Site icon Kundapra.com ಕುಂದಾಪ್ರ ಡಾಟ್ ಕಾಂ

ತೋಟಬೈಲು ರಸ್ತೆಗೆ ತಡೆ ತೆರವುಗೊಳಿಸಿದ ಹಟ್ಟಿಯಂಗಡಿ ಗ್ರಾಮ ಪಂಚಾಯತ್

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಹಟ್ಟಿಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ಯಾನ ಗ್ರಾಮದ ತೋಟಬೈಲು ಪ್ರದೇಶದ ಮಹಾವಿಷ್ಣು ದೇವಸ್ಥಾನಕ್ಕೆ ಹೋಗುವ ಸಂಪರ್ಕ ರಸ್ತೆಯಿಂದ ತೋಟಬೈಲು, ಗಾಣಿಗರಕೇರಿಗೆ ಹೋಗುವ ಅನಾದಿ ಕಾಲದ ಸಾರ್ವಜನಿಕ ಸಂಪರ್ಕ ರಸ್ತೆಯನ್ನು ಸ್ಥಳೀಯ ವ್ಯಕ್ತಿಯೊಬ್ಬರು ಅತಿಕ್ರಮಿಸಿ, ಬಂದ್ ಮಾಡಿದ್ದು, ಸೋಮವಾರದಂದು ಹಟ್ಟಿಯಂಗಡಿ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ಬಂದ್ ಮಾಡಲಾದ ರಸ್ತೆಯನ್ನು ತೆರವುಗೊಳಿಸಿ, ಸಾರ್ವಜನಿಕ ಸಂಪರ್ಕಕ್ಕೆ ಮುಕ್ತಗೊಳಿಸಲಾಯಿತು.

ತೋಟಬೈಲು ಪ್ರದೇಶ, ಗಾಣಿಗರಕೇರಿ, ಪರಿಸರದಲ್ಲಿ 35ಕ್ಕೂ ಹೆಚ್ಚು ಮನೆಗಳಿವೆ.  ಗ್ರಾಮ ಪಂಚಾಯತ್ ಈ ರಸ್ತೆಯನ್ನು ಹಲವು ಬಾರಿ ಅಭಿವೃದ್ಧಿ ಪಡಿಸಿತ್ತು. ಈ ಭಾಗದ ಜನರು, ವಿದ್ಯಾರ್ಥಿಗಳು ಈ ರಸ್ತೆಯ ಮೂಲಕವೇ ಮುಖ್ಯರಸ್ತೆಗೆ ಬರಬೇಕು.  ಮಹಾವಿಷ್ಣು ದೇವಸ್ಥಾನಕ್ಕೆ ಹೋಗುವ ರಸ್ತೆಯಿಂದ ತೋಟಬೈಲು ಪ್ರದೇಶಕ್ಕೆ ಹೋಗುವ ರಸ್ತೆಯನ್ನು ಜಾಗದ ನಕ್ಷೆಯಲ್ಲಿ ಸ್ಪಷ್ಟವಾಗಿ ನಮೊದಿಸಿದರೂ ಕೂಡಾ ಪಕ್ಕದ ಸ್ಥಳದವರು ರಸ್ತೆಯ ಸಂಪರ್ಕವನ್ನು ಎರಡು ಕಡೆಗಳಿಂದ ಬಂದ್ ಮಾಡಿ, ಅತಿಕ್ರಮಿಸಿಕೊಂಡಿದ್ದರು. ಪಂಚಾಯತ್ ಹಾಗೂ ಕಂದಾಯ ಇಲಾಖೆ ಈ ಹಿಂದೆ ಕೂಡಾ ತೆರವು ಗೊಳಿಸಿದ್ದರು. ಆದರೆ ಮತ್ತೆ ಮತ್ತೆ ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡುತ್ತಿದ್ದರು. ಇಂದು ಪೊಲೀಸ್ ಬಂದೋಬಸ್ತಿನಲ್ಲಿ ರಸ್ತೆಯನ್ನು ತೆರವುಗೊಳಿಸಲಾಯಿತು.

ಈ ಸಂದರ್ಭದಲ್ಲಿ ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಗರತ್ನ ದೇವಾಡಿಗ, ಉಪಾಧ್ಯಕ್ಷರಾದ ಪ್ರತಾಪ ಶೆಟ್ಟಿ, ಹಟ್ಟಿಯಂಗಡಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ ಘಾಟೆಕರ್, ಗ್ರಾಮ ಪಂಚಾಯತಿ ಸದಸ್ಯರಾದ ರಾಜೀವ ಶೆಟ್ಟಿ, ವಿಠ್ಠಲ ಶೆಟ್ಟಿ, ಚಂದ್ರ ಮೊಗವೀರ, ಮಂಜುನಾಥ ಜಿ., ಸಂಧ್ಯಾ ಎಸ್.ಶೆಟ್ಟಿ, ಅಮೃತ ಪಿ.ಭಂಡಾರಿ, ರವಿ ಗಾಣಿಗ, ಶಶಿಕುಮಾರ, ದೀಪ, ಸಾಧು, ಲೀಲಾವತಿ ಗಾಣಿಗ, ವಿದ್ಯಾಶ್ರೀ ಮೊಗವೀರ,  ಗ್ರಾಮ ಕರಣಿಕರು, ಗ್ರಾ.ಪಂ. ಮಾಜಿ ಸದಸ್ಯರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

Exit mobile version