Site icon Kundapra.com ಕುಂದಾಪ್ರ ಡಾಟ್ ಕಾಂ

ಬೆಂಗಳೂರು ಮೂಲದ ಮಹಿಳೆ ಕೊಲ್ಲೂರು ಸೌಪರ್ಣಿಕಾ ನದಿ ಬಳಿ ನಾಪತ್ತೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೊಲ್ಲೂರು:
ಬೆಂಗಳೂರು ಮೂಲದ ವಿವಾಹಿತ ಮಹಿಳೆಯೋರ್ವರು ಕೊಲ್ಲೂರಿಗೆ ಆಗಮಿಸಿದ್ದು ಏಕಾಏಕಿ ಸೌಪರ್ಣಿಕಾ ನದಿಯ ಬಳಿ ನಿಗೂಢವಾಗಿ ನಾಪತ್ತೆಯಾದ ಘಟನೆ ನಡೆದಿದೆ.

ನಾಪತ್ತೆಯಾದ ಮಹಿಳೆ ಬೆಂಗಳೂರು ತ್ಯಾಗರಾಜ ನಗರ ನಿವಾಸಿ  ಗೋವಿಂದರಾಜು ಅವರ ಪುತ್ರಿ ವಸುಧಾ ಚಕ್ರವರ್ತಿ (46) ಎಂದು ತಿಳಿದುಬಂದಿದೆ. ಕಾರಿನಲ್ಲಿ ಮೊಬೈಲ್ ಹಾಗೂ ಇನ್ನಿತರ ವಸ್ತುಗಳು ಕಂಡುಬಂದ ಹಿನ್ನೆಲೆಯಲ್ಲಿ ಮೊಬೈಲ್ ಮೂಲಕ ಸಂಪರ್ಕಿಸಿದಾಗ ಈಕೆಯ ವಿಳಾಸ ಪತ್ತೆಯಾಗಿದೆ.

ಅವರು ಆ. 28ರಂದು ಕೊಲ್ಲೂರಿಗೆ ಬಳಿ ಕಾರು ನಿಲ್ಲಿಸಿ ದೇಗುಲಕ್ಕೆ ತೆರಳಿ ಆಂಜನೇಯ ಗರ್ಭಗುಡಿಯಲ್ಲಿ ಕೆಲ ಕಾಲ ಕಳೆದು ವಿವಿಧ  ಕಡೆಗಳಿಗೆ ಸಾಗಿ ಸೌಪರ್ಣಿಕಾ ನದಿಯತ್ತ ಆಗಮಿಸಿದ್ದರು. ಸೌಪರ್ಣಿಕಾ ನದಿ ಬಳಿ ಅಳವಡಿಸಲಾದ ಸಿ.ಸಿ.ಕೆಮರಾದಲ್ಲಿ ಈಕೆ ಈಜಿಕೊಂಡು ಹೋಗುತ್ತಿರುವುದು ಸೆರೆಯಾಗಿದೆ.

ಮುಳುಗುತಜ್ಞ ಈಶ್ವರ ಮಲ್ಪೆ ಹಾಗೂ ಅಗ್ನಿಶಾಮಕ ದಳದವರು ನದಿಯ ವಿವಿಧ ಕಡೆ ನಾಪತ್ತೆಯಾದ ಮಹಿಳೆಯ ಶೋಧ ಕಾರ್ಯ ನಡೆಸಿದರೂ ಶುಕ್ರವಾರ ಸಂಜೆಯ ತನಕ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದೆ.

ನಾಪತ್ತೆಯಾದ ಮಹಿಳೆಯ ಪೋಷಕರು ಹಾಗೂ ಕುಟುಂಬ ಸದಸ್ಯರು ಸುದ್ದಿ ತಿಳಿದ ತಕ್ಷಣ ಕೊಲ್ಲೂರಿಗೆ ಆಗಮಿಸಿದ್ದಾರೆ. ಆಕೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ವಿವಾಹಿತರಾಗಿದ್ದರು ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ವಸುಧಾ ವಿವಿಧ ತೀರ್ಥ ಕ್ಷೇತ್ರ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಒಂಟಿಯಾಗಿ ತೆರಳಿ ಧ್ಯಾನಾಸಕ್ತರಾಗುತ್ತಿದ್ದರು ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. ನಾಪತ್ತೆಯಾದ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆಕಿದಲ್ಲಿ ಕೊಲ್ಲೂರು ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.

Exit mobile version