Site icon Kundapra.com ಕುಂದಾಪ್ರ ಡಾಟ್ ಕಾಂ

ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಫ್ರೆಶರ್ಸ್ ಡೇ ಕಾರ್ಯಕ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಶ್ರೀ ವೀರರಾಜೇಂದ್ರ ಹೆಗ್ಡೆ ಸಭಾ ಭವನದಲ್ಲಿ ಹೊಸದಾಗಿ ಆಗಮಿಸಿದ ವಿದ್ಯಾರ್ಥಿಗಳಿಗೆ ’ಫ್ರೆಶರ್ಸ್ ಡೇʼ ಕಾರ್ಯಕ್ರಮ ಶುಕ್ರವಾರ ಜರುಗಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸೃಷ್ಟಿ ಇನ್‌ಪೋಟೆಕ್ ಕುಂದಾಪುರ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಆದ ಹರ್ಷವರ್ಧನ ಶೆಟ್ಟಿ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿ, ಹೊಸದಾಗಿ ಕಾಲೇಜಿಗೆ ಸೇರಿದ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಆಚರಿಸುವ ಈ ದಿನದಲ್ಲಿ ವಿದ್ಯಾರ್ಥಿಗಳು ತಮ್ಮ ಮೂರು ವರ್ಷಗಳ ಪದವಿ ಶಿಕ್ಷಣದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಸ್ಪಷ್ಟ ಗುರಿಯೊಂದಿಗೆ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಎದುರಾಗುವ ಸನ್ನಿವೇಶಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.

ಇಂದಿನ ಕೃತಕ ಬುದ್ಧಿಮತ್ತೆ ಯುಗದಲ್ಲಿ ವಿದ್ಯಾರ್ಥಿಗಳು ಸ್ಪಷ್ಟ ಗುರಿ ಹೊಂದಿರಬೇಕು. ಜೊತೆಗೆ ಗುಣಾತ್ಮಕ ಗುಣಗಳನ್ನು ಬೆಳೆಸಿಕೊಂಡು ವಿಷಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿದಾಗ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿ ದೆಶೆಯಲ್ಲಿಯೇ ಪದವಿ ಹಂತದ ವಿದ್ಯಾರ್ಥಿಗಳು ಉದ್ಯೋಗವನ್ನು ಪಡೆದುಕೊಳ್ಳಬೇಕಾದರೆ ಕೃತಜ್ಞತೆ ಮನೋಭಾವ ಪ್ರಾಮಾಣಿಕತೆ, ಗುರಿ, ಕೌಶಲ್ಯತೆ, ಜ್ಞಾನ, ಕಲಿಕೆ, ಗುಣಗಳನ್ನು ರೂಢಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿ ನಿರ್ವಹಿಸಿದರು. ಐ.ಕ್ಯೂ.ಎ.ಸಿ. ಘಟಕದ ಸಂಯೋಜಕರಾದ ಸಂದೀಪ ಕೆ., ಅತಿಥಿಗಳನ್ನು ಪರಿಚಯಿಸಿದರು. ಅಂತಿಮ ಬಿ.ಎ. ವಿದ್ಯಾರ್ಥಿ ಕೀರ್ತನ್ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿ ಕ್ಷೇಮಪಾಲನಾ ಘಟಕದ ಸಂಯೋಜಕರಾದ ಸೂರಜ್ ಕುಮಾರ್ ಶೆಟ್ಟಿ ಬಿ. ಸ್ವಾಗತಿಸಿ, ವಿದ್ಯಾರ್ಥಿ ಸೌಮ್ಯ ವಂದಿಸಿದರು.

Exit mobile version