ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿ ಜೀವನ ಒಂದು ಸುವರ್ಣಾವಕಾಶವಾಗಿದೆ. ವಿದ್ಯಾರ್ಥಿಗಳು ಸಮಾಜದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಭಂಡಾರ್ಕಾರ್ಸ್ ಪದವಿ ಕಾಲೇಜು ಟ್ರಸ್ಟ್ ಇದರ ಉಪಾಧ್ಯಕ್ಷರಾದ ಕೆ. ಶಾಂತಾರಾಮ ಪ್ರಭು ಕರೆ ನೀಡಿದರು.
ಅವರು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಚಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಸರ್ವತೋಮುಖ ಬೆಳವಣಿಗೆಯನ್ನು ಮಾಡಿಕೊಳ್ಳಲು ಈ ಸಂಸ್ಥೆಯಲ್ಲಿ ಬಹಳ ಅವಕಾಶಗಳಿವೆ. ಇಲ್ಲಿನ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಪಾಠ ಮತ್ತು ಪಾಠೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಅಲ್ಲದೆ ಕಲಿತ ಸಂಸ್ಥೆಯೊಂದಿಗೆ ಅವಿನಾಭಾವ ಸಂಬಂಧ ಬೆಳೆಸಿಕೊಂಡು ಕಾಳಜಿಯನ್ನು ಹೊಂದಿರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ವಹಿಸಿದ್ದರು.
ಪ್ರಾಧ್ಯಾಪಕರಾದ ವಿಜಯಲಕ್ಷ್ಮಿ ಶೆಟ್ಟಿ ಕಾಲೇಜಿನ ಸೌಲಭ್ಯಗಳ, ಗಣೇಶ್ ಕೆ. ಪದವಿ ಅಧ್ಯಯನ ಪಠ್ಯಕ್ರಮ, ನಿಶಾ ಎಮ್. ವಿದ್ಯಾರ್ಥಿ ವೇತನಗಳ ಮಾಹಿತಿ ಮತ್ತು ಮುಕುಂದ ಭಟ್ ಅವರು ಕಂಪ್ಯೂಟರ್ ಆಧಾರಿತ ಹಾಜರಾತಿ ಮತ್ತು ಯು.ಯು.ಸಿ.ಎಮ್.ಎಸ್ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎಮ್. ಗೊಂಡ ಉಪಸ್ಥಿತರಿದ್ದರು.
ಉಪನ್ಯಾಸಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸತ್ಯನಾರಾಯಣ ಸ್ವಾಗತಿಸಿದರು.

