ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಬುಧವಾರದಂದು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಪ್ರಯುಕ್ತ ಕುಂದಾಪುರ ತಾಲೂಕು ಮಟ್ಟದ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳ ಅಂತರ್ ಕಾಲೇಜು ಕುಂದಗನ್ನಡ ಮತ್ತು ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಯ ಉದ್ದೇಶದಿಂದ ಚೆನ್ನಿಮಣಿ 2025 – ಎಲ್ಲಾ ಒಂದ್ ಗಳ್ಗಿ ಬನಿ’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಮಾಜಿ ಸಂಸದರು, ಕುಂದಗನ್ನಡ ಅಧ್ಯಯನ ಪೀಠದ ಸದಸ್ಯರಾದ ಕೆ. ಜಯಪ್ರಕಾಶ ಹೆಗ್ಡೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಇಂದು ಸರಕಾರ ಮಟ್ಟದಲ್ಲಿ ಕುಂದಾಪ್ರ ಕನ್ನಡ ಅಭಿವೃದ್ಧಿಗೆ ಪ್ರೋತ್ಸಾಹ ದೊರಕಿದ್ದು ಈ ನಿಟ್ಟಿನಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದಲ್ಲಿ ಕುಂದಗನ್ನಡ ಅಭಿವೃದ್ಧಿಗೆ ಪೂರಕ ಕ್ರಮ ಕೈಗೊಳ್ಳಲಾಗುತ್ತಿದ್ದು ಕಾಲೇಜು ಮಟ್ಟದಲ್ಲಿ ಹಮ್ಮಿಕೊಂಡ ಇಂತಹ ಕಾರ್ಯಕ್ರಮಗಳ ಬಗ್ಗೆ ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲ ಸಚಿವರಾದ ರಾಜು ಮೊಗವೀರ ಕಾರ್ಯಕ್ರಮದ ಕುರಿತು ಯಾವುದೇ ಒಂದು ಭಾಷೆ ಕಲಿಯುವಾಗ ಅದರ ಹಿನ್ನೆಲೆಯನ್ನು ಅರ್ಥೈಸಿಕೊಂಡರೆ ಅದರ ಮೂಲ ತಿಳಿಯಬಹುದು ಮತ್ತು ದೈನಂದಿನ ಜೀವನದಲ್ಲಿ ಶಬ್ದಗಳ ಬಳಕೆ ಮಾಡಿದಾಗ ಮಾತ್ರ ಒಂದು ಭಾಷೆ ಉಳಿಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಹಾರ್ದಳ್ಳಿ ಮಂಡಳ್ಳಿ ಶಾಲೆ ಶಿಕ್ಷಕರಾದ ಡಾ. ಗಿರೀಶ ಎಂ. ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ವಿಶ್ವಸ್ಥ ಮಂಡಳಿಯ ಸದಸ್ಯರಾದ ಅನುಪಮ ಎಸ್. ಶೆಟ್ಟಿ ನಿರ್ವಹಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿ ಸ್ವಾಗತಿಸಿ, ಇತಿಹಾಸ ಉಪನ್ಯಾಸಕರುಗಳಾದ ರಾಘವೇಂದ್ರ ಶೆಟ್ಟಿ ಮತ್ತು ಆಶಾ ಕಾರ್ಯಕ್ರಮ ನಿರೂಪಿಸಿ, ಐಕ್ಯೂಎಸಿ ಘಟಕ ಸಂಯೋಜಕರಾದ ಸಂದೀಪ ಕೆ. ಧನ್ಯವಾದ ಗೈದರು.

