದೆ ವ್ಯಂಗ್ಯಚಿತ್ರಕ್ಕಿಂತ ಭಿನ್ನವಾದ ಬೇರೆಯೇ ಕಾರಣವಿದೆ ಎಂದು ಪತ್ರಿಕೆಗಳು ವರದಿ ಮಾಡಿದುವು. ಮಹಾಪಾತ್ರ ವಾಸವಿರುವ ಹೌಸಿಂಗ್ ಸೊಸೈಟಿಯ ಚುನಾಣೆಗೆ ನಿಲ್ಲದಂತೆ ಅವರ ಮೇಲೆ ಒತ್ತಡ ತರಲಾಗಿತ್ತು ಮಾತ್ರವಲ್ಲ ತೃಣಮೂಲ ಕಾಂಗ್ರೆಸ್ ಮೂಲದ ಭ್ರಷ್ಟ ಗುತ್ತಿಗೆದಾರರನ್ನು ಆ ಸೊಸೈಟಿಯ ಆವರಣಕ್ಕೇ ಬರದಂತೆ ಮಹಾಪಾತ್ರ ಮತ್ತು ಸೇನ್ ಗುಪ್ತಾ ತಡೆದಿದ್ದರಂತೆ. ಇದಕ್ಕಾಗಿಯೇ ರಾಜಕೀಯ ಸೇಡಿಗಾಗಿ ಈ ಬಂಧನ ನಡೆದಿತ್ತು ಎನ್ನುತ್ತಾರೆ. ದೀದಿಯೇನೂ ಮಾನವಹಕ್ಕು ಆಯೋಗದ ತೀರ್ಪಿನ ನಂತರ ಸುಮ್ಮನೆ ಕೂಡ್ರಲಿಲ್ಲ. ಎಸ್ಸೆಂಬ್ಲಿ ಆವರಣದಲ್ಲಿ ಜರಗಿದ ವಿಚಾರಗೋಷ್ಠಿಯೊಂದರಲ್ಲಿ ಮಾತನಾಡಿದ ಆಕೆ ‘ನಾವು ಒಬ್ಬನನ್ನು ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಾನೆಂತ ನಂಬಿ ಕರೆತಂದೆವು. ಆದರೆ ಅವನಿಗೆ ತಾನೇನು ಮಾಡುತ್ತಿದ್ದೇನೆ, ತನ್ನ ಮಿತಿ ಏನು ಎಂಬುದೇ ಗೊತ್ತಿರಲಿಲ್ಲ ಎಂಬುದು ತಿಳಿದಿರಲಿಲ್ಲ. ತಾನೊಬ್ಬ ರಾಷ್ಟ್ರಪತಿ ಎಂಬಂತೆ ಈತ ಆದೇಶ ಮಾಡುತ್ತಾನೆ. ನಮ್ಮ ಅಧಿಕಾರಿಗಳನ್ನು ಕರೆಯಿಸಿ 12 ಗಂಟೆ ಕಾಯಿಸುತ್ತಾನೆ’ ಎಂದಳು. ಮತ್ತೂ ಮುಂದುವರಿದು ‘ಆಯೋಗಗಳು ಇರುವುದೇ ಹಣ ಮಾಡಲು, ಮನೆ ಕಟ್ಟಿಕೊಳ್ಳಲು ಮತ್ತು ಕಾರು ಕೊಂಡುಕೊಳ್ಳಲು’ ಎಂದುಬಿಟ್ಟಳು. ನ್ಯಾಯಾಂಗವನ್ನೂ ತರಾಟೆಗೆ ತೆಗೆದುಕೊಂಡ ಮಮತಾ ಬ್ಯಾನರ್ಜಿ ‘ನ್ಯಾಯಾಂಗ ಕೂಡಾ ಭ್ರಷ್ಠಾಚಾರದಿಂದ ತುಂಬಿದೆ, ತೀರ್ಪುಗಳನ್ನು ಕೊಳ್ಳಬಹುದು. ಇದು ಹೇಳಿದ್ದಕ್ಕಾಗಿ ನನ್ನನ್ನು ಜೈಲಿಗೆ ಹಾಕಿದರೂ ಚಿಂತಿಲ್ಲ, ಹೋಗುತ್ತೇನೆ’ ಎಂದು ಸಾರಿದಳು. ಇದು ನ್ಯಾಯಾಂಗ ನಿಂದನೆ ಎಂದು ಬಿಕಾಸ್ ಭಟ್ಟಾಚಾರ್ಜಿ ಎಂಬ ಮಾಜೀ ಮೇಯರ್ ಕೊಲ್ಕತ್ತಾ ಹೈಕೋರ್ಟಿನಲ್ಲಿ ಆಗಸ್ಟ್ 16ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿಬಿಟ್ಟ. ಆದರೆ ಇದಕ್ಕೆಲ್ಲಾ ಹೆದರುವವಳೇ ಬೆಂಕಿ ಕಿಡಿಯಂತಿರುವ ಮಮತಾ ಬ್ಯಾನರ್ಜಿ? (ಕುಂದಾಪ್ರ ಡಾಟ್ ಕಾಂ ಅಂಕಣ)

ಇನ್ನೊಂದು ವ್ಯಂಗ್ಯಚಿತ್ರ
ಇದು ಒಂದು ವ್ಯಂಗ್ಯಚಿತ್ರ ಮಾಲಿಕೆಯ ಕಥೆಯಾದರೆ, ಪಶ್ಚಿಮಬಂಗಾಲದಲ್ಲಿ ಇನ್ನೊಂದು ಘಟನೆ ನಡೆಯಿತು. ಮಿಡ್ನಾಪುರ ಮೆಡಿಕಲ್ ಕಾಲೇಜಿನ ಎಸೋಸಿಯೇಟ್ ಪೊಫೆಸರ್ ಆದ ಡಾ. ಬಿಕ್ರಂ ಸಾಹಾ ಎಂಬಾತ ಕೊತ್ವಾಲ್ ಪೋಲೀಸ್ ಠಾಣೆಗೆ ಒಂದು ದೂರು ನೀಡಿದ. ಪ್ರೊಲೊಯ್ ಮಿತ್ರ ಮತ್ತು ಚಿನ್ಮಯಿ ಎಂಬವರಿಬ್ಬರು ತನ್ನ ಇಮೈಲ್‌ಗೆ ಒಂದು ವ್ಯಂಗ್ಯಚಿತ್ರ ಕಳುಹಿಸಿ ಮಮತಾ ಬ್ಯಾನರ್ಜಿಗೆ ಅವಮಾನ ಮಾಡಿದ್ದಾರೆ, ಕ್ರಮ ಕೈಗೊಳ್ಳಿ ಎಂದ. ಆ ಚಿತ್ರದಲ್ಲಿ ದೀದಿಯ ತಲೆ ಮಾಯ! ಅದರ ಶೀರ್ಷಿಕೆ ’ನಮ್ಮ ಮುಖ್ಯಮಂತ್ರಿ ತಲೆ ಕಳೆದುಕೊಂಡಿದ್ದಾರೆ’. ಇದಕ್ಕೆ ಈ ಪ್ರೊಫೆಸರ್ ತಲೆ ಹಾಳುಮಾಡಿಕೊಂಡು ಕೊಟ್ಟ ದೂರಿಗೆ ಇನ್ನೆಷ್ಟೆಲ್ಲಾ ಬಂಧನಗಳಾದವೋ…

ದೀದಿಯ ದಾದಾಗಿರಿ
ಇದರ ಜತೆಗೆ ದೀದಿಯ ಇನ್ನೊಂದು ದಾದಾಗಿರಿ ಬೆಳಕಿಗೆ ಬಂದಿದೆ. ಪಾರ್ಥೋಸಾರಥಿ ರಾಯ್ ಒಬ್ಬ ವಿಜ್ಞಾನಿ. ಅಮೇರಿಕದಲ್ಲಿದ್ದವ. ಅಲ್ಲಿ ಎರಡು ಕಂಪೆನಿಗಳು ಕೆಲಸಕ್ಕೆ ನೀಡಿದ ಆಹ್ವಾನಗಳನ್ನು ತಿರಸ್ಕರಿಸಿ ತನ್ನ ಜನ್ಮಭೂಮಿಯಲ್ಲಿ ಯುವ ವಿಜ್ಞಾನಿಗಳನ್ನು ಸೃಷ್ಠಿಸಬೇಕೆಂದು ಹಂಬಲ ಇಟ್ಟುಕೊಂಡು ಬಂದವ. ಕೊಲ್ಕತ್ತಾದ ನೊಣದಂಗಾ ಒಂದು ಕೊಳಚೆಗೇರಿ. ಇದನ್ನು ಧ್ವಂಸ ಮಾಡಲು ಸರಕಾರ ಹೊರಟಾಗ ಬಡಜನಗಳ ಪರವಾಗಿ ನಡೆದ ಶಾಂತಿಯುತ ಪ್ರದರ್ಶನದಲ್ಲಿ ಈತ ಪಾಲ್ಗೊಂಡಿದ್ದ. 68 ಜನರೊಂದಿಗೆ ಇವನನ್ನೂ ಬಂಧಿಸಿಬಿಟ್ಟರು ಮಮತಾ ಸರಕಾರದ ಪೋಲೀಸರು. ಇದರಿಂದ ಅವಾಕ್ಕಾದ ವಿಜ್ಞಾನಿಗಳು ಪ್ರಧಾನಿ ಮನಮೋಹನ್‌ಸಿಂಗ್ ತನಕ ದೂರಿತ್ತರು. ಆದರೆ ಏನೂ ಪ್ರಯೋಜನ ಆಗಲಿಲ್ಲ. 10 ದಿನಗಳ ಕಾಲ ಈ ವಿಜ್ಞಾನಿ ಜೈಲಿನಲ್ಲಿ ಕೊಳೆಯಬೇಕಾಯಿತು. ನಂತರ ಅದು ಹೇಗೋ ಜಾಮೀನು ಪಡೆದು ಹೊರಬಂದ. ಇವನಂತಹ ಇನ್ನೂ ಆರು ಜನ ಜೈಲಿನಲ್ಲೇ ಇದ್ದಾರೆ. ’ನಾವು ಈಗ ಇಲ್ಲಿ ಕರಾಳ ದಿನಗಳನ್ನು ಕಾಣುತ್ತಿದ್ದೇವೆ’ ಎಂದು ಹೇಳಿಕೆ ನೀಡಿದ ಹೊರಬಂದಾಗ. ಶಿಲಾದಿತ್ಯ ಎಂಬ ರೈತ ಸಾರ್ವಜನಿಕ ಸಭೆಯಲ್ಲಿ ದೀದಿಗೆ ಒಂದು ಪ್ರಶ್ನೆ ಕೇಳಿದ್ದಕ್ಕೆ ಸಿಟ್ಟಾದ ಮಮತಾ ಆತನ ಬಂಧನಕ್ಕೆ ಕಾರಣಳಾದದ್ದು ಓದಿದ್ದೇವೆ. ಅಧಿಕಾರದ ಅಮಲು ದೀದಿಯ ತಲೆಗೇರಿದೆ ಎಂಬ ಸಾರ್ವತ್ರಿಕ ಆಕ್ರೋಶ ಪಶ್ಚಿಮಬಂಗಾಳದಲ್ಲಿದೆ.

ದೀದಿಯ ’ಪರಿಬೊರ್ತನ್’
ಪತ್ರಿಕೆಗಳ ಮೇಲೂ ಆಕೆ ಹರಿಹಾಯುತ್ತಿದ್ದಾಳೆ. ಪಶ್ಚಿಮಬಂಗಾಳದ ವಾಚನಾಲಯಗಳು ತರಿಸುತ್ತಿದ್ದ ಪತ್ರಿಕೆಗಳ ಮೇಲೂ ದೀದಿಯ ಕೆಂಗಣ್ಣು ಬಿದ್ದಿದೆ. ಇನ್ನು ಮೇಲೆ ಬರೇ ಎಂಟು ಪತ್ರಿಕೆಗಳನ್ನು ತರಿಸಬೇಕೆಂದು ಆದೇಶ ಮಾಡಿದ್ದಾಳೆ. ಅವುಗಳಲ್ಲಿ ಇಂಗ್ಲೀಷ್ ಪತ್ರಿಕೆಗಳು ಒಂದೂ ಇಲ್ಲ ಮಾತ್ರವಲ್ಲ ಅಲ್ಲಿನ ಜನಪ್ರಿಯ ಹಾಗೂ ಶಕ್ತಿಶಾಲಿ ಪತ್ರಿಕೆಗಳಾದ ಆನಂದ ಬಜಾರ್ ಪತ್ರಿಕಾ ಮತ್ತು ಬರ್ತಮಾನ್ ಎಂಬ ಪತ್ರಿಕೆಗಳಿಗೆ ಸ್ಥಾನ ಇಲ್ಲ. ಇದರ ವಿರುದ್ಧ ಬೊಬ್ಬೆ ಎದ್ದಾಗ ಐದು ಬಂಗಾಲಿ ಪತ್ರಿಕೆಗಳನ್ನು ಮತ್ತು ಒಂದು ಇಂಗ್ಲೀಷ್ ಪತ್ರಿಕೆ ಸೇರಿಸುವ ಔದಾರ್ಯ ತೋರಿದ್ದಳು ದೀದಿ. ಸೋಶಿಯಲ್ ನೆಟ್‌ವರ್ಕ್‌ಗಳ ಮೇಲೂ ಅವಳ ವಕ್ರದೃಷ್ಠಿ ಬಿದ್ದಿದೆ. ಪಶ್ಚಿಮಬಂಗಾಲದ ಸಿಐಡಿ ವಿಭಾಗ ಈ ನೆಟ್‌ವರ್ಕ್‌ಗಳಿಂದ ಮಮತಾ ಬ್ಯಾನರ್ಜಿಗೆ ಅವಹೇಳನಕಾರಿಯಾಗಿರುವ ಎಲ್ಲಾ ಚಿತ್ರಗಳನ್ನು ಕಿತ್ತುಹಾಕಬೇಕು ಎಂದೂ, ಅವುಗಳ ಮೂಲ ತಿಳಿಸಬೇಕೆಂದೂ ನೆಟ್‌ವರ್ಕ್ ಸೈಟ್‌ಗಳನ್ನು ಕೇಳಿದೆ. ಅಂದ ಮೇಲೆ ದೀದಿ ತನ್ನ ಕುರಿತಾದ ಕಾರ್ಟೂನ್‌ಗಳಲ್ಲಿ ಹೇಗೆ ಚಿತ್ರಿಸಲಾಗಿದೆಯೋ ಹಾಗೇ ಆಗುತ್ತಿದ್ದಾಳೆ, ಅಂದರೆ ಆಕೆ ಸಜೀವ ಕಾರ್ಟೂನ್ ಆಗಿ ಬಿಟ್ಟಿದ್ದಾಳೆ ಎಂದು ಉದ್ಗರಿಸಿದ್ದಾರೆ ಒಬ್ಬ ಹಿರಿಯ ಪತ್ರಕರ್ತ. ಪರಿಬೊರ್ತನ್ (ಬದಲಾವಣೆ) ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದಾಗ ಇದ್ದ ದೀದಿಯೇ ಬೇರೆ, ಈಗ ಆಗಿರುವ ದೀದಿಯೇ ಬೇರೆ, ಇದು ದೀದಿಯ ದಾದಾಗಿರಿ ಎಂದು ಸರ್ವತ್ರ ಕೂಗೆದ್ದಿತ್ತು.

ಕಾರ್ಟೂನ್ ಕೃಪೆ: ಅಂತರ್ಜಾಲ

[box type=”custom” color=”#ff0547″ bg=”#ffffff” fontsize=”15″ radius=”5″ border=”#1e73be”]Note: Copy / reproduction of published contents of Kundapra.com, without consent is illegal. Such persons will be prosecuted.[/box]

Exit mobile version