Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನಲ್ಲಿ ದುಬಾರಿ ಬೆಲೆಯ ಕಾರುಗಳಿದ್ದ 360 ಮಂದಿಯ ಬಿಪಿಎಲ್ ಚೀಟಿ ರದ್ದಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿ ತಿಳಿಸಿದರು.

ಅವರು ಇಲ್ಲಿನ ತಾಲೂಕು ಪಂಚಾಯತ್ ನಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದರು. ಆರ್ ಟಿಒದಿಂದ ಲಭಿಸಿದ ಮಾಹಿತಿ ಹಾಗೂ ಪರಿಶೀಲನೆ ಬಳಿಕವೇ ತೆಗೆಯಲಾಗುತ್ತಿದೆ. 15-20 ಲಕ್ಷ ರೂ.ಗಳ ಕಾರುಗಳಿದ್ದವರೂ ಬಿಪಿಎಲ್ ಚೀಟಿ ಹೊಂದಿದ್ದರು ಎಂದರು.

ಪಡಿತರ ಚೀಟಿ ರದ್ದತಿ ಕುರಿತು ಕೋಣಿ ನಾರಾಯಣ ಆಚಾ‌ರ್, ಚಂದ್ರಕಾಂಚನ್ ಮಾತನಾಡಿ, ಅನರ್ಹರ ಪ್ರಕರಣ ಮಾತ್ರ ಪರಿಗಣಿಸಿ, ನೈಜ ಬಡವರ ಪಡಿತರ ಚೀಟಿ ರದ್ದು ಮಾಡಬೇಡಿ, ಅಂಗವಿಕಲರನ್ನು ಕರೆದೊಯ್ಯಲು ವಾಹನ ಇದ್ದರೂ ಬಿಪಿಎಲ್‌ನಿಂದ ತೆಗೆದು ಸಿರಿವಂತರೆನ್ನಬೇಡಿ ಎಂದರು. ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಅಧ್ಯಕ್ಷರು ಸೂಚಿಸಿದರು.

ಅಧ್ಯಕ್ಷತೆ ವಹಿಸಿದ್ದ ಹರಿಪ್ರಸಾದ್ ಶೆಟ್ಟಿ ಕಾನಕ್ಕಿ ಮಾತನಾಡಿ, ಸರಕಾರದ ಗ್ಯಾರಂಟಿ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ರಾಜ್ಯ ಸರಕಾರ ನೀಡುತ್ತಿರುವ ಯೋಜನೆಗಳೆಂದು ತಿಳಿಯಬೇಕು. ಅದಕ್ಕಾಗಿ ವಿವಿಧ ಇಲಾಖೆಗಳು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ಯುವನಿಧಿ ಯೋಜನೆ ಪ್ರಚಾರಕ್ಕೆ ವಿವಿಧ ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಸುವ ಕುರಿತು ಚರ್ಚಿಸಲಾಯಿತು.

ಕೋವಿಡ್ ಸಂದರ್ಭದಲ್ಲಿ ನಿಲ್ಲಿಸಲಾಗಿದ್ದು ಸರಕಾರಿ ಬಸ್‌ಗಳ ಪಟ್ಟಿ ನೀಡಬೇಕು ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರವಿ ಕುಮಾರ್ ಹುಕ್ಕೇರಿ ಹೇಳಿದರು. ಈಚೆಗೆ ತೊಂಬೊಟ್ಟು ಬಸ್ ಪುನರಾರಂಭ ಮಾಡುವಲ್ಲಿಗೆ ಕೋವಿಡ್ ಸಂದರ್ಭ ನಿಲ್ಲಿಸಲಾಗಿದ್ದ ಎಲ್ಲ ಬಸ್ ಗಳೂ ಓಡಾಟ ಆರಂಭಿಸಿದಂತಾಗಿದೆ ಎಂದು ಕೆಎಸ್‌ಆರ್‌ಟಿಸಿ ಸಹಾಯಕ ಸಂಚಾರ ನಿಯಂತ್ರಕ ಬಿ.ಟಿ. ನಾಯ್ಕ ಹೇಳಿದರು.

ಗಂಗೊಳ್ಳಿ ಬಸ್ ಗಳ ಸಮಸ್ಯೆ ನಿವಾರಿಸಿ, ಗಂಗೊಳ್ಳಿ ಬೈಂದೂರು ಬಸ್ ಆರಂಭಿಸಿ ಎಂದು ಝಹೀರ್ ಅಹಮದ್ ಹೇಳಿದರು. ಹೇರಿಕುದ್ರುವಿನಲ್ಲಿ ಇನ್ನೂ ಬಸ್ ಗಳ ನಿಲುಗಡೆಯಾಗುತ್ತಿಲ್ಲ ಎಂದು ಅಭಿಜಿತ್ ಪೂಜಾರಿ ಹೇಳಿದರು.

ಮೈಸೂರು ಕೊಲ್ಲೂರು ಬಸ್ ಪುನರಾರಂಭಕ್ಕೆ ಪ್ರಯತ್ನ ಮುಂದುವರಿಸಬೇಕು ಎಂದು ಅಧ್ಯಕ್ಷ ಕಾನಕ್ಕೆ ಹೇಳಿ, ಶಾಸ್ತ್ರಿ ಸರ್ಕಲ್‌ನಿಂದ ಉಡುಪಿ ಕಡೆಗೆ ಹೋಗುವವರಿಗೆ ಸರಕಾರಿ ಬಸ್ ನಿಲುಗಡೆಗೆ ಸೂಕ್ತ ಸ್ಥಳದಲ್ಲಿ ಫಲಕ ಅಳವಡಿಸಿ ಕ್ರಮ ತೆಗೆದುಕೊಳ್ಳಬೇಕು ಎಂದರು.

ಮುದೂರು, ಕೆರಾಡಿಗೆ ಬಸ್ ಬೇಕು ಎಂದು ಅರುಣ್, ಹಕ್ಕಾಡಿಗೆ ಬಸ್ ಬೇಕು ಎಂದು ಮಂಜು ಕೊಠಾರಿ ಒತ್ತಾಯಿಸಿದರು. ಮೊಳಹಳ್ಳಿ ಬಸ್ ಕುರಿತು ವಾಣಿ ಶೆಟ್ಟಿ ಮಾತನಾಡಿದರು. ಕೊಲ್ಲೂರಿನಲ್ಲಿ ನಿಲುಗಡೆಗೆ ಕೆಎಸ್‌ಆರ್‌ಟಿಸಿಗೂ ಹಣ ವಸೂಲಿ ಮಾಡಲಾಗುತ್ತಿದ್ದು ಕಂಡಕ್ಟರ್ ಕೈಯಿಂದ ಹಣ ನೀಡಲಾಗುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು. ದೇವಸ್ಥಾನ ಸಮಿತಿಗೆ ಪತ್ರ ಬರೆದು, ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿ ಜತೆ ಮಾತನಾಡಲಾಗಿತ್ತು ಎಂದು ಅಧ್ಯಕ್ಷರು ಹೇಳಿದ್ದರು.

ಆಕೇಶಿಯಾ ಮರಗಳಿಂದ ಮೆಸ್ಕಾಂ ಲೈನ್ ಗಳಿಗೆ ಹಾನಿಯಾಗುತ್ತಿದ್ದು ಮಳೆಗಾಲಕ್ಕೆ ಮುನ್ನವೇ ಇವುಗಳ ತೆರವಿಗೆ ಅರಣ್ಯ ಇಲಾಖೆ ಜತೆ ಸಮನ್ವಯ ಸಾಧಿಸಿ ಎಂದು ಅಧ್ಯಕ್ಷರು ಹೇಳಿದರು.

 ಈ ಬಗ್ಗೆ ಸಮಿತಿಯಿಂದ ಇಲಾಖೆಗೆ ಪತ್ರ ಬರೆಯುವುದಾಗಿ ನಿರ್ಣಯಿಸಲಾಯಿತು. ವಿವಿಧ ಇಲಾಖೆಯವರು ಉಪಸ್ಥಿತರಿದ್ದರು. ಯುವನಿಧಿ ಪ್ರಚಾರ ಪತ್ರ ಬಿಡುಗಡೆಗೊಳಿಸಲಾಯಿತು.

ಗ್ಯಾರಂಟಿ ಯೋಜನೆಗಳ ಅನುದಾನ ಬಿಡುಗಡೆಯಾಗಿದ್ದು ಒಟ್ಟು 9.65 ಕೋ.ರೂ. ಅನುದಾನ ಬಿಡುಗಡೆ ಆಗಿದೆ. ಯುವನಿಧಿಯಲ್ಲಿ 1 ಕೋ.ರೂ., ಶಕ್ತಿ ಯೋಜನೆಯಲ್ಲಿ 2.41 ಕೋ.ರೂ., ಗೃಹಜ್ಯೋತಿಯಲ್ಲಿ 4.36 ಕೋ.ರೂ., ಅನ್ನಭಾಗ್ಯದಲ್ಲಿ 2.40 ಕೋ. ರೂ. ಬಿಡುಗಡೆಯಾಗಿದೆ. ಗ್ಯಾರಂಟಿಯಲ್ಲಿ ಯೋಜನೆಯ ಆರಂಭದಿಂದ ಈವರೆಗೆ ತಾಲೂಕಿಗೆ 383.1 ಕೋ.ರೂ. ಅನುದಾನ ಬಂದಿದೆ. ಗೃಹಲಕ್ಷ್ಮಿ ಅನುದಾನ ಜೂನ್ ತಿಂಗಳಲ್ಲಿ ಬಿಡುಗಡೆ ಆಗಿಲ್ಲಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ ಕಾವ್ಯಕ್ಕಿ ಹೇಳಿದ್ದಾರೆ.

Exit mobile version