ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ ಆದಿವಾಸಿ ಜೀವನ ಶಿಕ್ಷಣ ಕೇಂದ್ರ ಪೆರ್ನಾಲ್ ನಲ್ಲಿ ಕಾಪು ತಾಲೂಕು ಮಟ್ಟದ ಸಮುದಾಯದ ಯುವಜನತೆಗೆ ಸಾಮಾಜಿಕ ಭದ್ರತಾ ಯೋಜನೆಗಳು ಹಾಗೂ ಮೂಲಭೂತ ದಾಖಲಾತಿಗಳಿಗೆ ಸಂಬಂಧಿಸಿದ ಒಂದು ದಿನದ ತರಬೇತಿ ಕಾರ್ಯಗಾರ ನಡೆಯಿತು.
ಕಾಪು ತಾಲೂಕು ತಹಶೀಲ್ದಾರರಾದ ಪ್ರತಿಭಾ ಅವರು ತರಬೇತಿಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಭಾರತ ದೇಶದ ಪ್ರಜೆಗಳಾಗಿ ಪ್ರತಿಯೊಬ್ಬ ವ್ಯಕ್ತಿಯು ಮೂಲಭೂತ ದಾಖಲಾತಿಗಳನ್ನು ಹೊಂದುವುದು ಅತ್ಯವಶ್ಯಕ. ಆರ್ಥಿಕವಾಗಿ ಹಿಂದುಳಿದ ಸಮುದಾಯವನ್ನು ಸರ್ಕಾರದ ಬೇರೆ ಬೇರೆ ಇಲಾಖೆಗಳ ಮುಖಾಂತರ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಸಂದರ್ಭದಲ್ಲಿ ಯೋಜನೆಗಳನ್ನು ಪಡೆಯಲು ಆವಶ್ಯಕ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಇವೆಲ್ಲವನ್ನು ಪಡೆಯಲು ಶಿಕ್ಷಣ ಹಾಗೂ ತರಬೇತಿಗಳು ಮುಖ್ಯ. ಜ್ಞಾನವೇ ಶಕ್ತಿ ಜ್ಞಾನ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಂಡಾಗ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದರು.
ನಂತರ ಗ್ರಾಮ ಸಹಾಯಕರಾದ ಶ್ರೀನಿವಾಸ್ ಅವರು ಕಂದಾಯ ಇಲಾಖೆಯಲ್ಲಿ ಸಿಗುವಂತಹ ಯೋಜನೆಗಳು ವಿವಿಧ ಪಿಂಚಣಿಗಳು ಹಾಗೂ ಭೂಮಿಯ ಖಾತಾ ಬದಲಾವಣೆ ದಾಖಲಾತಿಗಳು ಇದಕ್ಕೆ ಸಂಬಂಧಿಸಿ ಅರ್ಜಿ ಸಲ್ಲಿಸುವ ವಿಧಾನಗಳು ಸಲ್ಲಿಸಬೇಕಾಗಿರುವ ದಾಖಲೆಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿನಯ ಅಡ್ವೇ ಮತ್ತು ಕಾಪು ಸಂಘದ ಅಧ್ಯಕ್ಷರಾದ ಶೇಖರ ಕಾಪು ಉಪಸ್ಥಿತರಿದ್ದರು. ಐವತ್ತಕ್ಕೂ ಅಧಿಕ ಮಂದಿ ಸಮುದಾಯ ಭಾಂಧವರು ಭಾಗವಹಿಸಿದ್ದರು.
ಒಕ್ಕೂಟದ ಸಂಯೋಜಕರಾದ ಪುತ್ರನ್ ಹೆಬ್ರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನರಸಿಂಹ ಪೆರ್ಡೂರು ಧನ್ಯವಾದ ಗೈದರು.

