ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ರಾಜ್ಯದ 4ರಿಂದ 5ಸಾವಿರ ಅಂಗನವಾಡಿಗಳಲ್ಲಿ ಶೀಘ್ರವೇ ಎಲ್‌ಕೆಜಿ/ಯುಕೆಜಿ ತರಗತಿಗಳನ್ನು ಆರಂಭಿಸಲಾಗುವುದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.
ಅವರು ಶುಕ್ರವಾರ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಎಲ್‌ಕೆಜಿ/ಯುಕೆಜಿ ತರಗತಿ ನಡೆಸಲು 10,000 ಅಂಗನವಾಡಿ ಕೇಂದ್ರಗಳನ್ನು ಗುರುತಿಸಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್‌ಜಿ/ಯುಕೆಜಿ ತರಗತಿಗಳನ್ನು ಎಲ್ಲಾ ಕೇಂದ್ರಗಳಿಗೂ ವಿಸ್ತರಿಸಲಾಗುವುದು ಎಂದರು.

ಪಂಚ ಗ್ಯಾರಂಟಿ ಯೋಜನೆಯಿಂದ ನಾಡ ಜನರ ಕಷ್ಟ ಕಾರ್ಪಣ್ಯ ತಗ್ಗಿದೆ. ಘನತೆಯ ಬದುಕು ಕಟ್ಟಿಕೊಳ್ಳಲು ಆಸರೆಯಾಗಿದೆ. ಪ್ರತಿಯೊಬ್ಬ ನಾಗರಿಕನೂ ಸಮಾಜದಲ್ಲಿ ಆತ್ಮಗೌರವದಿಂದ ಬಾಳಲು ಯಾರ ಮುಂದೆಯೂ ಕೈಚಾಚದಂತೆ ಬದುಕಿನ ಪ್ರಾಥಮಿಕ ಅಗತ್ಯವನ್ನು ಪೂರೈಸುತ್ತಿದೆ ಎಂದು ಅವರು ಹೇಳಿದರು.
ಭೂ ಕುಸಿತ ತಡೆಗೆ ಶಾಶ್ವತ ತಡೆಗೋಡೆ ನಿರ್ಮಿಸಲು ಎನ್‌ಡಿಆರ್‌ಎಫ್ ಮಿಟಿ ಗೇಶನ್ ಯೋಜನೆಯಡಿ 30 ಕೋಟಿ ರೂ. ಕಾಮಗಾರಿ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಸಲಾಗಿದೆ. ಸಮುದ್ರ ಕೊರೆತ ತಡೆಗೆ 4.50 ಕೋಟಿ ರೂ. ವೆಚ್ಚದಲ್ಲಿ 10 ತಡೆಗೋಡೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಎಸ್‌ಪಿ ಹರಿರಾಮ್ ಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಉಡುಪಿ ಶಾಸಕ ಯಶಪಾಲ್ ಎ.ಸುವರ್ಣ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಉಪಸ್ಥಿತರಿದ್ದರು