ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಮತ್ತು ಶ್ರೀ ಸಿದ್ಧಿಶೈಕ್ಷಣಿಕ ಪ್ರತಿಷ್ಠಾನ, ಹಟ್ಟಿಯಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ವರ್ಷಂಪ್ರತಿ ನಡೆಯುವಂತೆ ಈ ವರ್ಷವೂ ಸಹ ತಾಲೂಕು ಮಟ್ಟದ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾಸ್ಪರ್ಧೆಗಳು ಗುರುವಾರ ಜರುಗಿದವು.
ಕುಂದಾಪುರ ಮತ್ತು ಬೈಂದೂರು ತಾಲೂಕಿಗೊಳಪಟ್ಟ ಸುಮಾರು 20ಕ್ಕೂ ಹೆಚ್ಚು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 1000ಕ್ಕೂ ಹೆಚ್ಚು ಸ್ಪರ್ಧಿಗಳು 22 ಸಾಂಸ್ಕೃತಿಕ, 12 ಕ್ರೀಡಾ ಸ್ಪರ್ಧೆಗಳಲ್ಲಿ ತಮ್ಮ ಕರಾಮತ್ತನ್ನು ಪ್ರದರ್ಶಿಸಿದರು.
ವೇದಮೂರ್ತಿ ರಾಮಚಂದ್ರ ಭಟ್ಟರ ಧರ್ಮಪತ್ನಿಯವರಾದ ರಮಾದೇವಿ ಆರ್ ಭಟ್ ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಮುಂಜಾನೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಹಟ್ಟಿಅಂಗಡಿಯ ಕಾರ್ಯದರ್ಶಿಗಳು, ಶಾಲಾ ಪ್ರಾಂಶುಪಾಲರೂ ಆದ ಶರಣ ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, 28 ವರ್ಷಗಳಿಂದ ನಡೆದು ಬರುತ್ತಿರುವ ಈ ಕಾರ್ಯಕ್ರಮವನ್ನು ದಿವಂಗತ ವೇದಮೂರ್ತಿ ರಾಮಚಂದ್ರ ಭಟ್ಟರು ಆರಂಭಿಸಿದ್ದರು. ಶ್ರೀ ಸಿದ್ಧಿವಿನಾಯಕ ದೇವಸ್ಥಾನವು ಧಾರ್ಮಿಕ ಕಾರ್ಯಕ್ರಮಗಳ ಜೊತೆ ಜೊತೆಗೆ ಸಮಾಜಮುಖಿಯಾದ ಕೆಲಸಗಳನ್ನೂ ನಡೆಸಬೇಕೆಂಬ ಸದುದ್ದೇಶದಿಂದ ಆರಂಭವಾಗಿತ್ತು. ಇಂತಹ ಸ್ಪರ್ಧೆಗಳಿಂದ ನಮ್ಮ ತಾಲೂಕಿನ ಹೊಸ ಹೊಸ ಪ್ರತಿಭೆಗಳು ಬೆಳಗುತ್ತಿವೆ ಎಂಬುದು ನಾವು ಕಂಡು ಕೊಂಡ ಸತ್ಯ. ಎನ್ನುತ್ತಾ ಶಾಲೆ ನಡೆದು ಬಂದ ಹಾದಿ, ಸ್ಪರ್ಧೆಗಳಲ್ಲಿ ಸ್ಪರ್ಧಾರ್ಥಿಗಳು ಅನುಸರಿಸಲೇ ಬೇಕಾದ ರೀತಿ ನೀತಿಗಳನ್ನು ತಿಳಿಸಿದರು.
ಜಿ. ಎಮ್ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಬ್ರಹ್ಮಾವರದ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷರಾದ ಶ್ರೀ ಪ್ರಕಾಶ ಚಂದ್ರ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ ಸ್ಪರ್ಧೆಗಳು ನಮಗೆ ನಾವೆಲ್ಲ ಒಂದು ಎಂಬ ಭಾವನೆಯ ಶಿಸ್ತನ್ನು ತಂದುಕೊಡುತ್ತವೆ. ಶಿಸ್ತು ಶಿಕ್ಷಕನಂತೆ ಮಾರ್ಗದರ್ಶನವನ್ನು ನೀಡುತ್ತದೆ. ಇಲ್ಲಿ ನಡೆಯುತ್ತಿರುವ ಸ್ಪರ್ಧೆಗಳು ನಮ್ಮ ದೇಶದ ಸಂಸ್ಕೃತಿಯನ್ನು ತಿಳಿಸಿಕೊಡುತ್ತಿವೆ. ಇಲ್ಲಿ ಸೋತರೂ ಭಾರತೀಯ ಸಂಸ್ಕೃತಿಯನ್ನು ತಿಳಿದ ಹೆಮ್ಮೆ ನಿಮಗೆ ದೊರಕುತ್ತದೆ ಎಂದರು.
ಮತ್ತೊರ್ವ ಮುಖ್ಯ ಅತಿಥಿಗಳಾದ ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರಿನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಾಬು ಶೆಟ್ಟಿ ಅವರು ಮಾತನಾಡಿ, ಖಾಸಗಿ ಸಂಸ್ಥೆಗಳು ಈ ರೀತಿಯಲ್ಲಿ ತಾಲೂಕು ಮಟ್ಟದ ಸ್ಪರ್ಧೆಗಳನ್ನು ನಡೆಸಿಕೊಂಡು ಬರುವುದು ವಿರಳ. ಈ ಸಂಸ್ಥೆಯು ನಿರಂತರವಾಗಿ ಪ್ರತಿಯೊಬ್ಬ ಪ್ರತಿಭಾವಂತ ಮಗುವಿಗೂ ಅವಕಾಶವನ್ನು ಒದಗಿಸಿಕೊಡುತ್ತಿದ್ದು, ನಮ್ಮ ತಾಲೂಕಿಗೇ ಹೆಮ್ಮೆಯ ಶಾಲೆಯಾಗಿದೆ. ಎಂದರು. ಹಟ್ಟಿಅಂಗಡಿ ಗ್ರಾಮಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ನಾಗರತ್ನ ದೇವಾಡಿಗ ಮತ್ತು ಜಿ ಎಮ್ ಗ್ಲೋಬಲ್ ಸ್ಕೂಲ್ ಬ್ರಹ್ಮಾವರದ ಪ್ರಾಂಶುಪಾಲರಾದ ಪ್ರಣವ್ ಶೆಟ್ಟಿ ತಮ್ಮ ಮಾತುಗಳ ಮೂಲಕ ಸ್ಪರ್ಧಾರ್ಥಿಗಳನ್ನು ಹುರಿದುಂಬಿಸಿದರು.
ಉದ್ಘಾಟನಾ ಸಮಾರಂಭದ ಘನಾಧ್ಯಕ್ಷರಾದ, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿಗಳಾದ ಎಸ್. ನಾರಾಯಣ ರಾವ್ ಅವರು ಮಾತನಾಡಿ, ಮಕ್ಕಳು ಸ್ವಾಭಿಮಾನಿಗಳಾಗಬೇಕು. ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು. ಸ್ಪರ್ಧೆ ಕ್ರಮಬದ್ಧವಾಗಿ ನಡೆಯಬೇಕು. ಆಗ ಮಕ್ಕಳಿಗೆ ಸೋಲು ಕೂಡ ಗೆಲುವಿನ ಸೋಪಾನವಾಗುವುದು. ಗೆಲುವು ಗೌರವವನ್ನು, ಯಶಸ್ಸನ್ನೂ ತಂದುಕೊಡುವುದು. ಎನ್ನುತ್ತಾ ಅಚ್ಚುಕಟ್ಟಾಗಿ ಈ ಸ್ಪರ್ಧೆಗಳನ್ನು ಶಿಸ್ತಿನಿಂದ ನಡೆಸಿಕೊಂಡು ಬರುತ್ತಿರುವ ಎಲ್ಲಾ ಸಿಬ್ಬಂದಿಗಳಿಂದ ಸಹಿತರಾದ ಶಾಲಾ ಪ್ರಾಂಶುಪಾಲರನ್ನು ಪ್ರಶಂಶಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿ, ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿದ್ವಾನ್ ನಾಗೇಂದ್ರ ಭಟ್ಟರು ವಿದ್ಯೆಯು ವಿನಯವನ್ನು ತಂದುಕೊಡುತ್ತದೆ. 64 ವಿದ್ಯೆಗಳು ಶಾಸ್ತ್ರಗಳಲ್ಲಿ ವರ್ಣಿತವಾಗಿದ್ದು, ಆ ಎಲ್ಲಾ ವಿದ್ಯೆಯೂ ಜೀವನಕ್ಕೆ ಪೂರಕವಾಗಿರುತ್ತದೆ. ಸ್ಪರ್ಧೆಗಳಲ್ಲಿ ತಾವು ತೋರಿದ ಪ್ರತಿಭೆಯನ್ನು ಜೀವನದಲ್ಲೂ ಬೆಳೆಸಿಕೊಳ್ಳಿರಿ. ನಮ್ಮ ತಾಲೂಕು ಸಜ್ಜನರ ಬೀಡಾಗಿ ಬೆಳಗಲಿ ಎಂದು ಹಾರೈಸಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಬೈಂದೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಮಣಿಕಂಠ ಅವರು ಮಾತನಾಡಿ, ಹಿರಿಯರ, ಗುರುಗಳ ಮಾತನ್ನು ಆಲಿಸುವ, ಹಾಗೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನುಡಿಯುವ ಮಕ್ಕಳು ಸಾಧಕರಾಗುವರು. ಜೀವನದಲ್ಲಿ ಶಿಸ್ತು ತುಂಬಾ ಅಗತ್ಯವಾದದ್ದು. ಸ್ಪರ್ಧೆಗಳಲ್ಲಿ ಭಾಗವಹಿಸಲೋಸುಗ ವಿದ್ಯೆ ಕಲಿಯದೆ ಜೀವನದಲ್ಲಿ ಅದನ್ನು ರೂಢಿಸಿಕೊಂಡು ಜೀವನದಲ್ಲೂ ಸ್ವಾವಲಂಬನೆಯನ್ನು ಬೆಳೆಸಿಕೊಳ್ಳಿರಿ ಎಂದು ಸ್ಪರ್ಧಾರ್ಥಿಗಳಿಗೆ ಕಿವಿ ಮಾತನ್ನಾಡಿದರು.
ವಿವಿಧ ಸ್ಪರ್ಧೆಗಳಲ್ಲಿನ ವಿಜೇತರ ಪಟ್ಟಿಯನ್ನು ಸಹಶಿಕ್ಷಕಿಯರಾದ ರಚನಾ ಹಾಗೂ ಶ್ರದ್ಧಾ ನಾಯಕ್ ವಾಚಿಸಿದರು. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧಿಸಿದ ಶ್ರೀ ವೆಂಕಟರಮಣ ಇಂಗ್ಲೀಷ್ ಮೀಡಿಯಂ ಸ್ಕೂಲ್, ಕುಂದಾಪುರ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ವಿಶ್ವವಿನಾಯಕ ಸಿಬಿಎಸ್‌ಇ ಶಾಲೆ, ತೆಕ್ಕಟ್ಟೆ ಈ ಶಾಲೆಗಳಿಗೆ ವಿಶೇಷ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.
ರಮಾದೇವಿ ಆರ್ ಭಟ್, ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಮ್., ಅರವತ್ತಕ್ಕೂ ಅಧಿಕ ಪರಿಣತ ತೀರ್ಪುಗಾರರು ಹಾಗೂ ಶಾಲಾ ಶಿಕ್ಷಕ ಶಿಕ್ಷಕೇತರ ಬಳಗದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮಗಳನ್ನು ವಿದ್ಯಾರ್ಥಿನಿಯರಾದ ರಿಶಿಕಾ ರಾಮ ದೇವಾಡಿಗ ಮತ್ತು ಶ್ರೀನಿಧಿ ಕೊಠಾರಿ ನಿರ್ವಹಿಸಿದರು. ವಿದ್ಯಾರ್ಥಿಗಳಾದ ಶ್ರದ್ಧಾ ಮತ್ತು ಲಲಿತ್ ಪೃಥ್ವಿ ಸ್ವಾಗತವನ್ನು ನಡೆಸಿದರೆ, ವಿದ್ಯಾರ್ಥಿನಿಯರಾದ ಶ್ರೇಯಾ ಮತ್ತು ಶ್ರದ್ಧಾ ಧನ್ಯವಾದವನ್ನು ಸಮರ್ಪಿಸಿದರು.

