ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಅ.13: ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಗುಣಗಳನ್ನು ಮೈಗೂಡಿಸಿಕೊಂಡರೆ ಮಾತ್ರ ಎಲ್ಲರನ್ನೂ ಗೌರವಾದರದಿಂದ ಕಾಣಲು ಸಾಧ್ಯವಾಗುತ್ತದೆ. ಎಲ್ಲಾ ಜಾತಿ, ಧರ್ಮಗಳು ಹಾಗೂ ಸಂಸ್ಕೃತಿಯನ್ನು ಗೌರವಿಸುವ ಬಹುತ್ವ ಈ ನೆಲೆದಲ್ಲಿ ಸಾವಿರಾರು ವರ್ಷಗಳಿಂದಲೂ ಇದೆ. ಈ ಬಹುತ್ವದ ನೆಲಗಟ್ಟನ್ನು ಗಟ್ಟಿಗೊಳಿಸುವ ಕಾರ್ಯ ಮುಖ್ಯವಾದದ್ದು ಎಂದು ಡಾ. ಶಿವರಾಮ ಕಾರಂತ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಗಣನಾಥ ಎಕ್ಕಾರು ಹೇಳಿದರು.
ಅವರು ಬುಧವಾರ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ನಡೆದ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಜಾಲ್ಗಿರಿ’ ಕೃತಿಕಾರ ತುಂಬಾಡಿ ರಾಮಯ್ಯ ಅವರಿಗೆ ಪ್ರಶಸ್ತಿ ಪ್ರದಾನಿಸಿ ಮಾತನಾಡಿ, ಸಾಂವಿಧಾನಿಕ ಮೌಲ್ಯ, ಜಾತ್ಯಾತೀತ ಮೌಲ್ಯ ಹಾಗೂ ಮಾನವೀಯ ಮೌಲ್ಯವನ್ನು ಎತ್ತಿಹಿಡಿಯುವ ಕಾರ್ಯ ಇಂದು ಪ್ರಾಮುಖ್ಯವಾದದ್ದು. ತುಂಬಾಡಿ ಅವರ ಕೃತಿಗಳು ಈ ಮೌಲ್ಯಗಳಿಗೆ ಒತ್ತು ನೀಡಿದೆ ಎಂದರು.
ಸಾಂಸ್ಕೃತಿಕ ಚಿಂತಕ, ಪ್ರಶಸ್ತಿ ಸಮಿತಿಯ ತೀರ್ಪುಗಾರರಾದ ಡಾ. ಬಂಜೆರೆ ಜಯಪ್ರಕಾಶ್ ಅವರು ವರ್ಚುವಲ್ ವೇದಿಕೆಯಲ್ಲಿ ಮಾತನಾಡಿ, ತುಂಬಾಡಿ ಅವರ ಕಥನ ಒಂದು ಕಾಲಘಟ್ಟದ ಕಥನ ಮಾತ್ರವಾಗಿರದೇ ಆಲ್ಲಿ ಊರು ಕೇರಿಗಳು ಹಾಗೂ ವ್ಯಕ್ತಿಗಳ ನಿಜ ಬದುಕಿನ ದರ್ಶನವಾಗಿದೆ ಎಂದ ಅವರು, ಇಂತಹ ಕೃತಿಗಳನ್ನು ಪ್ರೋತ್ಸಾಹಿಸುವುದರಿಂದ ಕನ್ನಡದ ಸಾಹಿತ್ಯದ ಬೆಳವಣಿಗೆ ಹಾಗೂ ಅದರ ಸತ್ವವನ್ನು ವಿಸ್ತರಿಸಲು ಕಾರಣವಾಗುತ್ತದೆ ಎಂದರು.
ಪ್ರಶಸ್ತಿ ಸ್ವೀಕರಿಸಿದ ತುಂಬಾಡಿ ರಾಮಯ್ಯ ಅವರು ಮಾತನಾಡಿ, ಜಾತಿಯ ಕಾರಣಕ್ಕೆ ಎದುರಿಸುತ್ತಿದ್ದ ಸವಾಲುಗಳು, ಎಲ್ಲಾ ರೀತಿಯ ವ್ಯಕ್ತಿತ್ವಗಳು ನನ್ನ ಬರವಣಿಗೆ ಕಾರಣವಾಯಿತು. ಎದುರಾದ ವ್ಯಕ್ತಿಗಳೇ ಪಾತ್ರಗಳಾದರು. ಧರ್ಮ, ಜಾತಿ ಕಲಹದ ನಡುವೆ ಯುವ ಪೀಳಿಗೆಯ ಭವಿಷ್ಯದ ಬಗ್ಗೆ ಆತಂಕ ಮೂಡುತ್ತದೆ. ಆದರೆ ಈ ಕ್ಷಣದ ಕಲಹಗಳ ಕೊನೆಗೊಳ್ಳುವ ಭರವಸೆ ಇದೆ ಎಂದರು.
ಡಾ.ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಆಯ್ಕೆ ಸಮಿತಿಯ ಸಂಚಾಲಕರಾದ ಡಾ. ರೇಖಾ ಬನ್ನಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಸ್ತಿಯು ಹದಿನೈದು ಸಾವಿರ ರೂಪಾಯಿ ನಗದು ಮತ್ತು ಬೆಳ್ಳಿಯ ಪ್ರಶಸ್ತಿ ಫಲಕವನ್ನೊಳಗೊಂಡಿದೆ.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯ ಯು.ಎಸ್. ಶೆಣೈ, ಪ್ರಶಸ್ತಿ ಸಮಿತಿಯ ವಸಂತ ಬನ್ನಾಡಿ ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎಂ. ಗೊಂಡ ಸ್ವಾಗತಿಸಿದರು. ಪ್ರಶಸ್ತಿ ಸಮಿತಿಯ ಜಾನಕಿ ಬ್ರಹ್ಮಾವರ ವಂದಿಸಿದರು. ಉಪನ್ಯಾಸಕಿ ಅರ್ಚನಾ ಕಾರ್ಯಕ್ರಮ ನಿರೂಪಿಸಿದರು.

