ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಮೀನುಗಾರರು ತಮ್ಮ ಮೀನುಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳಲು ತಮ್ಮ ಕೆಲಸ ಕಾರ್ಯಗಳ ಜೊತೆಗೆ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಸುರಕ್ಷತಾ ಸಾಧನಗಳನ್ನು ತಪ್ಪದೇ ಬಳಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಆರ್ ಹೆಬ್ಬಾಳ್ಕರ್ ಕರೆ ನೀಡಿದರು.
ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲಾಡಳಿತ ಮತ್ತು ಮೀನುಗಾರಿಕೆ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಮೀನುಗಾರಿಕೆಯಲ್ಲಿ ಜೀವರಕ್ಷಕ ಸಾಧನಗಳ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮೀನುಗಾರಿಕೆಗೆ ತೆರಳುವ ಮೀನುಗಾರರ ಸುರಕ್ಷತೆಗೆ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮಳೆಗಾಲದಲ್ಲಿ ಸಮುದ್ರ ಪ್ರತಿ ದಿನದಿಂದ ದಿನಕ್ಕೆ ಪ್ರಕ್ಷುಬ್ಧ ಗೊಂಡಿರುವ ಸಮಯದಲ್ಲಿ ಮೀನುಗಾರಿಕೆ ಚಟುವಟಿಕೆ ಗಳಿಗೆ ನಿರ್ಭಧ ಹೇರಿರುತ್ತೇವೆ. ಆದರೆ ಸಂಪ್ರದಾಯಿಕ ನಾಡ ದೋಣಿಗಳ ಮೂಲಕ ಮೀನುಗಾರಿಕೆ ಚಟುವಟಿಕೆ ಮಾಡಲು ಅವಕಾಶ ವಿರುತ್ತದೆ. ಮೀನುಗಾರರು ತಮ್ಮ ಜೀವನೋಪಾಯ ನಡೆಸಬೇಕು ಎಂಬ ಹಿನ್ನೆಲೆ, ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೀನುಗಾರಿಕೆಗೆ ತೆರಳುತ್ತಾರೆ. ಅಳಿವೆ ಬಾಗಿಲು ಪ್ರದೇಶಗಳಲ್ಲಿ ಹೆಚ್ಚು ಅಪಾಯಕಾರಿ. ಇಲ್ಲಿ ಹೆಚ್ಚು ದುರ್ಘಟನೆ ಗಳು ನಡೆಯುತ್ತವೆ. ಜಿಲ್ಲೆಯಲ್ಲಿ ಕಳೆದ ಐದು ವರ್ಷದಲ್ಲಿ 140 ಕ್ಕೂ ಹೆಚ್ಚು ಮೀನುಗಾರರು ಪ್ರಾಣ ಕಳೆದುಕೊಂಡಿದ್ದಾರೆ. ಜೀವರಕ್ಷಕ ಸಾಧನೆಗಳ ಬಳಕೆಯಿಂದ ಪ್ರಾಣಾಪಾಯದಿಂದ ಪಾರಾಗಲು ಸಾಧ್ಯ. ಇದಕ್ಕೆ ಪ್ರತಿಯೊಬ್ಬ ಮೀನುಗಾರರು ಮೀನುಗಾರಿಕೆ ಚಟುವಟಿಕೆಗಳನ್ನು ಕೈಗೊಂಡಾಗ ತಪ್ಪದೇ ಬಳಸಬೇಕು ಎಂದರು.
ಜಿಲ್ಲಾಡಳಿತವು ತಮ್ಮ ಕೆಲಸ ಕಾರ್ಯಗಳ ನಡುವೆಯೂ ಮಹಿಳಾ ಕಿಸಾನ್ ಉತ್ಪಾದಕ ಕಂಪನಿಗೆ ತೊಟಗಾರಿಕೆ ಇಲಾಖೆಯ, ತೋಟಗಾರಿಕೆ ಕ್ಷೇತ್ರವನ್ನು ಒಡಂಬಡಿಕೆ ಮೂಲಕ ಕೃಷಿ ಚಟುವಟಿಕೆ ನಡೆಸಲು, ಜನರ ಸುರಕ್ಷತಾ ದೃಷ್ಠಿಯಿಂದ ಅಪರಾಧ ಕೃತ್ಯಗಳು ನಡೆಯದಂತೆ ಕಣ್ಗಾವಲು ಇರಿಸಲು ಶ್ಯೇನ ದೃಷ್ಟಿ ಅಳವಡಿಕೆ, ಮೀನುಗಾರರ ರಕ್ಷಣೆಗಾಗಿ ಮೀನುಗಾರಿಕೆಯಲ್ಲಿ ಜೀವರಕ್ಷಕ ಸಾಧನಗಳ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸುವ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಮುಖೀ ಕಾರ್ಯಗಳನ್ನು ಕೈಗೊಳ್ಳುತ್ತಿದೆ ಎಂದರು.
ವಂಡ್ಸೆ ಗ್ರಾಮ ಪಂಚಾಯತಿಯ ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಯ ಕೆಲಸಗಳ ಜೊತೆಯಲ್ಲಿ ಇಲ್ಲಿಯ ಜನಸಾಮಾನ್ಯರ ಆರೋಗ್ಯ ಸೇವೆಗಳನ್ನು ಒದಗಿಸಲು ಸಮುದಾಯ ಉಪಶಮನ ಆರೋಗ್ಯ ಉಪಕೇಂದ್ರವನ್ನು ತೆರೆಯುವುದರೊಂದಿಗೆ ಅಂಗವಿಕಲರು, ಹಿರಿಯ ನಾಗರಿಕರು, ಹಾಸಿಗೆ ಹಿಡಿದವರು ಸೇರಿದಂತೆ ಮತ್ತಿತರಿಗೆ ಮನೆ ಬಾಗಿಲಿಗೆ ತೆರಳಿ ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವ ಕಾರ್ಯವು ಮೆಚ್ಚುಗೆ ವ್ಯಕ್ತಪಡಿಸುವಂತದ್ದು. ಇದು ಕರ್ನಾಟಕದಲ್ಲೇ ಪ್ರಥಮ ಎಂದ ಅವರು, ಇದರ ಸಮರ್ಪಕ ನಿರ್ವಹಣೆಗೆ ಸರಕಾರದಿಂದ ಅನುದಾನ ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ 98 ಕಿ.ಮೀ ಗೂ ಹೆಚ್ಚು ಕಡಲತೀರ ಹೊಂದಿದ್ದು, 2 ಲಕ್ಷಕ್ಕೂ ಹೆಚ್ಚು ಜನ ಮೀನುಗಾರಿಕಾ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಜಿಲ್ಲೆಯಲ್ಲಿ ಮೀನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು 9328 ಮೋಟಾರೀಕೃತ ಸಾಂಪ್ರದಾಯಿಕ ನಾಡದೋಣಿಗಳು, ಯಾಂತ್ರೀಕೃತ ದೋಣಿಗಳು ಹಾಗೂ ಪಾತಿ ದೋಣಿಗಳೂ ಕಾರ್ಯ ನಿರ್ವಹಿಸುತ್ತಿವೆ. ಮೀನುಗಾರಿಕೆಯ ವೇಳೆ ಅವರು ತಮ್ಮ ಜೀವ ರಕ್ಷಣೆಯೊಂದಿಗೆ ಮೀನುಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಆದರೆ ಕೆಲವೊಂದು ದುರ್ಘಟನೆಗಳಿಂದ ತಮ್ಮ ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳುತ್ತಾರೆ.ಸುರಕ್ಷತಾ ಸಾಧನೆ ಬಳಕೆಯಿಂದ ಇದನ್ನು ತಪ್ಪಿಸಬಹುದು.ಈ ಹಿನ್ನೆಲೆಯಲ್ಲಿ ಅರಿವು ಮೂಡಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಗ್ರಾಮೀಣ ರೈತ ಮಹಿಳೆಯರು ಸ್ವಯಂ ಉದ್ಯೋಗ ಕಂಡು ಸ್ವಾವಲಂಭಿಗಳನ್ನಾಗಿಸಬೇಕೆಂಬ ಉದ್ದೇಶದಿಂದ ವಿವಿಧ ಬಗೆಯ ಜೀವನೋಪಾಯ ಚಟುವಟಿಕೆಗಳಾದ ಕೃಷಿ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ, ಸಾವಯವ ಗೊಬ್ಬರ ತಯಾರಿಕೆ, ನರ್ಸರಿ ಸೇರಿದಂತೆ ಮತ್ತಿತರ ಚಟುವಟಿಕೆಗಳನ್ನು ಪ್ರಾರಂಭಿಸುವ ಉದ್ದೇಶದಿಂದ ದೊಡ್ಡಣಗುಡ್ಡೆಯ 20 ಎಕ್ರೆ ಭೂಮಿಯನ್ನು ಕೃಷಿ ಉತ್ಪಾದನೆ ಹಾಗೂ ಮೌಲ್ಯವರ್ಧನೆ ನಡೆಸಲು ಇಂದು ಒಡಂಬಡಿಕೆ ಮಾಡಿಕೊಡಲಾಗುತ್ತಿದೆ. ಹಾಗೂ ವಂಡ್ಸೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಸಮುದಾಯ ಉಪಶಮನ ಆರೈಕೆ ಯೋಜನೆಯಡಿ ಜನರ ಮನೆ ಬಾಗಿಲಿಗೆ ತೆರಳೀ ಆರೋಗ್ಯ ಸೇವೆಗಳನ್ನು ಒದಗಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಮೀನುಗಾರರಿಗೆ ಸುರಕ್ಷತಾ ಸಾಧನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನಗರಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ಸಂಕಷ್ಟ ಪರಿಹಾರ ನಿಧಿ ಸಮಿತಿಯ ಮದನ್ ಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಮೀನುಗಾರ ಮುಖಂಡರು, ಮೀನುಗಾರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್ ಆರ್ ಸ್ವಾಗತಿಸಿ, ಮಧುಕರ್ ನಿರೂಪಿಸಿ, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಕುಮಾರಸ್ವಾಮಿ ವಂದಿಸಿದರು.

