ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ಇಲ್ಲಿನ ಮದರ್ ತೆರೆಸಾ ಶಿಕ್ಷಣ ಸಂಸ್ಥೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿ ಹಾಗೂ ದೇಶಭಕ್ತಿಯಿಂದ ಕೂಡಿದ ಭಾವಭರಿತ ವಾತಾವರಣದಲ್ಲಿ ಆಚರಿಸಲಾಯಿತು.
ಈ ಆಚರಣೆಯ ಮುಖ್ಯ ಅತಿಥಿಯಾಗಿ ಕುಂದಾಪುರ ವೃತ್ತ ನಿರೀಕ್ಷಕರಾದ ಜಯರಾಮ್ ಸಿ. ಗೌಡ ಅವರು ಆಗಮಿಸಿ ಧ್ವಜಾರೋಹಣ ನೆರವೇರಿಸಿದರು.

ಧ್ವಜಾರೋಹಣದ ಬಳಿಕ, ವಿದ್ಯಾರ್ಥಿಗಳಿಂದ ಶಿಸ್ತುಬದ್ಧವಾದ ಪಥಸಂಚಲನ ನಡೆಯಿತು. ಪಥಸಂಚಲನದ ಗೌರವರಕ್ಷೆಯನ್ನು ಧ್ವಜಾರೋಹಣಗೈದ ಜಯರಾಮ್ ಸಿ.ಗೌಡ ಸ್ವೀಕರಿಸಿದರು. ನಂತರ ಅವರು ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಿ, ವಿದ್ಯಾರ್ಥಿಗಳಿಗೆ ದೇಶಭಕ್ತಿಯ ಮೌಲ್ಯಗಳನ್ನು ಅಂಗೀಕರಿಸುವಂತೆ ಪ್ರೇರಣೆಯ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕರು, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಉಪನ್ಯಾಸಕರು, ಶಿಕ್ಷಕರು ಮತ್ತು ಶಿಕ್ಷಕಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಧ್ವಜಾರೋಹಣದ ನಂತರ, ಪೂರ್ವ ಪ್ರಾಥಮಿಕ ಹಾಗೂ ಕಿರಿಯ ಪ್ರಾಥಮಿಕ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ವೇಷಧಾರಣೆ ಮಾಡಿಕೊಂಡು ಏಕಪಾತ್ರಾಭಿನಯವನ್ನು ಅತ್ಯಂತ ಮನೋಜ್ಞವಾಗಿ ಮಾಡಿದರು.
ಅದೇ ರೀತಿಯಲ್ಲಿ, ಕಿರಿಯ ಪ್ರಾಥಮಿಕ ವಿಭಾಗದಿಂದ ಹಿಡಿದು ಪದವಿ ಪೂರ್ವ ವಿಭಾಗದವರೆಗೆ ವಿಭಾಗವಾರು ಒಂದೊಂದು ವಿದ್ಯಾರ್ಥಿಗಳನ್ನು ಒಳಗೊಂಡಂತೆ ತಂಡವನ್ನು ರಚಿಸಿ ಓದುವಿಕೆ, ಬರೆಯುವಿಕೆ, ಭಾಷಣ, ಚಿತ್ರರಚನೆ ಮುಂತಾದ ಸ್ಪರ್ಧೆಗಳನ್ನು ವಿಭಿನ್ನವಾಗಿ ರಿಲೇ ಮಾದರಿಯಲ್ಲಿ ಮಾಡಲಾಯಿತು. ಇದರಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಎಮರಾಲ್ಡ್, ರೂಬಿ, ಸಫಾಯರ್, ಟೋಪಾಜ್ ತಂಡ ಗಳು ಕ್ರಮವಾಗಿ ಪ್ರಥಮ,ದ್ವಿತೀಯ, ತೃತೀಯ, ಚತುರ್ಥ ಸ್ಥಾನವನ್ನು ಪಡೆದುಕೊಂಡರು. ತದನಂತರ ಶಂಕರನಾರಾಯಣ ಗ್ರಾಮ ಪಂಚಾಯಿತ್ ವತಿಯಿಂದ ಒದಗಿಸಲಾದ ಸಿಹಿತಿಂಡಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಮಕ್ಕಳ ಉತ್ಸಾಹ, ಶಿಕ್ಷಕರ ಮಾರ್ಗದರ್ಶನ ಮತ್ತು ಆಡಳಿತ ಮಂಡಳಿಯ ನೆರವಿನಿಂದ 79ನೇ ಸ್ವಾತಂತ್ರ್ಯ ಮಹೋತ್ಸವ ಯಶಸ್ವಿಯಾಗಿ ನೆರವೇರಿತು.