ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪೋಷಕರು ಮತ್ತು ಶಿಕ್ಷಕರು ಒಂದಾಗಿ ವಿದ್ಯಾರ್ಥಿಗಳ ಬದುಕು ರೂಪಿಸುವುದು ಅಗತ್ಯ. ಪದವಿ ಶಿಕ್ಷಣದ ಸಂದರ್ಭದಲ್ಲಿ ಪೋಷಕರು ಮಕ್ಕಳ ಕುರಿತು ಗಮನಹರಿಸುವುದರೊಂದಿಗೆ ಶಿಕ್ಷಕರ ಜೊತೆ ನಿರಂತರ ಸಂಪರ್ಕವನ್ನಿಟ್ಟುಕೊಳ್ಳುವುದು ಅಗತ್ಯ ಎಂದು ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ ಹೇಳಿದರು.
ಅವರು ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಘಟಕ ಆಯೋಜಿಸಿದ ಪ್ರೇರಣಾ ಶಿಬಿರದ ಭಾಗವಾದ ರಕ್ಷಕ-ಶಿಕ್ಷಕರ ಪೂರ್ವ ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಡಳಿತ ನಿಕಾಯಕರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ ಮಾತನಾಡಿ, ಕಾಲೇಜಿನ ಆಡಳಿತದಲ್ಲಿ ವಿದ್ಯಾರ್ಥಿಗಳ ಮತ್ತು ಪೋಷಕರ ಪಾತ್ರವನ್ನು ತಿಳಿಸಿದರು. ಶೈಕ್ಷಣಿಕ ನಿಕಾಯಕರಾದ ಗಿರಿರಾಜ್ ಭಟ್ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಅರ್ಹತೆಗೆ ಆಂತರಿಕ ಪರೀಕ್ಷೆಗಳು ಹೇಗೆ ಸಹಾಯವಾಗುತ್ತವೆ ಎಂಬುವುದನ್ನು ತಿಳಿಸಿದರು.
ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಪ್ರಸ್ತಾವಿಸಿ, ಸ್ವಾಗತಿಸಿದರು. ಐಕ್ಯೂಎಸಿ ಸಂಯೋಜಕಿ ಹಾಗೂ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ದೀಪಿಕಾ ಜಿ. ವಂದಿಸಿ, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸತೀಶ್ ಶೆಟ್ಟಿ ಹೆಸ್ಕತ್ತೂರು ಕಾರ್ಯಕ್ರಮ ನಿರೂಪಿಸಿದರು.

